ಪಣಜಿ:ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಒಂದು ವೇಳೆ ನೀವು ಗೋವಾಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದರೆ, ಕೋವಿಡ್ ವಿರುದ್ಧ ಪೂರ್ಣಪ್ರಮಾಣದಲ್ಲಿ ಲಸಿಕೆ ತೆಗೆದುಕೊಂಡ ಪ್ರಮಾಣ ಪತ್ರ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಕೋವಿಡ್ ಎರಡು ಲಸಿಕೆಗಳನ್ನು ಪಡೆದಿರುವುದನ್ನು ಕಡ್ಡಾಯಗೊಳಿಸಲು ಗೋವಾ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಧಿವೇಶನದ ಬಗ್ಗೆ ಕುಮಾರಸ್ವಾಮಿ ಪತ್ರ : ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ ಎಂದ ಈಶ್ವರಪ್ಪ
ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕೂಡಾ ನೀಡಬೇಕಾದ ಅಗತ್ಯವಿದೆ ಎಂದು ರಾಜ್ಯ ಬಂದರು ಖಾತೆ ಸಚಿವ ಮೈಕೆಲ್ ಲೋಬೋ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಗೋವಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿಕೆಯಾಗುವುದನ್ನು ಕಾಯುತ್ತಿದ್ದೇವೆ. ನಂತರ ಸೂಕ್ತ ತಪಾಸಣೆ ಬಳಿಕ ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡಲು ಮುಕ್ತ ಅವಕಾಶ ಕಲ್ಪಿಸಿಕೊಡುವುದಾಗಿ ಲೋಬೋ ತಿಳಿಸಿದ್ದಾರೆ. ಗೋವಾದಲ್ಲಿ ಪ್ರವಾಸೋದ್ಯಮವನ್ನು ಪುನರಾರಂಭಿಸಿದ ನಂತರ ಪ್ರವಾಸಿಗರು ಮೂರು ತಿಂಗಳವರೆಗೆ ಕೋವಿಡ್ ಎರಡು ಡೋಸ್ ಪಡೆದ ಬಗ್ಗೆ ಹಾಗೂ ಆರ್ ಟಿ ಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.