Advertisement

ರಾಜ್ಯದಲ್ಲಿ ಕಾಂಗ್ರೆಸ್ –ಜೆಡಿಎಸ್ ಎರಡೂ ಬಿಜೆಪಿಗೆ ಸಮಾನ ಶತ್ರುಗಳು: ಸಚಿವ ಡಾ ಅಶ್ವಥ್ ನಾರಾಯಣ್

03:47 PM Jan 28, 2023 | Team Udayavani |

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಬಿಜೆಪಿಗೆ ಸಮಾನ ಶತ್ರುಗಳು ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ ಹೇಳಿದರು. ಈ ಮೂಲಕ ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು‌.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಸಮಾನ ಶತ್ರುಗಳು. ಚುನಾವಣೆ ವಿಚಾರದಲ್ಲಿ ಬಿಜೆಪಿ ಯಾರೊಂದಿಗೂ, ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವುದೇ ಬಿಜೆಪಿಯ ಗುರಿ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದರು.

ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲದ ಕಾರಣ‌ ಮೋದಿ, ಅಮಿತ್ ಶಾ ರನ್ನು ಪದೇ ಪದೇ ಕರೆ ತರುತ್ತಿದ್ದಾರೆಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅಶ್ವಥ್ ನಾರಾಯಣ್, ನಮಗೆ ಮೋದಿ ಅಮಿತ್ ಶಾ ರಂತಹವರು ಇರುವುದರಿಂದಲೇ ಕರೆ ತರುತ್ತಿದ್ದೇವೆ. ಮೋದಿ, ಅಮಿತ್ ಶಾ ರನ್ನು ಸರಿಗಟ್ಟುವ ಸಮರ್ಥ ನಾಯಕರು ಕಾಂಗ್ರೆಸ್ ನಲ್ಲಿಲ್ಲ. ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಗೆ ಮಾಡಲು ಬೇರೆ ಕೆಲಸವಿಲ್ಲ. ಇಬ್ಬರೂ ಪುರುಸೊತ್ತಾಗಿದ್ದಾರೆ. ಹಾಗಾಗಿ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ಧಾರೆ ಎಂದರು.

ಇದನ್ನೂ ಓದಿ:ಯುವಕರು ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು: ಅಮಿತ್ ಶಾ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ವಿವಿಯಲ್ಲಿ ನಡೆದಿರುವ ಅಕ್ರಮದಲ್ಲಿ ನನ್ನದೇನೂ ಪಾತ್ರವಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next