ರಾಜನಂದಗಾಂವ್/ಹೈದರಾಬಾದ್: ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಈ ವಿಧಾನಸಭೆ ಚುನಾವಣೆಯೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ನಡೆಯಲಿದೆ. ಇಲ್ಲಿ ಸಿಎಂ ರಮಣ್ ಸಿಂಗ್ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ವಾಜಪೇಯಿ ಸಂಬಂಧಿ ಕರುಣಾ ಶುಕ್ಲಾ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಹೀಗಾಗ ಎರಡೂ ಪಕ್ಷಗಳೂ ವಾಜಪೇಯಿ ಹೆಸರನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿವೆ. ವಾಜಪೇಯಿ ಸಿದ್ಧಾಂತವನ್ನು ಅನುಸರಿಸುತ್ತಿದ್ದೇನೆ ಎಂದು ರಮಣ್ ಸಿಂಗ್ ಹೇಳುತ್ತಿದ್ದಾರೆ. ಆದರೆ ಅವರ ಸಿದ್ಧಾಂತಕ್ಕೂ ರಮಣ್ ಸಿದ್ಧಾಂತಕ್ಕೂ ಸ್ವಲ್ಪವೂ ಹೋಲಿಕೆಯಾಗುತ್ತಿಲ್ಲ ಎಂದು ಕರುಣಾ ಶುಕ್ಲಾ ಆರೋಪಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಹಂತದ ಮತದಾನಕ್ಕಾಗಿ ಪ್ರಚಾರ ನಡೆಸಲಿದ್ದಾರೆ.
ಬಿಜೆಪಿ 3ನೇ ಪಟ್ಟಿ ಬಿಡುಗಡೆ: ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭೋಪಾಲ ಹಾಗೂ ಇಂದೋರ್‌ನಂತಹ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆ ಮಾಡಿತ್ತು. ಭೋಪಾಲದ ಗೋವಿಂದಪುರದಿಂದ ಕೃಷ್ಣ ಗೌರ್, ಇಂದೋರ್-3 ಇಂದ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಪುತ್ರ ಆಕಾಶ್‌ಗೆ ಟಿಕೆಟ್ ನೀಡಲಾಗಿದೆ. ಶುಕ್ರವಾರವೇ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಕಾಂಗ್ರೆಸ್ ಕೂಡ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ.
ಮೈತ್ರಿ ಫೈನಲ್: ತೆಲಂಗಾಣದಲ್ಲಿ ಡಿ.7ರಂದು ಚುನಾವಣೆ ನಡೆಯಲಿದ್ದು, ಟಿಡಿಪಿ, ಟಿಜೆಎಸ್ ಹಾಗೂ ಸಿಪಿಐ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾತುಕತೆ ಅಂತಿಮಗೊಂಡಿದೆ. 119 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ಬಹಿರಂಗಗೊಳಿಸಿಲ್ಲ.
ಮೋದಿಯಂತೆ ಕಾಣುವ ವ್ಯಕ್ತಿ ಕಾಂಗ್ರೆಸ್‌ನಲ್ಲಿ!
ಛತ್ತೀಸ್‌ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿಯಂತೆಯೇ ಕಾಣುವ ಅಭಿನಂದನ್ ಪಾಠಕ್ ಪಕ್ಷ ಬದಲಿಸಿದ್ದಾರೆ. ಕಳೆದ ತಿಂಗಳಿನವರೆಗೂ ಎನ್‌ಡಿಐ ಮೈತ್ರಿ ಪಕ್ಷ ಆರ್‌ಪಿಐ ಜೊತೆಗೆ ಇದ್ದ ಪಾಠಕ್, ಕಾಂಗ್ರೆಸ್ ಸೇರಿದ್ದಾರೆ. ಮೋದಿಯಂತೆಯೇ ಮಾತನಾಡುವ, ಉಡುಗೆ ತೊಡುವ ಪಾಠಕ್, ನಕ್ಸಲ್ ಬಾಧಿತ ಬಸ್ತಾರ್ ವಲಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. ಇವರು ಘೋಷವಾಕ್ಯ ಅಚ್ಛೇದಿನ್ ನಹೀ ಆಯೇಂಗೆ (ಒಳ್ಳೆಯ ದಿನ ಬರುವುದಿಲ್ಲ)!