Advertisement

ದಕ್ಷಿಣದಲ್ಲೂ ಹುಟ್ಟಿ ಬಂದ “ಸೂರ್ಯ’

12:24 AM May 24, 2019 | Lakshmi GovindaRaj |

ಬೆಂಗಳೂರು: ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಮಲದ “ತೇಜಸ್ಸು ‘ ಪ್ರಕಾಶಿಸಿದೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್‌ ವಿರುದ್ಧ 3.31 ಲಕ್ಷ ಮತಗಳ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.

Advertisement

ಮೊದಲ ಬಾರಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ 739229 ಲಕ್ಷ ಮತಗಳನ್ನು ಪಡೆದು ಗೆಲುವು ದಕ್ಕಿಸಿಕೊಂಡಿದ್ದು, ಕಾಂಗ್ರೆಸ್‌ ಆಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ 408037 ಮತಗಳಿಂದ ಎರಡನೇ ಸ್ಥಾನ ಪಡೆದು ಸೋಲನುಭವಿಸಿದ್ದಾರೆ. 9917 ನೋಟಾ ಮತಗಳು ಚಲಾವಣೆ ಆಗಿದ್ದು, ಮೂರನೇ ಸ್ಥಾನದಲ್ಲಿದೆ.

ಅಚ್ಚರಿಯ ಬೆಳವಣಿಗೆಗಳಲ್ಲಿ ಬಿಜೆಪಿ ತೇಜಸ್ವಿ ಸೂರ್ಯ ಅವರಿಗೆ ಕ್ಷೇತ್ರದ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಗೆಲುವಿನ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು. ಆದರೆ, ಮೊದಲ ಬಾರಿಯೇ ತೇಜಸ್ವಿ ಸೂರ್ಯಗೆ ಭಾರೀ ಮತಗಳ ಉಡುಗೊರೆ ನೀಡಿರುವ ಮತದಾರರು ಸಂಸತ್‌ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ಈ ಬಾರಿ ಸಂಸತ್‌ ಪ್ರವೇಶಿಸುತ್ತಿರುವ ದೇಶದ ಅತ್ಯಂತ ಕಿರಿವಯಸ್ಸಿನ ಸಂಸದರು ಎಂಬ ಹೆಗ್ಗಳಿಕೆಗೂ ತೇಜಸ್ವಿ ಪಾತ್ರರಾಗಲಿದ್ದಾರೆ.

1996ರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ದಿ.ಅನಂತಕುಮಾರ್‌ ಸತತ ಆರು ಬಾರಿ ಗೆಲುವು ಸಾಧಿಸಿದ್ದರು. ಇದೀಗ ತೇಜಸ್ವಿ ಸೂರ್ಯ ಗೆಲುವಿನ ಮೂಲಕ ಕಮಲದ ವಿಜಯ ನಾಗಲೋಟ ಮುಂದುವರಿದಿದೆ.

ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯ ದರ್ಶಿಯಾಗಿದ್ದ ತೇಜಸ್ವಿ ಸೂರ್ಯ ವೈಯಕ್ತಿಕ ವರ್ಚಸ್ಸು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಯಡಿಯೂರಪ್ಪ ಅವರ ಪ್ರಚಾರ. ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್‌ ಅವರ ಪತ್ನಿ ತೇಜಸ್ವಿ ಅನಂತಕುಮಾರ್‌, ಶಾಸಕರಾದ ವಿ.ಸೋಮಣ್ಣ, ಆರ್‌.ಅಶೋಕ್‌, ರವಿಸುಬ್ರಹ್ಮಣ್ಯ ಅವರ ಪ್ರಚಾರ, ತಳಮ ಟ್ಟದಲ್ಲಿ ಕಾರ್ಯಕರ್ತರ ಶ್ರಮ, ಯುವ ಮತದಾರರ ಓಲವು ತೇಜಸ್ವಿ ಗೆಲುವಿಗೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವ ಗೋವಿಂದರಾಜ ನಗರ, ಪದ್ಮನಾಭನಗರ, ಬಸವನಗುಡಿ, ಗೋವಿಂದರಾಜ ನಗರ, ಚಿಕ್ಕಪೇಟೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಾಂಪ್ರದಾಯಿಕ ಮತಗಳು ತೇಜಸ್ವಿಗೆ ಗೆಲುವಿಗೆ ಸಹಕಾರಿಯಾಗಿವೆ. ಪರಿಣಾಮ 3.31 ಲಕ್ಷ ಮತಗಳ ಗೆಲುವು ದಕ್ಕಿದೆ ಎಂದು ಹೇಳಲಾಗುತ್ತಿದೆ.

ಮೋದಿ ಮತ್ತೂಮ್ಮೆ ಪ್ರಧಾನಿ ಮಾಡಲು ಬೆಂಗಳೂರು ಮತ ದಾರರು ದನಿಗೂಡಿಸಿದ್ದಾರೆ. ರಾಷ್ಟ್ರ, ರಾಜ್ಯ ನಾಯಕರ ಜತೆ ನನ್ನ ರಾಜಕೀಯದ ಮೊದಲ ಗುರು ದಿ. ಅನಂತಕುಮಾರ್‌, ಬಿ.ಎನ್‌. ವಿಜಯ್‌ಕಯಮಾರ್‌ ಅವರನ್ನೂ ನೆನೆಯುತ್ತೇನೆ.
-ತೇಜಸ್ವಿಸೂರ್ಯ, ವಿಜೇತ ಅಭ್ಯರ್ಥಿ

ಸಂವಿಧಾನದ ಮೌಲ್ಯಗಳ ಜಾರಿಗೆ ಆಶಿ ಸುವ ಜನರ ಪರ ಹೋರಾಟ ಮಾಡಿ ದ್ದೇನೆ ಹೊರತು, ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸ ಮಾಡಿಲ್ಲ. ಪ್ರಜಾಸತ್ತಾತ್ಮಕ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ
-ಬಿ.ಕೆ ಹರಿಪ್ರಸಾದ್‌, ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ

ಬೆಂಗಳೂರು ದಕ್ಷಿ ಣ (ಬಿಜೆಪಿ)
-ವಿಜೇತರು ತೇಜಸ್ವಿ ಸೂರ್ಯ
-ಪಡೆದ ಮತ 7,39,229
-ಎದುರಾಳಿ ಬಿ.ಕೆ.ಹರಿಪ್ರಸಾದ್‌ (ಕಾಂಗ್ರೆಸ್‌)
-ಪಡೆದ ಮತ 4,08,037
-ಗೆಲುವಿನ ಅಂತರ 3,31,192

ಗೆಲುವಿಗೆ 3 ಕಾರಣ
-ಪ್ರಧಾನಿ ಮೋದಿ ಅಲೆ, ಬಿಜೆಪಿ ಭದ್ರ ಕೋಟೆ
-ಐದೂ ಶಾಸಕರ ಒಗ್ಗಟ್ಟಿನ ಪ್ರಚಾರ, ತಳಮಟ್ಟದ ಕಾರ್ಯಕರ್ತರ ಸಂಘಟನಾ ಹೋರಾಟ
-ತೇಜಸ್ವಿ ವೈಯಕ್ತಿಕ ವರ್ಚಸ್ಸು, ಕೈ ಹಿಡಿದ ಯುವ ಸಮುದಾಯ

ಸೋಲಿಗೆ 3 ಕಾರಣ
-ಅತಿಯಾದ ಆತ್ಮ ವಿಶ್ವಾಸ, ಹೊಂದಾಣಿಕೆಯ ಕೊರತೆ
-ಪ್ರಚಾರಕ್ಕೆ ರಾಜ್ಯ ಸೇರಿದಂತೆ ಕೇಂದ್ರದಿಂದ ನಾಯಕರು ಬರದೇ ಇರುವುದು.
-ದೆಹಲಿ ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ಅಲಭ್ಯವಾಗಿದ್ದು

Advertisement

Udayavani is now on Telegram. Click here to join our channel and stay updated with the latest news.

Next