Advertisement

ಆ ಬಾವಿಯಿಂದ ಮತ್ತೆ ಹುಟ್ಟಿ ಬಂದೆ…

05:55 PM Jun 17, 2019 | mahesh |

ಮಲೆನಾಡಿನ ಹಳ್ಳಿಯ ಮನೆ. ಆಗ ನಾನಿನ್ನೂ ಎರಡನೇ ತರಗತಿ. ನಮ್ಮ ಮನೆಯ ಪಕ್ಕದಲ್ಲಿ ಒಂದು ತೆರೆದ ಬಾವಿ ಇತ್ತು. ಸುಮಾರು 25-30 ಅಡಿಯ ಬಾವಿಯಲ್ಲಿ ಸಣ್ಣ-ಪುಟ್ಟ ಹತ್ತಾರು ಕಪ್ಪೆಗಳಿದ್ದವು.

Advertisement

ನಮ್ಮ ಪಕ್ಕದ ಮನೆಯಿಂದ ನಮ್ಮ ಮನೆಗೆ ಆಟವಾಡಲು ಹುಡುಗನೊಬ್ಬ ಬಂದಿದ್ದ. ಅವನೊಂದಿಗೆ ನಾನು ಬಾವಿಯಲ್ಲಿರುವ ಕಪ್ಪೆಗೆ ಮೇಲಿನಿಂದ ಕಲ್ಲು ಹೊಡೆಯುವ ಕಾಯಕದಲ್ಲಿ ನಿರತನಾಗಿದ್ದೆ. ಕಪ್ಪೆಗೆ ಕಲ್ಲು ಹೊಡೆಯುವ ಭರದಲ್ಲಿ ನಾವು ಬಾವಿಯ ತುತ್ತತುದಿಗೆ ಕೂತಿದ್ದೆವು. ಆ ಬಾವಿ ತೆಗೆದು ಕೆಲವೇ ತಿಂಗಳಾಗಿತ್ತಷ್ಟೇ. ನಮ್ಮ ಮನೆಗೆ ಆಟವಾಡಲು ಬಂದಿದ್ದ ಗುಂಡ ಬಾವಿಯ ತುದಿಗೆ ಕೂತಿದ್ದ ನನ್ನ ಹೆಗಲ ಮೇಲೆ ಕೈ ಹಾಕಿದ ಅಷ್ಟೇ… ಮುಂದೆ ಏನಾಯ್ತು ಎಂಬುದರ ಪರಿವೆಯೇ ಇರಲಿಲ್ಲ. ಆಗ ನನಗೆ ಕೇವಲ ಆಕಾಶದಲ್ಲಿ ತೇಲುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿತ್ತು. ಐದೇ ಸೆಕೆಂಡಿನಲ್ಲಿ ನಾನು ಬಾವಿಯ ಒಳಗಿದ್ದೆ. ಬಾವಿ ಕಡೆಯಿಂದ ಗುಡುಂ ಎಂಬ ಶಬ್ದ ಬಂದಿತ್ತು.

ಅಮ್ಮ ಹೌಹಾರಿ ಬಾವಿಯ ಕಡೆಗೆ ಧಾವಿಸಿ ಬಂದಳು. ಮಾತೃ ಹೃದಯ ಅಲ್ಲವೇ? ಆ ಕ್ಷಣಕ್ಕೆ ನನ್ನ ಮುಖ ಅಮ್ಮನಿಗೆ ಕಾಣದೇ ಇರುತ್ತಿದ್ದರೆ, ಅಮ್ಮನೂ ಬಾವಿಗೆ ಹಾರುತ್ತಿದ್ದಳಂತೆ. ಆದರೆ, ಅಷ್ಟರಲ್ಲಾಗಲೆ ನಾನು ನೀರಿನಿಂದ ತುಸು ಮೇಲಕ್ಕೆ ಇದ್ದ ಕಲ್ಲಿನ ಆಸರೆ ಪಡೆದೆ. ಅಮ್ಮ ನಿಟ್ಟುಸಿರು ಬಿಟ್ಟಳು. ನನ್ನ ಮೇಲಕ್ಕೆತ್ತಲು ಯತ್ನಿಸಿ, ಸೋತಳು. ಕೊನೆಗೆ ಆ ಬಾವಿ ತೆಗೆದ ವ್ಯಕ್ತಿಯ ಮನೆಗೆ ಅಣ್ಣನನ್ನು ಕಳುಹಿಸಿ, ಅವರನ್ನು ಕರೆಸಿದರಂತೆ. ಅವರು ಬಾವಿಗೆ ಇಳಿದು ನನ್ನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ವಿಚಿತ್ರವೆಂದರೆ 25-30 ಅಡಿ ಬಾವಿಗೆ ಬಿದ್ದಿದ್ದರೂ ನನಗೆ ಒಂದು ಸಣ್ಣ ಗಾಯವೂ ಆಗಿರಲಿಲ್ಲ. ಅಂದು ನನ್ನನ್ನು ಕಾಪಾಡಿದ ವ್ಯಕ್ತಿಗೆ ಥ್ಯಾಂಕ್ಸ್‌.

ಪವನ್‌ ಕುಮಾರ್‌, ರಿಪ್ಪನ್‌ಪೇಟೆ

Advertisement

Udayavani is now on Telegram. Click here to join our channel and stay updated with the latest news.

Next