Advertisement

ಬೊರಿವಲಿ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ: ನೇಮ

11:16 AM Jan 05, 2019 | |

 ಮುಂಬಯಿ: ಬೊರಿವಲಿ ಪೂರ್ವದ ರಾಜೇಂದ್ರ ನಗರ, ದತ್ತಪಾಡಾದ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ 51ನೇ ವಾರ್ಷಿಕ ಬ್ರಹ್ಮಬೈದರ್ಕಳ ನೇಮೋತ್ಸವವು ಡಿ. 24 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆಯೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸಾಣೂರು ಸಾಂತಿಂಜ ಜನಾರ್ದನ ಭಟ್‌ ಅವರ ಪೌರೋ ಹಿತ್ಯದಲ್ಲಿ ಗಣಹೋಮ ನಡೆಯಿತು. ಮಧ್ಯಾಹ್ನ ಹೊಟೇಲ್‌ ಉದ್ಯಮಿ, ಸಮಾಜ ಸೇವಕ ಮುಂಡಪ್ಪ ಎಸ್‌. ಪಯ್ಯಡೆ ಅವರ ಸೇವಾರ್ಥವಾಗಿ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿತ್ತು. ಬಳಿಕ ಬ್ರಹ್ಮ ಬೈದರ್ಕಳರುಗಳಿಗೆ ಹೂವಿನ ಸೇವೆ ಹಾಗೂ ದೇವಿಪಾತ್ರಿ ಪ್ರಸಾದ್‌ ಸಾಲ್ಯಾನ್‌ ಕಾರ್ಕಳ ಅವರಿಂದ ದೇವಿ ದರ್ಶನ ನಡೆಯಿತು. ಮಧ್ಯಸ್ಥರಾಗಿ ಶಿರ್ವ ರಮೇಶ್‌, ರಾಕೇಶ್‌ ಶಾಂತಿ ಕಾರ್ಕಳ, ರಾಜು ಪೂಜಾರಿ ಮೂಡಬಿದ್ರೆ ಅವರು ಸಹಕರಿಸಿದರು.

ಅರ್ಚಕರಾಗಿ ಕೇಶವ ಎ. ಬಿ., ಶೈಲೇಶ್‌ ಪೂಜಾರಿ ಸಹಕರಿಸಿದರು. ನೇಮದಲ್ಲಿ ಇರ್ವತ್ತೂರಿನ ಅವಳಿ ಸಹೋದರರಾದ ರಮೇಶ್‌ ಪೂಜಾರಿ, ಉಮೇಶ್‌ ಪೂಜಾರಿ ಪಾತ್ರಿಗಳಾಗಿದ್ದರು.  ಶಿರ್ತಾಡಿ ಸುಂದರ ಅವರ ಮಕ್ಕಳು ನರ್ತನ ಸೇವೆಯಲ್ಲಿ ಪಾಲ್ಗೊಂಡರು. ವಾದ್ಯದಲ್ಲಿ ರಾಮದಾಸ್‌ ಕೋಟ್ಯಾನ್‌ ಮುಂ ಬಯಿ, ಊರಿನ ಬಳಗದವರು ಸಹಕರಿಸಿದರು. 

ಸಾಣೂರು ಸಾಂತಿಂಜ ಜನಾರ್ದನ ಭಟ್‌ ಅವರ ಉಪಸ್ಥಿತಿಯಲ್ಲಿ ಜರಗಿದ ಈ ನೇಮೋತ್ಸವದಲ್ಲಿ ಮುಂಬಯಿ ಮಹಾನಗರದ ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಶ್ರೀ ದುರ್ಗಾಪರಮೇಶ್ವರಿ ಮತ್ತು ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ ಮೊಕ್ತೇಸರ ಸುಮತಿ ಕೆ. ಬಂಗೇರ ಅವರ ಮುಂದಾಳತ್ವದಲ್ಲಿ ಜರಗಿದ ನೇಮೋತ್ಸವದ ಯಶಸ್ಸಿಗೆ ಸಮಿತಿಯ ಅಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಕಾರ್ಯದರ್ಶಿಗಳಾದ ಸದಾನಂದ ಬಿ. ಕೋಟ್ಯಾನ್‌, ವಿಠಲ್‌ ಶೆಟ್ಟಿ ಹಾಗೂ ಸದಸ್ಯರು, ಬಿಲ್ಲವರ ಅಸೋಸಿಯೇಶನ್‌ ಸೇವಾದಳದ ಸದಸ್ಯರು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next