Advertisement

ಬೊರಿವಲಿ ಅಯ್ಯಪ್ಪ ಭಕ್ತವೃಂದ: ಶ್ರೀ ಅಯ್ಯಪ್ಪ ಮಹಾಪೂಜೆ

03:56 PM Dec 04, 2018 | Team Udayavani |

ಮುಂಬಯಿ: ಶ್ರೀ ಅಷ್ಟ ವಿನಾಯಕ ಅಯ್ಯಪ್ಪ ಭಕ್ತವೃಂದ ಬೊರಿವಲಿ ಇದರ 23ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಡಿ. 2ರಂದು ಬೊರಿವಲಿ ಪಶ್ಚಿಮದ ಗೊರೈರೋಡ್‌ ಎಂ. ಎಚ್‌. ವಿ. ಕಾಲನಿಯ ಮೈದಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು.

Advertisement

ಶ್ರೀ ಅಷ್ಟ ವಿನಾಯಕ ಅಯ್ಯಪ್ಪ ಭಕ್ತವೃಂದ ಬೊರಿವಲಿ ಇದರ ವಿಶ್ವನಾಥ ಗುರುಸ್ವಾಮಿ, ಕಣ್ಣನ್‌ ಗುರುಸ್ವಾಮಿ, ಸುರೇಂದ್ರ ಗುರುಸ್ವಾಮಿ ಬೆಳಗಾವಿ ಮತ್ತು ಮಂಜುನಾಥ ರೈ ಗುರುಸ್ವಾಮಿ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮವಾಗಿ ಸಹಸ್ರ ನಾಮಾರ್ಚನೆ, ಪಲ್ಲಪೂಜೆ, ಪಡಿಪೂಜೆ, ಕರ್ಪೂರಾರತಿ, ಅಪರಾಹ್ನ ಮಹಾಪೂಜೆ, ಶರಣು ಘೋಷ, ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.

ಒಂದು ಮಂಡಲದ ಕಠೊರ ವ್ರತದೊಂದಿಗೆ ಮಾಲಾಧಾರಣೆಗೈದ ಅಯ್ಯಪ್ಪ ಸ್ವಾಮಿಗಳು ಶರಣು ಘೋಷದೊಂದಿಗೆ ಪಡಿಪೂಜೆಯ ಜ್ಯೋತಿ ಬೆಳಗಿಸಿ ಒಬ್ಬರಿಗೊಬ್ಬರು ಸ್ವಾಮಿ ಶರಣಂ ಎಂದು ಹೇಳಿ ಕಾಲಿಗೆ ನಮಸ್ಕರಿಸಿದರು. ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಜಯರಾಜ್‌ ನಗರ ಬೊರಿವಲಿ, ಬಂಟ್ಸ್‌ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿ, ಶ್ರೀ ಲಲಿತಾಂಬಾ ಭಜನಾ ಮಂಡಳಿ ಎಂಎಚ್‌ಬಿ ಕಾಲನಿ ಇದರ ಸದಸ್ಯರು  ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ ಸಾಂತಾಕ್ರೂಜ್‌ ಬಿಲ್ಲವರ ಅಸೋಸಿಯೇಶನ್‌ ಸಂಚಾಲಿತ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರುಗಳಿಂದ ಚಕ್ರವ್ಯೂಹ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ನೇತಾರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ದಾನಿಗಳು, ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಶಿಕ್ಷಣ, ವೈದ್ಯಕೀಯ ಹಾಗೂ ಕ್ರೀಡಾ ಕ್ಷೇತ್ರಗಳಿಗೆ ಶ್ರೀ ಅಷ್ಟವಿನಾಯಕ ಅಯ್ಯಪ್ಪ ಭಕ್ತವೃಂದ ಬೊರಿವಲಿ ಕಳೆದ 23 ವರ್ಷಗಳಿಂದ ಮಹತ್ತರವಾದ ಯೋಗದಾನ ನೀಡಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೆರವು ನೀಡಿದೆ. ದುಬಾರಿ ಕಾಯಿಲೆಗಳ ಚಿಕಿತ್ಸೆಗಾಗಿ ಸಹಾಯ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರದ ಮೂಲಕ ರಕ್ತವನ್ನು ಸಂಗ್ರಹಿಸಿ ಅನೇಕರ ರಕ್ತದ ಆವಶ್ಯಕತೆಯನ್ನು ಪೂರೈಸಿದೆ. ಕ್ರಿಕೆಟ್‌, ಫುಟ್ಬಾಲ್‌ ಪಂದ್ಯಾಟಗಳನ್ನು ಆಯೋಜಿಸಿ ಪ್ರತಿಭಾವಂತ ಕ್ರೀಡಾಳುಗಳಿಗೆ ವೇದಿಕೆಯನ್ನು ಕಲ್ಪಿಸಿದೆ. ಅರಸಿನ ಕುಂಕುಮ, ಭಜನೆ ಮೊದಲಾದ ಧಾರ್ಮಿಕ ಭಾವನೆಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡಿರುವುದಲ್ಲದೆ, ಯುವ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಶ್ರಮಿಸುತ್ತಿದೆ.

Advertisement

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next