Advertisement

Crime: ಮಲಗಿದ್ದಾಗ ರಾಡ್‌ನಿಂದ ಹೊಡೆದು ಬೋರ್‌ವೆಲ್‌ ಲಾರಿ ಚಾಲಕನ ಹತ್ಯೆ; 5 ಆರೋಪಿಗಳ ಸೆರೆ

10:51 AM Aug 13, 2024 | Team Udayavani |

ಬೆಂಗಳೂರು: ಅಡುಗೆ ಸರಿಯಾಗಿ ಮಾಡಲ್ಲ, ಕೆಲಸ ಕೂಡ ಜವಾಬ್ದಾರಿಯಿಂದ ಮಾಡಲ್ಲ ಎಂದು ತಮಿಳಿನಲ್ಲಿ ನಿಂದಿಸುತ್ತಿದ್ದ ಬೋರ್‌ವೆಲ್‌ ಲಾರಿ ಚಾಲಕನನ್ನು ಕಬ್ಬಿಣದ ರಾಡ್‌ ಮತ್ತು ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಮಿಳುನಾಡಿನ ತಿರುಚಿ ಮೂಲದ ಸುರೇಶ್‌(47) ಕೊಲೆಯಾದ ಲಾರಿ ಚಾಲಕ. ಕೃತ್ಯ ಎಸಗಿದ ಮಧ್ಯಪ್ರದೇಶದ ಸಹದೇವ್‌ ಅಲಿಯಾಸ್‌ ಬಾಬು (32), ಸುನೀಲ್‌ ನಾಬ್ಡೇ (30), ದಿನೇಶ್‌(31) ಮತ್ತು ಅಲಕೇಶ್‌ (30), ಸಂಜಯ್‌ (28) ಎಂಬವರನ್ನು ಬಂಧಿಸಲಾಗಿದೆ.

ಕೃತ್ಯ ಸಂಬಂಧ ಕೊಲೆಯಾದ ಸುರೇಶ್‌ ಅವರ ಸಂಬಂಧಿ ರವಿಚಂದ್ರನ್‌ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ತಮಿಳುನಾಡಿನ ಸುರೇಶ್‌ ಮತ್ತು ಅವರ ಸಂಬಂಧ ರವಿಚಂದ್ರನ್‌ 3 ತಿಂಗಳಿಂದ ಅಮೃತ್‌ ಬೋರ್‌ವೇಲ್ ಕಲ್ಕಿ ಎಂಟರ್‌ ಪ್ರೈಸಸ್‌ನಲ್ಲಿ ಬೋರ್‌ವೆಲ್‌ ಲಾರಿ ಚಾಲಕ ಹಾಗೂ ಡ್ರಿಲ್ಲರ್‌ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಸಿಂಗಸಂದ್ರದ ಎಇಸಿಎಸ್‌ ಲೇಔಟ್‌ನ ಸೈಟ್‌ವೊಂದರಲ್ಲಿ ಬೋರ್‌ವೆಲ್‌ ಕೊರೆಯಲು ಆರೋಪಿಗಳು, ಸುರೇಶ್‌ ಹಾಗೂ ದೂರುದಾರ ಬಂದಿದ್ದರು. ರಾತ್ರಿಯಾಗಿದ್ದರಿಂದ ಸೋಮವಾರ ಬೋರ್‌ವೆಲ್‌ ಕೊರೆಯೋಣ ಎಂದು ಕೆಲಸ ಸ್ಥಗಿತಗೊಳಿಸಿ ಸೈಟ್‌ನಲ್ಲಿದ್ದ ಶೆಡ್‌ ನಲ್ಲೇ ಉಳಿದುಕೊಂಡಿದ್ದರು. ರಾತ್ರಿ ಆರೋಪಿಗಳ ಪೈಕಿ ಸಹದೇವ್‌ ಅಡುಗೆ ಮಾಡುತ್ತಿದ್ದ. ಆಗ ಸುರೇಶ್‌, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ಕೆಲಸ ಕೂಡ ಜವಾಬ್ದಾರಿಯಿಂದ ಮಾಡಲ್ಲ ಎಂದು ತಮಿಳಿನಲ್ಲಿ ನಿಂದಿಸಿದ್ದಾರೆ.

ಅದರಿಂದ ಕೋಪಗೊಂಡ ಸಹದೇವ್‌, ಸುರೇಶ್‌ ಜತೆ ಜಗಳ ಮಾಡಿಕೊಂಡಿದ್ದಾನೆ. ಬಳಿಕ ಇತರರು ಸಮಾಧಾನ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡಿ, ಶೆಡ್‌ನ‌ಲ್ಲೇ ಮಲಗಿದ್ದಾರೆ ಎಂದು ಪೊಲೀಸರು ಹೇಳಿದರು.

ಸುತ್ತಿಗೆ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ: ಆದರೆ, ತಡರಾತ್ರಿ 11.30ರ ಸುಮಾರಿಗೆ ಸಹದೇವ್‌ ಹಾಗೂ ಇತರರು ಕಬ್ಬಿಣದ ರಾಡ್‌ ಮತ್ತು ಸುತ್ತಿಗೆಯಿಂದ ಸುರೇಶ್‌ನ ಮುಖ, ತಲೆ ಹಾಗೂ ದೇಹದ ಇತರೆ ಭಾಗಕ್ಕೆ ಹೊಡೆದಿದ್ದು, ತೀವ್ರರಕ್ತಸ್ರಾವ ದಿಂದ ಸುರೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲ ಹೊತ್ತಿನ ಬಳಿಕ ರಾಜೇಶ್‌ ಎಂಬಾತ ಸುರೇಶ್‌ ಹತ್ಯೆ ಕಂಡು, ದೂರುದಾರ ರವಿಚಂದ್ರನ್‌ಗೆ ಮಾಹಿತಿ ನೀಡಿದ್ದಾರೆ.

Advertisement

ಈ ಸಂಬಂಧ ದೂರು ದಾಖಲಿಸಿಕೊಂಡು ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ನಂತರ ಅಲ್ಲೇ ಇದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಐವರ ಪೈಕಿ ಯಾರು ಸುರೇಶ್‌ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ತೀವ್ರ ರೀತಿಯಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next