ಶಿರ್ವ: ಇಲ್ಲಿನ ಸಂತ ಮೇರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಅವಶ್ಯಕತೆಯನ್ನು ಮನಗಂಡ ದಾನಿ ಸ್ಟಾನಿ ಜೆಸಿಂತಾ ಡಿಸೋಜಾ ಅವರು ಸುಮಾರು 3.2 ಲ. ರೂ. ವೆಚ್ಚದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದ ಬೋರ್‌ವೆಲ್‌ನ ಉದ್ಘಾಟನೆಯು ಜೂ. 15 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಲಯಲ್ಸ್ ಜಿಲ್ಲಾ ಗವರ್ನರ್ ಡಾ|ನೇರಿ ಕರ್ನೇಲಿಯೋ ಬೋರ್‌ವೆಲ್‌ಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜೀವಜಲ ನೀರಿನ ಅವಶ್ಯಕತೆಯನ್ನು ಮನಗಂಡ ಸ್ಟಾನಿ ಜೆಸಿಂತಾ ಡಿಸೋಜಾ ದಂಪತಿ ಸೇವಾ ಸಂಸ್ಥೆಯ ಮೂಲಕ ದಾನವಾಗಿ ನೀಡಿದ್ದು,ಅವರ ಕುಟುಂಬಕ್ಕೆ ದೇವರು ಇನ್ನೂ ಹೆಚ್ಚಿನ ದಾನ ಮಾಡಲು ಅನುಗ್ರಹ ಮಾಡಲಿ ಎಂದು ಹೇಳಿದರು.
ಶಿರ್ವ ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ|ಡಾ|ಲೆಸ್ಲಿ ಡಿಸೋಜಾ ಆಶೀರ್ವಚನ ನೀಡಿದರು.ದಾನಿ ಸ್ಟಾನಿ ಜೆಸಿಂತಾ ಡಿಸೋಜಾ ದಂಪತಿಯನ್ನು ಸಮ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಿ.ಜಿ.ಶೆಟ್ಟಿ, ಪ್ರಥಮ ಗವರ್ನರ್ ಮಹಮ್ಮದ್ ಹನೀಫ್, ಶಿರ್ವ ಆರೋಗ್ಯ ಮಾತಾ ದೇವಾಲಯದ ಪಾಲನ ಮಂಡಳಿಯ ಅದ್ಯಕ್ಷ ಮೆಲ್ವಿನ್ ಅರಾನ್ಹಾ, ಲಯನ್ಸ್ ಕ್ಲಬ್ ಶಿರ್ವ ಮಂಚಕಲ್‌ನ ಅಧ್ಯಕ್ಷ ಮೈಕಲ್ ಡಿಸೋಜಾ, ಕೋಶಾಧಿಕಾರಿ ಜೂಲಿಯಾನ್ ರೊಡ್ರಿಗಸ್, ಸಂತ ಮೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ನೊರೊನ್ಹಾ, ಡೊನ್ ಬೊಸ್ಕೊ ಹಿ.ಪ್ರ.ಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್ ಡಿಸೋಜಾ,ಚರ್ಚ್ ಪಾಲನ ಮಂಡಳಿಯ ಸದಸ್ಯರು, ಆರ್ಥಿಕ ಮಂಡಳಿಯ ಸದಸ್ಯರು, ಲಯನ್ಸ್ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ.ಪೂ. ಕಾಲೇಜಿನ ಪ್ರಾಂಶುಪಾಲ ಜೈಶಂಕರ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನೋರ್ಬರ್ಟ್ ಮಚಾದೋ ಕಾರ್ಯಕ್ರಮ ನಿರೂಪಿಸಿ, ಲಯನ್ಸ್ ಕಾರ್ಯದರ್ಶಿ ಚಾರ್ಲ್ಸ್ ಮೋಹನ್ ವಂದಿಸಿದರು.