ಎಚ್.ಡಿ.ಕೋಟೆ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನೆರೆ ಗ್ರಾಮದ ಕಿಡಿಗೇಡಿ ಯುವಕನೊಬ್ಬಇಡೀ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕಕಲ್ಪಿಸಿದ್ದ ಬೋರ್‌ವೆಲ್‌ಗೆ ಟ್ರ್ಯಾಕ್ಟರ್‌ನಿಂದ ಗುದ್ದಿರುವ ಘಟನೆ ತಾಲೂಕಿನ ಬಣ್ಣವಾಡಿ ಗ್ರಾಮದಲ್ಲಿ ಸಂಭವಿಸಿದೆ. ಇದರಿಂದ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ.
ಬಣ್ಣವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಜೊಂಪನಹಳ್ಳಿ ನಿವಾಸಿ ಮಹೇಶ್ ಎಂಬಾತ ಬಣ್ಣವಾಡಿ ಗ್ರಾಮದ ಯುವತಿಯೊಬ್ಬಳ ವಿಚಾರವಾಗಿ ಹಿಂದಿನಿಂದ ವೈಷಮ್ಯ ಇತ್ತು. ಹೀಗಾಗಿ ಮಹೇಶ್ ಬಣ್ಣವಾಡಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ಬೋರ್‌ವೆಲ್‌ಗೆ ಟ್ರ್ಯಾಕ್ಟರ್‌ನಿಂದ ಐದಾರು ಬಾರಿಗುದ್ದಿದ್ದಾನೆ. ಅಲ್ಲದೇ ಹಾರೆಯಿಂದ ಮೀಟಿ ನೀರಿನಸಂಪರ್ಕ ಕಡಿತಗೊಳಿಸಿದ್ದಾನೆ.
ಜೊತೆಗೆ ಭಾರಿಗಾತ್ರದ ಕಲ್ಲುಗಳನ್ನು ಪೈಪ್‌ಗಳ ಮೇಲೆ ಹಾಕಿದ್ದಾನೆ ಎಂದು ಬಣ್ಣವಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ 3 ದಿನಗಳ ಹಿಂದೆ ಬಣ್ಣವಾಡಿ ಗ್ರಾಮಕ್ಕೆಆಗಮಿಸಿದ್ದ ಮಹೇಶ್ ಜಗಳ ತೆಗೆದು “ನಿಮ್ಮೂರಿಗೆ ಹೇಗೆ ನೀರು ಬರುತ್ತೆ ನಾನೂ ನೋಡುತ್ತೇನೆ’ ಎಂದು ಧಮಕಿ ಹಾಕಿದ್ದ. ಅದರಂತೆ ಬೋರ್‌ವೆಲ್‌ಹಾಳು ಮಾಡಿದ್ದಾನೆ.
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಇಡೀ ಬೋರ್‌ವೆಲ್‌ಗೆ ವಿಷಬೆರೆಸಿ ಜನರನ್ನು ಸಾಯಿಸುವ ಬೆದರಿಕೆ ಹಾಕಿದ್ದರಿಂದ ನಾವು ಭಯಭೀತರಾಗಿ ಯಾರಿಗೂ ವಿಷಯ ತಿಳಿಸಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನೆ ಸಂಬಂಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ವಾಟರ್‌ಮ್ಯಾನ್ ದೂರು ನೀಡಿದ್ದಾರೆ.
ಘಟನೆ ಸಂಬಂಧ ಬಣ್ಣವಾಡಿ ಗ್ರಾಮಸ್ಥರು ಮಂಗಳವಾರ ಸಭೆ ಸೇರಿ ಆರೋಪಿ ಮಹೇಶ್ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಪಿಡಿಒಗೆ ಮನವಿ ಮಾಡಿದ್ದಾರೆ.
ಪಿಡಿಒ ಭೇಟಿ: ಬಾಚೇಗೌಡನಹಳ್ಳಿ ಗ್ರಾಪಂ ಪಿಡಿಒ ಪ್ರತಿಭಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಆರೋಪಿ ಮಹೇಶ್ ವಿರುದ್ಧ ಎಚ್.ಡಿ.ಕೋಟೆಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಇಡೀ ಗ್ರಾಮಕ್ಕೆ ಕುಡಿವ ನೀರಿಗೆ ವ್ಯತ್ಯಯ ಮಾಡಿ, ಬೋರ್‌ವೆಲ್ ಹಾನಿ ಮಾಡಿರುವ ಈ ಕಿಡಿಗೇಡಿ ಯುವಕನ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಎಚ್.ಬಿ.ಬಸವರಾಜು