Advertisement

ಮಹಿಳಾ ದೌರ್ಜನ್ಯ ಪ್ರಕರಣಗಳ ಅಸಮರ್ಪಕ ತನಿಖೆಗೆ ಬೇಸರ

12:04 PM Mar 08, 2017 | |

ಬೆಂಗಳೂರು: ನಗರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 95 ಪ್ರಕರಣ ದಾಖಲಾಗಿದ್ದು ಆ ಪೈಕಿ ಕೆಲವು ಪ್ರಕರಣಗಳಲ್ಲಿ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ರೇಖಾ ಶರ್ಮಾ ಅಸಮಾಧಾನ ವ್ಯಕ್ತ­ಪಡಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ­ನಾಡಿದ ಅವರು, “ದೌರ್ಜನ್ಯದ ಪ್ರಕರಣಗಳಲ್ಲಿ ಸಂತ್ರಸ್ತೆಯರ ಮೇಲೆ ಒತ್ತಡ ಹಾಕಿ ಪ್ರಕರಣ ಇತ್ಯರ್ಥಪಡಿಸಿರುವ ಆರೋಪಗಳು ಕೇಳಿ ಬಂದಿವೆ,” ಎಂದರು. “ಮಹಿಳೆಯರ ಮೇಲಿನ ದೌರ್ಜನ್ಯ ಆರೋಪದ ಪ್ರಕರಣಗಳು ದಾಖಲಾದ ತಕ್ಷಣವೇ ಪೊಲೀಸರು ತೆಗೆದುಕೊಂಡ ಕ್ರಮ ಕುರಿತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ವರದಿ ನೀಡಬೇಕು.

ಆದರೆ, ಪೊಲೀಸರು ಈಗಷ್ಟೇ ವರದಿ ತಯಾರಿಸುವಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕರೊಂದಿಗೆ ಚರ್ಚಿಸಲಾಗುವುದು,” ಎಂದು ತಿಳಿಸಿದರು. “ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಹಿಳಾ ಪೊಲೀಸ್‌ ಠಾಣೆಗಳು ಸ್ಥಾಪನೆಯಾಗಿವೆ. ಆದರೆ, ಮಹಿಳೆಯರ ಸುರಕ್ಷತೆ ದೃಷ್ಟಿಯಲ್ಲಿ ಮಹತ್ವದ ಬೆಳವಣಿಗೆ ಸಾಧ್ಯವಾಗಿಲ್ಲ.

ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ದೂರು ನೀಡಲು ಠಾಣೆಗೆ ಬಂದರೆ ಕೆಲ ಪೊಲೀಸರು ಸ್ಪಂದಿಸುವುದಿಲ್ಲ. ಮಹಿಳೆಯರಿಗಾಗಿಯೇ ಮಹಿಳಾ ಠಾಣೆಗಳಲ್ಲಿ ಪ್ರತ್ಯೇಕವಾಗಿ ಮಹಿಳಾ ಡೆಸ್ಕ್ ಆರಂಭಿಸುವ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು. ಉತ್ತರ ಭಾರತದ ರಾಜ್ಯಗಳ ನಗರಗಳಿಗೆ ಹೋಲಿಕೆ ಮಾಡಿದರೆ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next