Advertisement
ಬಾರ್ಡರ್‌ಲೈನ್ ಪರ್ಸನಾಲಿಟಿ ಡಿಸಾರ್ಡರ್ (ಬಿಪಿಡಿ) ಎಂಬುದು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಒಂದು ಮನೋರೋಗ. ಇದರಲ್ಲಿ ವ್ಯಕ್ತಿಗೆ ತನ್ನ ಭಾವನೆಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ. ಸ್ವ-ವ್ಯಕ್ತಿತ್ವಕ್ಕೆ ಸಂಬಂಧಿಸಿದ ತೊಂದರೆಗಳು, ಮನೋಭಾವ ಏರಿಳಿತಗಳು ಮತ್ತು ಹಠಾತ್ ಪ್ರವೃತ್ತಿ ಕೂಡ ಇರುತ್ತದೆ. ದೀರ್ಘಕಾಲೀನ ಅಸ್ಥಿರತೆ ಮತ್ತು ಅಭದ್ರತೆಯ ಸ್ವಭಾವಗಳು ಕೂಡ ಜತೆಗೂಡಿರುತ್ತವೆ.
Related Articles
- ತಿರಸ್ಕೃತನಾಗುವ ಭಯ: ಇದಕ್ಕೆ ತುತ್ತಾಗಿರುವ ವ್ಯಕ್ತಿಗಳು ತಿರಸ್ಕೃತರಾಗುವ ಅಥವಾ ಏಕಾಕಿಯಾಗುವ ಭಯ ಹೊಂದಿರುತ್ತಾರೆ. ಸಂಗಾತಿಯು ಕೆಲಸದಿಂದ ತಡವಾಗಿ ಮನೆಗೆ ಬಂದರೂ ಅವರು ತೀವ್ರವಾದ ಭಯಕ್ಕೆ ತುತ್ತಾಗುತ್ತಾರೆ. ಇಂಥವರು ಬೇಡಬಹುದು, ಜೋತುಬೀಳಬಹುದು, ಜಗಳಕ್ಕೆ ಮುಂದಾಗಬಹುದು, ಪ್ರೀತಿಪಾತ್ರರ ಚಲನವಲನಗಳ ಜಾಡು ಹಿಡಿಯಲು ಮುಂದಾಗಬಹುದು ಅಥವಾ ಸಂಗಾತಿಯು ದೀರ್ಘ ಪ್ರವಾಸ ಇತ್ಯಾದಿ ಹೋಗುವುದಕ್ಕೆ ಅಡ್ಡಿಯೊಡ್ಡಬಹುದು. ತನ್ನ ಸಂಗಾತಿಯು ತನ್ನನ್ನು ಶಾಶ್ವತವಾಗಿ ಬಿಟ್ಟು ಹೋಗಬಹುದು ಎಂಬ ಭಯದಲ್ಲಿಯೇ ಬದುಕಬಹುದು. ದುರದೃಷ್ಟವಶಾತ್ ಈ ಸ್ವಭಾವವು ಇನ್ನೊಂದು ಕಡೆಯಿಂದ ತಿರಸ್ಕಾರ, ಜಿಗುಪ್ಸೆಗೊಂಡು ಬಿಟ್ಟು ಹೋಗುವಂತಹ ತದ್ವಿರುದ್ಧ ವರ್ತನೆಗೆ ಕಾರಣವಾಗಬಹುದು.
- ಅಸ್ಥಿರ ಸಂಬಂಧಗಳು: ಬಿಪಿಡಿ ಹೊಂದಿರುವ ವ್ಯಕ್ತಿಗಳ ಸಂಬಂಧಗಳು ತೀವ್ರ ಮತ್ತು ಕಿರು ಅವಧಿಯವಾಗಿರುತ್ತವೆ. ಇವರು ಪ್ರತೀ ಹೊಸ ವ್ಯಕ್ತಿಯೂ ತನ್ನ ಪ್ರೀತಿಗೆ ಸರಿಹೊಂದುವ ವ್ಯಕ್ತಿ ಎಂದು ಭಾವಿಸಿ ಬೇಗನೆ ಪ್ರೀತಿಸಲು ಆರಂಭಿಸುತ್ತಾರೆ; ಅಷ್ಟೇ ವೇಗವಾಗಿ ನಿರಾಶೆಗೊಳಗಾಗುತ್ತಾರೆ. ಇಂಥವರು ಸಂಬಂಧಗಳನ್ನು ಒಂದೋ ಸಂಪೂರ್ಣ ಇಲ್ಲವೇ ಭಯಾನಕ ಎಂದು ಭಾವಿಸುತ್ತಾರೆ, ಈ ಭಾವನೆಗಳು ಬದಲಾಗುತ್ತಲೂ ಇರುತ್ತವೆ. ಬಿಪಿಡಿ ರೋಗಿಯ ಸಂಗಾತಿ/ ಗೆಳೆಯ-ಗೆಳತಿ/ ಕುಟುಂಬ ಸದಸ್ಯರು ರೋಗಿಯ ಭಾವನಾತ್ಮಕ ಏರುಪೇರುಗಳು ಮತ್ತು ನಿರೀಕ್ಷೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಸಂಬಂಧಗಳನ್ನು ನಿಭಾಯಿಸುವಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಾರೆ.
- ಅಸ್ಥಿರ ಸ್ವ-ವ್ಯಕ್ತಿತ್ವ: ಬಿಪಿಡಿ ರೋಗಿಗಳು ತಪ್ಪಾದ ಅಥವಾ ಅಸ್ಪಷ್ಟ ಸ್ವ-ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ತಮ್ಮನ್ನು “ಕೆಟ್ಟವರು’ ಎಂದು ಭಾವಿಸಿ ತಪ್ಪಿತಸ್ಥ ಅಥವಾ ನಾಚಿಕೆ ಪಡುತ್ತಾರೆ. ಬಿಪಿಡಿ ರೋಗಿಗಳು ಹಠಾತ್ತನೆ ಮತ್ತು ನಾಟಕೀಯವಾಗಿ ಸ್ವ-ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಹುದು, ಇದು ಹಠಾತ್ತನೆ ಗುರಿಗಳನ್ನು, ಅಭಿಪ್ರಾಯಗಳನ್ನು, ವೃತ್ತಿಗಳನ್ನು ಅಥವಾ ಗೆಳೆಯ-ಗೆಳತಿಯರನ್ನು ಬದಲಾಯಿಸಿಕೊಳ್ಳುವುದರಿಂದ ಕಂಡುಬರುತ್ತದೆ.
- ಸ್ವಹಾನಿ: ಆತ್ಮಹತ್ಯಾತ್ಮಕ ವರ್ತನೆಯು ಆತ್ಮಹತ್ಯೆಯ ಬಗ್ಗೆ ಆಲೋಚಿಸುವುದು, ಆತ್ಮಹತ್ಯೆಯ ಬೆದರಿಕೆ ಹಾಕುವುದು ಅಥವಾ ನೈಜವಾಗಿ ಆತ್ಮಹತ್ಯೆಯ ಪ್ರಯತ್ನ ಮಾಡುವುದನ್ನು ಒಳಗೊಂಡಿರುತ್ತದೆ. ಮಣಿಕಟ್ಟನ್ನು ಕತ್ತರಿಸಿಕೊಳ್ಳುವುದು/ ಗೀರಿಕೊಳ್ಳುವಂತಹ ಆತ್ಮಹತ್ಯೆಯ ಉದ್ದೇಶದಲ್ಲದ, ಆದರೆ ಸ್ವಯಂ ಹಾನಿ ಮಾಡಿಕೊಳ್ಳುವ ವರ್ತನೆಗಳು ಕೂಡ ಕಂಡುಬರುತ್ತವೆ. ಇಂತಹ ವರ್ತನೆಗಳು ಸಾಮಾನ್ಯವಾಗಿ ಸಂಬಂಧಗಳಲ್ಲಿ ತೊಂದರೆಗಳು ಅಥವಾ ತಿರಸ್ಕಾರದಂತಹ ಸನ್ನಿವೇಶಗಳಿಂದ ಪ್ರಚೋದನೆಗೊಳ್ಳುತ್ತವೆ.
- ಹಠಾತ್ ಪ್ರವೃತ್ತಿ ಮತ್ತು ಅಪಾಯಕಾರಿ ವರ್ತನೆ: ಅಪಾಯಕಾರಿಯಾಗಿ ವಾಹನ ಚಾಲನೆ, ಜಗಳ, ಜೂಜು, ಮಾದಕ ದ್ರವ್ಯ ವ್ಯಸನ, ಅತಿಯಾಗಿ ಆಹಾರ ಸೇವನೆ ಮತ್ತು/ ಅಥವಾ ಅಸುರಕ್ಷಿತ ಲೈಂಗಿಕ ಚಟುವಟಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.
- ಸತತವಾದ ಖಾಲಿತನದ ಭಾವನೆ: ಅನೇಕರು ದುಃಖ, ಉದಾಸೀನ, ನಿಷ್ಪ್ರಯೋಜಕ ಅಥವಾ “ಖಾಲಿತನ’ದ ಭಾವನೆ ಅನುಭವಿಸುತ್ತಾರೆ.
- ಕ್ಷಿಪ್ರವಾದ ಭಾವನಾತ್ಮಕ ಏರುಪೇರು: ಬಿಪಿಡಿ ರೋಗಿಗಳು ಇತರರ ಬಗ್ಗೆ, ಸ್ವಂತದ ಬಗ್ಗೆ ಮತ್ತು ಸುತ್ತಮುತ್ತಲಿನ ಬಗ್ಗೆ ತಾವು ಹೊಂದಿರುವ ಭಾವನೆಗಳಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ. ಅವೈಚಾರಿಕ ಭಾವನೆಗಳು – ನಿಯಂತ್ರಿಸಲಾಗದ ಸಿಟ್ಟು, ಭಯ, ಆತಂಕ, ದ್ವೇಷ, ದುಃಖ ಮತ್ತು ಪ್ರೀತಿಗಳ ಸಹಿತ- ಆಗಾಗ ಮತ್ತು ಹಠಾತ್ತನೆ ಬದಲಾಗುತ್ತಿರುತ್ತವೆ. ಈ ಏರಿಳಿತಗಳು ಕೆಲವೇ ತಾಸುಗಳ ಕಾಲವಷ್ಟೇ ಇರುತ್ತವೆ ಮತ್ತು ಅಪರೂಪಕ್ಕೆ ಕೆಲವು ದಿನಗಳ ವರೆಗೆ ಇರುತ್ತವೆ.
- ಪದೇಪದೆ ರೇಗುವುದು, ವ್ಯಂಗ್ಯವಾಡುವುದು, ಒರಟಾಗಿ ವರ್ತಿಸುವುದು ಅಥವಾ ದೈಹಿಕವಾಗಿ ಜಗಳಕ್ಕಿಳಿಯುವುದು/ ವಸ್ತುಗಳನ್ನು ಎಸೆಯುವುದು ಅಥವಾ ವಸ್ತುಗಳನ್ನು ಒಡೆದು ಹಾಕುವಂತಹ ಸರಿಯಾದುದಲ್ಲದ, ತೀವ್ರವಾದ ಸಿಟ್ಟು.
Advertisement
ಬಾರ್ಡರ್‌ಲೈನ್ ಪರ್ಸನಾಲಿಟಿ ಡಿಸಾರ್ಡರ್‌ಗೆ ಚಿಕಿತ್ಸೆ ಹೇಗೆ?
ಬಿಪಿಡಿ ಹೊಂದಿರುವ ರೋಗಿಗಳಲ್ಲಿ ಅನೇಕ ಮಂದಿಗೆ ಸರಿಯಾದ ಚಿಕಿತ್ಸೆಯಿಂದ ರೋಗಲಕ್ಷಣಗಳು ಕಡಿಮೆಯಾಗುತ್ತವೆ ಅಥವಾ ಕಡಿಮೆ ತೀವ್ರತೆ ಹೊಂದುವ ಮೂಲಕ ಕಾರ್ಯಚಟುವಟಿಕೆ ಉತ್ತಮಗೊಳ್ಳಲು ಮತ್ತು ಹೆಚ್ಚು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತದೆ.
ತರಬೇತಾದ ಮಾನಸಿಕ ಆರೋಗ್ಯ ವೃತ್ತಿಪರರಿಂದ ಆಪ್ತಸಮಾಲೋಚನೆ ಅಥವಾ ಸೈಕೊಥೆರಪಿಯ ರೂಪಗಳಲ್ಲಿ ಬಿಪಿಡಿಗೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
- ಡಯಲೆಕ್ಟಿಕಲ್ ಬಿಹೇವಿಯರ್ ಥೆರಪಿ (ಡಿಬಿಟಿ): ಈ ಚಿಕಿತ್ಸೆಯನ್ನು ನಿರ್ದಿಷ್ಟವಾಗಿ ಬಿಪಿಡಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಮನೋಸಂಪೂರ್ಣತೆಯ ಪರಿಕಲ್ಪನೆಯನ್ನು ಉಪಯೋಗಿಸುತ್ತದೆ ಅಥವಾ ವ್ಯಕ್ತಿಯ ಹಾಲಿ ವಾಸ್ತವ ಸ್ಥಿತಿಗತಿ ಮತ್ತು ಮನೋಭಾವ ಸ್ಥಿತಿಯ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಕೆಲಸ ಮಾಡುತ್ತದೆ. ಡಿಬಿಟಿಯು ವ್ಯಕ್ತಿಗಳಿಗೆ ತೀವ್ರ ಭಾವನೆಗಳನ್ನು ನಿಭಾಯಿಸಲು, ಸ್ವಹಾನಿ ವರ್ತನೆಗಳನ್ನು ಕಡಿಮೆ ಮಾಡಿಕೊಳ್ಳಲು, ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳುವ ಕೌಶಲಗಳನ್ನು ಕೂಡ ಕಲಿಸುತ್ತದೆ.
- ಕೊಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ): ಇದು ಕೂಡ ಇತರರ ಜತೆಗೆ ಸಂವಹನ ನಡೆಸುವಲ್ಲಿ ಅಡಚಣೆಯಾಗುವ ತಪ್ಪು ಗ್ರಹಿಕೆಗಳು ಮತ್ತು ಸಮಸ್ಯೆಗಳಿಂದ ಉಂಟಾಗುವ ಮೂಲ ನಂಬಿಕೆಗಳು ಮತ್ತು ವರ್ತನೆಗಳನ್ನು ಗುರುತಿಸಿ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಮನೋಭಾವ ಏರಿಳಿತಗಳನ್ನು ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಕೂಡ ಸಿಬಿಟಿಯು ಸಹಾಯ ಮಾಡುತ್ತದೆ ಹಾಗೂ ಸ್ವಯಂ-ಹಾನಿ ಅಥವಾ ಆತ್ಮಹತ್ಯಾತ್ಮಕ ವರ್ತನೆಗಳನ್ನು ಕಡಿಮೆ ಮಾಡಲು ನೆರವಾಗಬಲ್ಲುದು.