Advertisement

ಬಿಸಿಲಿನ ಬೇಗೆಗೆ ನಲುಗಿದ ಗಡಿ ಜನರು

05:05 PM May 21, 2018 | |

ಬೀದರ: ವಿಧಾನಸಭೆ ಚುನಾವಣೆ ಕಾವು ಫಲಿತಾಂಶದೊಂದಿಗೆ ತಣ್ಣಗಾಗಿದ್ದರೆ ಇತ್ತ ಕಡು ಬಿಸಿಲಿನ ಪ್ರಖರತೆ ಮಾತ್ರ ದಿನ ಕಳೆದಂತೆ ಹೆಚ್ಚುತ್ತಿದೆ. ಕೆಂಡ ಕಾರುತ್ತಿರುವ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದು, ಇದರಿಂದ ಜನ ಜೀವನದ ಮೇಲೆ ಮಾತ್ರವಲ್ಲದೇ ವ್ಯಾಪಾರೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.

Advertisement

ಉರಿಯುತ್ತಿರುವ ಬಿಸಿಲು ಮತ್ತು ಸುರಿಯುತ್ತಿರುವ ಬೆವರಿನಿಂದ ಜನರು ಕಂಗೆಟ್ಟಿದ್ದಾರೆ. ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ ನಷ್ಟು ಬಿಸಿಲಿನ ಪ್ರಖರತೆ ದಾಖಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಅಂಕಿ- ಅಂಶಗಳ ಪ್ರಕಾರ ಶನಿವಾರ 41 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಮೇ ತಿಂಗಳಾಂತ್ಯದವರೆಗೆ ಬಿಸಿಲಿನ ಕೆನ್ನಾಲಿಗೆ ಹೊರ ಚಲ್ಲುತ್ತಿದೆ.

ಪರಿಸರ ವಿರೋಧಿ ನಿಲುವು ಕಾರಣ: ಕಳೆದ ವರ್ಷ ಏಪ್ರಿಲ್‌ -ಮೇ ತಿಂಗಳಲ್ಲೂ ಬಿಸಿಲಿನ ತಾಪ ಹೆಚ್ಚಾಗಿದ್ದು, ಅತ್ಯ ಧಿಕ
ಉಷ್ಣಾಂಶ ದಾಖಲಾಗಿತ್ತು. ಈ ಬಾರಿಯೂ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಆ ದಾಖಲೆ ಮುರಿಯುವತ್ತ ಬಿಸಿಲು ದಾಪುಗಾಲು ಹಾಕುತ್ತಿದೆ. ಮಾನವ ಪರಿಸರ ವಿರೋಧಿ ನಿಲುವಿನಿಂದಾಗಿ ಕಳೆದ ಒಂದು ದಶಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತ ಸಾಗಿದೆ.  ಇದರಿಂದ ಬೆಳಗಾಗುತ್ತಲೇ ಸೆಕೆ ಚುರುಕು ಶುರುವಾಗಿ ಮಧ್ಯಾಹ್ನದ ವೇಳೆಗೆ ಭೂಮಿ ಕಾಯುತ್ತಿದೆ.

ಬಿಸಿಲಿನ ತಾಪ ಮಕ್ಕಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಉರಿ ಬಿಸಿಲಿನಿಂದಾಗಿ ರಜೆ ಮಜಾ ಅನುಭವಿಸಲು ಮಕ್ಕಳಿಗೆ ಕಾತರ. ಆದರೆ ಮಕ್ಕಳನ್ನು ಆಟಕ್ಕೆ ಕಳುಹಿಸುವಲ್ಲಿ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದು ಮಕ್ಕಳನ್ನು
ಮನೆಯಲ್ಲಿ ಕೂಡುವಂತೆ ಮಾಡಿದ್ದು, ರಜೆ ಸವಿ ಸವಿಯಲು ಅಡ್ಡಗಾಲು ಆಗಿದೆ. ಇನ್ನೂ ಕೆಲವರು ಸ್ವಿಮಿಂಗ್‌ ಪೂಲ್‌ನಲ್ಲಿ
ಎಂಜಾಯ್‌ ಮಾಡುತ್ತಿದ್ದಾರೆ. 

ಜನಜೀವನ ಅಸ್ತವ್ಯಸ್ತ: ನಗರ ಪ್ರದೇಶಗಳಿಗೆ ಹೊಲಿಸಿದಲ್ಲಿ ಅರಣ್ಯ ಪ್ರದೇಶ ಹೊಂದಿರುವ ಗ್ರಾಮೀಣ ಭಾಗದಲ್ಲಿ ಮಾತ್ರ ಸ್ವಲ್ಪ ತಣ್ಣನೆ ಅನುಭವ ವ್ಯಕ್ತವಾಗುತ್ತದೆ. ಸಾರ್ವಜನಿಕರು ಗಿಡ ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು ನಗರ ಪ್ರದೇಶದಲ್ಲಿಯೂ ಸಾಮಾನ್ಯವಾಗಿದೆ.

Advertisement

ಏಪ್ರಿಲ್‌, ಮೇ ತಿಂಗಳಲ್ಲಿ ಮದುವೆ ಸಮಾರಂಭಗಳು ನಡೆಯುವುದು ಸಾಮಾನ್ಯ. ಬಿಸಿಲಿನ ಪ್ರಖರತೆಯಿಂದಾಗಿ
ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದೆ ಮದುವೆ ಮನೆಯವರನ್ನು ಕಂಗೆಡಿಸುತ್ತಿದೆ ಈ ಉರಿ ಬಿಸಿಲು. ಮಧ್ಯಾಹ್ನದ ವೇಳೆ ಬಿಸಿಲಿನ ತಾಪದಿಂದ ವಿಶ್ರಾಂತಿ ಪಡೆಯಲೆಂದೇ ಅಂಗಡಿ ಮುಗ್ಗಟ್ಟುಗಳು ಸಹ ಬಾಗಿಲು ಹಾಕುತ್ತಿವೆ. 

ಬೀದರ ನಗರದಲ್ಲಂತೂ ಮಧ್ಯಾಹ್ನದ ಹೊತ್ತಿಗೆ ಅಘೋಷಿತ ಕರ್ಫ್ಯೂ ವಾತಾವರಣ ಇದ್ದಂತೆ ಭಾಸವಾಗುತ್ತಿದೆ. ಕೆಲವರು ಜಿಲ್ಲಾಧಿಕಾರಿ ಕಚೇರಿ ಉದ್ಯಾನ ಸೇರಿದಂತೆ ತಣ್ಣನೆ ಸ್ಥಳದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದರಿಂದಾಗಿ ಮುಖ್ಯ ರಸ್ತೆಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಾಣಿಸಿಗುತ್ತಿದೆ. 

ಬೀದರ ಸೇರಿದಂತೆ ಹೈ.ಕ. ಭಾಗದ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೆ ಸರ್ಕಾರ ಸಮಯ ಬದಲಾವಣೆ ಮಾಡಿ ಆದೇಶಿಸಿರುವುದು ನೌಕರರು ನಿಟ್ಟಿಸಿರುವ ಬಿಡುವಂತಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಗರ ಪ್ರದೇಶಗಳಲ್ಲಿ ಏರ್‌
ಕಂಡಿಶನರ್‌, ಏರ್‌ ಕೂಲರ್‌ ಮತ್ತು ಫ್ಯಾನ್‌ ಗೆ ಮೊರೆ ಹೋಗುತ್ತಿದ್ದಾರೆ. ಇನ್ನು ವಿದ್ಯುತ್‌ ಕಣ್ಣು ಮುಚ್ಚಾಲೆ ಇದೆಲ್ಲಕ್ಕೂ ಬ್ರೇಕ್‌ ಹಾಕಿ ಜನ ಉಸ್ಸಪ್ಪ ಎನ್ನುವಂತೆ ಮಾಡುತ್ತಿದೆ. ಅಕಾಲಿಕ ಮಳೆಯಾದರೆ ಒಂದಿಷ್ಟು ತಂಪು ವಾತಾವರಣ ಕಾಣಬಹುದು. ಆದರೆ ಇತ್ತೀಚೆಗೆ ಅಂಥ ಮಳೆಯಾಗಿಲ್ಲ.
 
ತಂಪು ಪಾನೀಯ-ಹಣ್ಣಿಗೆ ಮೊರೆ: ಬಿಸಿಲಿನ ಧಗೆಯಿಂದ ಹೊರಬರಲು ತಂಪು ಪಾನೀಯ ಮತ್ತು ಕಲ್ಲಂಗಡಿಯಂಥ
ಹಣ್ಣುಗಳ ಖರೀದಿಗೆ ಜನರು ಮೊರೆ ಹೋಗುತ್ತಿದ್ದು, ವ್ಯಾಪಾರಿಗಳು ಭಾರಿ ಲಾಭ ಪಡೆಯುತ್ತಿದ್ದಾರೆ. ನಗರದಲ್ಲಿ
ತೆಂಗಿನ ನೀರಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದ್ದು, ನಗರದ ತಹಶೀಲ್ದಾರ್‌ ಕಚೇರಿ, ನೆಹರು ಕ್ರೀಡಾಂಗಣ, ಮಡಿವಾಳ
ವೃತ್ತ ಮತ್ತು ಕರಿಯಪ್ಪ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಎಳೆನೀರಿನ ಮಾರಾಟ ಭರಾಟೆಯಲ್ಲಿದೆ. ಮಂಡ್ಯ, ಮದ್ದೂರು ಮತ್ತು ಬೆಂಗಳೂರಿನಿಂದ ಎಳೆನೀರಿನ ಕಾಯಿಗಳನ್ನು ತರಿಸಲಾಗುತ್ತದೆ. ನಗರದಲ್ಲಿ ದಿನಕ್ಕೆ ಸುಮಾರು 6-7 ಸಾವಿರಕ್ಕೂ ಹೆಚ್ಚು ಎಳೆನೀರಿನ ಕಾಯಿ ಮಾರಾಟವಾಗುತ್ತವೆ ಎನ್ನುತ್ತಾರೆ ವ್ಯಾಪಾರಿಗಳು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next