Advertisement

ಗಡಿ ಶಾಲೆಗಳಿಗಿಲ್ಲ ಮೂಲ ಸೌಲಭ್ಯ

04:36 PM Jun 04, 2018 | Team Udayavani |

ಚಳ್ಳಕೆರೆ: ತಾಲೂಕು ವರ್ಷದಿಂದ ವರ್ಷಕ್ಕೆ ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಆದರೆ ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಗಡಿ ಭಾಗದ ಸರ್ಕಾರಿ ಶಾಲೆಗಳು ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿವೆ.

Advertisement

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ದಿಗ್ಗಜರನ್ನು ನೀಡಿದ ಹೆಗ್ಗಳಿಕೆಯನ್ನು ತಾಲೂಕು ಹೊಂದಿದೆ. ಆದರೆ ತಾಲೂಕಿನ ಶಾಲೆಗಳಿಗೆ ಸರ್ಕಾರ ಅಗತ್ಯ ಸೌಲಭ್ಯ ನೀಡಿಲ್ಲ ಎನ್ನುವ ಕೊರಗು ಇ ಲ್ಲಿನ ಜನರನ್ನು ಕಾಡುತ್ತಿದೆ. ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂಖ್ಯೆ ಸಮಾಧಾನಕರವಾಗಿದೆ. ತಾಲೂಕಿನಲ್ಲಿ ಒಟ್ಟು 525 ಶಾಲೆಗಳಿದ್ದು, 1385 ಶಿಕ್ಷಕರಿದ್ದಾರೆ. 

ಪ್ರಸ್ತುತ 82 ಶಿಕ್ಷಕರ ಕೊರತೆ ಇದೆ. ಎಸ್‌ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಈ ವರ್ಷ ಶೇ. 87.88 ರಷ್ಟು ಫಲಿತಾಂಶ ದೊರೆತಿದೆ. ಕಳೆದ ವರ್ಷದ ಫಲಿತಾಂಶ ಶೇ. 73 ಆಗಿತ್ತು. ಈ ಬಾರಿ ಫಲಿತಾಂಶದಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ. ಈ ಬಾರಿ 12 ಪ್ರೌಢಶಾಲೆಗಳು ಶೇ. 100ರ ಫಲಿತಾಂಶ ದಾಖಲಿಸಿ ಸಾಧನೆ ಮಾಡಿವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿಯಲ್ಲಿ 3217 ವಿದ್ಯಾರ್ಥಿಗಳು, ಅನುದಾನಿತ ಪ್ರೌಢಶಾಲೆಗಳಲ್ಲಿ 4864 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 

ತಾಲೂಕಿನಲ್ಲಿ 93 ಪ್ರೌಢಶಾಲೆಗಳು 218 ಹಿರಿಯ ಪ್ರಾಥಮಿಕ ಶಾಲೆಗಳು, 214 ಕಿರಿಯ ಪ್ರಾಥಮಿಕ ಶಾಲೆಗಳಿವೆ. ತಾಲೂಕಿನಲ್ಲಿ ಒಟ್ಟು 53,762 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 26,000 ಬಾಲಕಿಯರು ಹಾಗೂ 27,762 ಬಾಲಕರಿದ್ದಾರೆ. ಅಲ್ಲದೆ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಆದರ್ಶ
ಶಾಲೆಗಳಲ್ಲೂ ಸಹ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ತಾಲೂಕಿನ 150 ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು, ಬಹುತೆಕ ಶಾಲೆಗಳ ಕಟ್ಟಡಗಳನ್ನು ದುರಸ್ಥಿಗೊಳಿಸಲಾಗಿದೆ. ಇನ್ನೂ 40 ಶಾಲೆಗಳ ಕೊಠಡಿಗಳು ದುರಸ್ತಿಯಾಗಬೇಕಿದ್ದು, ಈ ಬಗ್ಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಾಗಿದೆ. 

Advertisement

ತಾಲೂಕಿನಲ್ಲಿ ಶತಮಾನಗಳ ಕಂಡ ಒಂಭತ್ತಕ್ಕೂ ಹೆಚ್ಚು ಶಾಲೆಗಳಿವೆ. ಅದರಲ್ಲಿ ಬೇಡರೆಡ್ಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಳ್ಳಕೆರೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ರಸ್ತುತ ಬಿಇಒ ಕಚೇರಿ), ದೊಡ್ಡೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಘಟಪರ್ತಿಯ ಹಿರಿಯ ಪ್ರಾಥಮಿಕ ಶಾಲೆ, ಹಿರೇಹಳ್ಳಿ, ಜಾಜೂರು, ಚನ್ನಮ್ಮನಾಗತಿಹಳ್ಳಿ, ಸಿದ್ದೇಶ್ವರನದುರ್ಗ ಮತ್ತು ಓಬಳಾಪುರ ಶಾಲೆಗಳು ಶತಮಾನ ಪೂರೈಸಿವೆ. ಚಳ್ಳಕೆರೆ ನಗರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಶಾಲಾ ಕಾಂಪೌಂಡ್‌, ಸುಸಜ್ಜಿತ ಕಟ್ಟಡ, ಪ್ರಯೋಗಾಲಯ ವ್ಯವಸ್ಥೆ ಇದೆ. ಆದರೆ ಗ್ರಾಮಾಂತರ ಶಾಲೆಗಳಲ್ಲಿ ವಿಶೇಷವಾಗಿ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಓಬಳಾಪುರ, ಪಾತಪ್ಪನಗುಡಿ, ಕೊರ್ಲಕುಂಟೆ, ಕಡೇಹುಡೆ,
ತಪ್ಪಗೊಂಡನಹಳ್ಳಿ, ಮೊದೂರು ಮೊದಲಾದ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳು ದೊರೆತರೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದಲ್ಲಿ ಬದಲಾವಣೆಯಾದಂತೆ ಕಂಡು ಬರುತ್ತಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಇದು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ದುಸ್ತರಗೊಳಿಸುತ್ತದೆ ಎಂಬ ನೋವು ಕಾಡುತ್ತಿದೆ.
 ಗೌಡಜ್ಜ, ತಪ್ಪಗೊಂಡನಹಳ್ಳಿ ಶಾಲೆ ಎಸ್‌ಡಿಎಂಸಿ ಸದಸ್ಯ.

ಕೆ.ಎಸ್‌. ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next