ಬಳ್ಳಾರಿ: ಅಕ್ರಮ ಗಣಿಯಿಂದ ಗಣಿಗಾರಿಕೆಗೆ ಬ್ರೇಕ್ ಹಾಕಿದ್ದ ಸುಪ್ರೀಂ ಕೋರ್ಟ್ ದಶಕದ ಬಳಿಕ ವಿಧಿಸಿದ್ದ ಷರತ್ತುಗಳನ್ನು ತೆರವುಗೊಳಿಸಿ ಅದಿರು ರಫ್ತಿಗೆ ಅನುಮತಿ ನೀಡಿದೆ. ಆದರೆ, ಗಡಿ ಗುರುತು ಸರ್ವೇ ಕಾರ್ಯ ಪೂರ್ಣಗೊಳ್ಳದ ಕಾರಣ ಈಗ ಮತ್ತೆ ಸಮಸ್ಯೆ ಎದುರಾಗಿದೆ. ಗಡಿ ಗುರುತು ನಾಶದಿಂದ ಗಣಿಗಾರಿಕೆ ಸ್ಥಗಿತಗೊಂಡಿರುವ ಅಂತಾರಾಜ್ಯ ಗಡಿ ಭಾಗದಲ್ಲಿರುವ ಗಣಿ ಕಂಪನಿಗಳ ಮಾಲೀಕರು ತಮ್ಮ ಗಣಿ ಗುತ್ತಿಗೆ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆಗೆ 2011, ಸೆ.23ರಂದು ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿತು. ಪರಿಣಾಮ ಜಿಲ್ಲೆಯ ಬಹುತೇಕ ಗಣಿ ಕಂಪನಿಗಳು ಸ್ಥಗಿತಗೊಂಡವು. ಅಕ್ರಮ ಗಣಿಗಾರಿಕೆ ವೇಳೆ ಕರ್ನಾಟಕ, ಆಂಧ್ರಪ್ರದೇಶದ ಅಂತಾರಾಜ್ಯ ಗಡಿ ಗುರುತುಗಳನೂ ನಾಶಪಡಿಸಲಾಗಿದ್ದು, ಇದರಿಂದ ಗಡಿ ಭಾಗದಲ್ಲಿನ ಸುಮಾರು 10ಕ್ಕೂ ಹೆಚ್ಚು ಗಣಿ ಕಂಪನಿಗಳು ಗಡಿ ಗುರುತು ಸರ್ವೇ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಒಂದು ದಶಕದಿಂದ ಗಣಿಗಾರಿಕೆ ನಡೆಸದಂತಾಯಿತು. ಪರಿಣಾಮ ಇವುಗಳಲ್ಲಿ ಕೆಲ ಕಂಪನಿಗಳ ಅವಧಿ (ಲೀಜ್) 2020ಕ್ಕೆ ಮುಕ್ತಾಯಗೊಂಡಿದ್ದು, ಇದೀಗ ಸುಪ್ರೀಂ ಕೋರ್ಟ್ ಅದಿರು ರಫ್ತಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕಂಪನಿಗಳ ಮಾಲೀಕರು ಅನುಮತಿ ವಿಸ್ತರಿಸುವಂತೆ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗಣಿಗಾರಿಕೆಗೆ ಬ್ರೇಕ್ ಹಾಕಿದ್ದ ಸುಪ್ರೀಂ ಕೋರ್ಟ್, ರಾಜ್ಯದ ಅದಿರನ್ನು ವಿದೇಶಕ್ಕೆ ರಫ್ತು ಮಾಡುವಂತಿಲ್ಲ, ತಮ್ಮದೇ ಉತ್ಪಾದನಾ ಘಟಕದಲ್ಲಿ ಬಳಕೆ ಮಾಡಬೇಕೆಂಬ ಷರತ್ತು ವಿಧಿಸಿತು. ಪರಿಣಾಮ ಹಲವು ಕಂಪನಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಣಿಗಾರಿಕೆಯನ್ನೇ ನೆಚ್ಚಿಕೊಂಡಿದ್ದ ಮಾಲೀಕರು, ಅದಿರನ್ನು ಕಂಪನಿಗಳಿಗೆ ಸಾಗಿಸುವ ಮಧ್ಯವರ್ತಿಗಳು, ಪೊಲೀಸ್, ಚೆಕ್‌ಪೋಸ್ಟ್ ಇನ್ನಿತರೆ ರಿಸ್ಕ್ ಗಳನ್ನು ದಾಟಿಸಿಕೊಂಡು ಸರಕು ಸಾಗಿಸುವವರು ಎಲ್ಲರೂ ಸುಪ್ರೀಂ ಆದೇಶದಿಂದ ಗಣಿಗಾರಿಕೆಯಿಂದ ದೂರ ಸರಿಯುವಂತಾಯಿತು.
ಗಣಿಗಾರಿಕೆಗೆ ಪುನಃ ಅನುಮತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ 2017ರಿಂದಲೇ ಗಣಿ ಮಾಲೀಕರು ಮನವಿ ಮಾಡಿಕೊಳ್ಳುತ್ತಿದ್ದರೂ ರಾಜ್ಯ ಸರ್ಕಾರ, ಸಮಾಜ ಪರಿವರ್ತನಾ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿದ್ದವು. ಕೊನೆಗೂ ಗಣಿ ಮಾಲೀಕರ ಮನವಿ ಆಲಿಸಿದ ಸುಪ್ರೀಂ ಕೋರ್ಟ್ ಕಳೆದ ಏ.11ರಂದು ಕೊನೆ ವಿಚಾರಣೆ ನಡೆಸಿ, ದೇಶದ ಬೇರಾವ ರಾಜ್ಯಕ್ಕೂ ಇಲ್ಲದ ಷರತ್ತು ಕರ್ನಾಟಕಕ್ಕೆ ಮಾತ್ರ ಸಲ್ಲ ಎಂಬ ನಿಲುವು ತಳೆದಿದೆ. ಕೇಂದ್ರದ ಗಣಿ ಸಚಿವಾಲಯ, ಉಕ್ಕು ಸಚಿವಾಲಯ, ಸಿಇಸಿ ಅನುಮತಿ ಮೇರೆಗೆ ಕಳೆದ ಮೇ 19ರಂದು ಗಣಿಗಾರಿಕೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಗಡಿ ಸರ್ವೇ ಕಾರ್ಯ ಪೂರ್ಣ? ಗಡಿ ಭಾಗದಲ್ಲಿನ 2020ಕ್ಕೆ ಅವಧಿ ಮುಗಿದಿರುವ ಕಂಪನಿಗಳ ಮಾಲೀಕರಲ್ಲೂ ಗಣಿಗಾರಿಕೆ ನಡೆಸಬಹುದೆಂಬ ಆಸೆ ಚಿಗುರೊಡೆದಿದೆ. ಗಡಿ ಭಾಗದಲ್ಲಿನ ಸುಮಾರು 10 ಕಂಪನಿಗಳು, ಕಳೆದ ಒಂದು ದಶಕದಿಂದ ಗಡಿ ಸರ್ವೇ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗಣಿಗಾರಿಕೆಯಿಂದಲೇ ದೂರ ಉಳಿದಿದ್ದು, ಗಣಿ ಗುತ್ತಿಗೆ ಅವಧಿಯನ್ನು ಇನ್ನಷ್ಟು ವರ್ಷ ವಿಸ್ತರಿಸುವ ಮೂಲಕ ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಿವೆ. ಇವರ ಮನವಿಗೆ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ಸ್ಪಂದಿಸುವುದೇ ಕಾದು ನೋಡಬೇಕಾಗಿದೆ.
ಅವಿಭಜಿತ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿದ್ದ ಒಟ್ಟು 126 ಗಣಿ ಕಂಪನಿಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಿಇಸಿ ಸಮಿತಿ ಎ,ಬಿ ಕೆಟಗರಿಯ 74, ಹಾಗೂ 52 ಸಿ ಕೆಟಗರಿ ಎಂದು ವರ್ಗೀಕರಣ ಮಾಡಿತ್ತು. ಇದರಲ್ಲಿ ಸಿ ಕೆಟಗರಿಯ 52 ರದ್ದಾಗಿವೆ. ಇನ್ನುಳಿದ ಕೆಲ ಕಂಪನಿಗಳು ಸಕ್ರಿಯವಾಗಿಲ್ಲ. ಸದ್ಯ ಅವಳಿ ಜಿಲ್ಲೆಗಳಲ್ಲಿ 42 ಕಂಪನಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಮಗಾದ ಅನ್ಯಾಯ ಸರಿಪಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಸರ್ಕಾರದ ಗಮನಕ್ಕೂ ತಂದಿದ್ದೇವೆ. ನನ್ನ ಗಣಿಯನ್ನು 2008ರಲ್ಲೇ ನಿಲ್ಲಿಸಲಾಗಿತ್ತು. ಇದೆಲ್ಲವನ್ನೂ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದು, ನ್ಯಾಯಾಲಯದ ತೀರ್ಪಿಗಾಗಿ ನಾವೀಗ ಕಾಯುತ್ತಿದ್ದೇವೆ. ●
ಟಪಾಲ್ ಗಣೇಶ್, ಗಣಿ ಉದ್ಯಮಿ
-ವೆಂಕೋಬಿ ಸಂಗನಕಲ್ಲು