ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಮತ್ತು ಗಡಿ ಸಮ್ಮೇಳನ ನಡೆಸಿ ಅಲ್ಲಿನ ಜನರಿಗೆ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಬೇಕು. ನೆಲ, ಜಲ, ಭಾಷೆಗೆ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಶಾಸಕ ಡಾ|ಅವಿನಾಶ ಜಾಧವ್ ಹೇಳಿದರು.
ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಿರಿಯ ಕಸಾಪ ಸದಸ್ಯರಿಗೆ ಸನ್ಮಾನ, ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ತೆಲಗು ಚಲನಚಿತ್ರಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಆದರೆ ನಮ್ಮ ಕನ್ನಡಿಗರು ಕನ್ನಡ ಚಲನಚಿತ್ರಗಳು ಹೆಚ್ಚು ನೋಡುವುದಿಲ್ಲ. ವೃತ್ತಿಯಲ್ಲಿ ವೈದ್ಯನಾಗಿದ್ದರೂ ಸಹಾ ಕನ್ನಡ ಭಾಷೆಗೆ ಹೆಚ್ಚು ಮಹತ್ವ ನೀಡಿದ್ದೇನೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು. ಕನ್ನಡ ಭವನ ಸೌಂದರೀಕರಣಗೊಳಿಸಲು ಅನುದಾನ ಬಿಡುಗಡೆಗೊಳಿಸಲಾಗುವುದು. ತಾಲೂಕಿನಲ್ಲಿರುವ ಸರಕಾರಿ ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಇದ್ದರೂ ಸಹಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕ ಪಡೆದುಕೊಂಡಿರುವುದು ಸಂತಸ ತಂದಿದೆ ಎಂದರು.
ಜಿಲಾ ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಡಾ|ಶರಣಪ್ಪ ಮಾಳಗಿ ಕನ್ನಡ ಭಾಷೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಹಶೀಲ್ದಾರ್ ಅಂಜುಮ ತಬಸುಮ, ತಾಪಂ ಅಧಿಕಾರಿ ಅನಿಲಕುಮಾರ ರಾಠೊಡ, ಬಿಇಒ ರಾಚಪ್ಪ ಭದ್ರಶೆಟ್ಟಿ ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಸುರೇಶ ದೇಶಪಾಂಡೆ, ಶಿವರಾಜ ವಾಲಿ, ಶಶಿಕಾಂತ ಆಡಕಿ, ಶಾಮರಾವ್ ಚಿಂಚೋಳಿ, ತುಕಾರಾಮ ಪವಾರ, ಘಾಳಮ್ಮ ಸಿಂಧೆ, ಇನ್ನಿತರರಿಗೆ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಿಸಿದರು. ಶೇಖಭಕ್ತಿಯಾರ ಜಾಹಗೀರದಾರ ಸ್ವಾಗತಿಸಿದರು ವೀರಣ್ಣ ಸುಗಂ ನಿರೂಪಿಸಿದರು. ಮಲ್ಲಿಕಾರ್ಜುನ ಮಾಳಗಿ ವಂದಿಸಿದರು.