Advertisement

ರೈಲ್ವೇ ಯೋಜನೆಗೆ ಬೂಸ್ಟರ್‌ ಡೋಸ್‌!

03:15 PM Mar 14, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆ ಕಾಫಿಗೆ ಪ್ರಸಿದ್ಧಿ ಪಡೆದಿದೆ. ಹೆಚ್ಚಿನ ವಾಣಿಜ್ಯೋದ್ಯಮ ವಹಿವಾಟು ನಡೆಯುತ್ತಿದ್ದರೂ ಇಲ್ಲಿನ ರೈಲ್ವೆ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹೆಚ್ಚಿನ ಜನರು ರೈಲ್ವೆಯನ್ನು ಆಶ್ರಯಿಸದಿರುವುದರಿಂದ ನಷ್ಟದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ರೈಲ್ವೆಗೆ ಒತ್ತು ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಬೂಸ್ಟರ್‌ ಡೋಸ್‌ ನೀಡಿದ್ದಾರೆ.

Advertisement

ಚಿಕ್ಕಮಗಳೂರು ನಗರಕ್ಕೆ ರೈಲ್ವೆ ಸಂಪರ್ಕವನ್ನು 2013 ನವೆಂಬರ್‌ 2013ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ್‌ ಖರ್ಗೆ ಅವಧಿಯಲ್ಲಿ ನೀಡಲಾಗಿತ್ತು. ಕಡೂರು ಮಾರ್ಗವಾಗಿ ಚಿಕ್ಕಮಗಳೂರು ನಗರಕ್ಕೆ ಸಂಪರ್ಕ ನೀಡಲಾಗಿದ್ದು, ಶಿವಮೊಗ್ಗ ಟೌನ್‌ ಮತ್ತು ಯಶವಂತಪುರ ಪ್ಯಾಸೆಂಜರ್‌ ರೈಲುಬೋಗಿಗಳು ಪ್ರತೀ ನಿತ್ಯ ಸಂಚರಿಸುತ್ತಿವೆ.

ಕೋವಿಡ್‌ ಸಂದರ್ಭದಲ್ಲಿ ಚಿಕ್ಕಮಗಳೂರು ರೈಲ್ವೆ ನಷ್ಟಕ್ಕೆ ಸಿಲುಕಿದ್ದರಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಆಸಕ್ತಿ ವಹಿಸಿ ರೈಲ್ವೆ ಸಂಚಾರ ಮತ್ತೆ ಪ್ರಾರಂಭಗೊಂಡಿತ್ತು.

ಪ್ರತೀ ದಿನ ಎರಡು ಪ್ಯಾಸೆಂಜರ್‌ ರೈಲು ಬೋಗಿಗಳು ಸಂಚರಿಸಿದರೆ, ಕೆಲವು ಸಮಯಗಳಲ್ಲಿ ಮಾತ್ರ ಗೂಡ್ಸ್‌ ರೈಲು ಬೋಗಿ ಸಂಚರಿಸುತ್ತದೆ. ಕಾಫಿ ನಾಡಿನಲ್ಲಿ ವಾಣಿಜ್ಯೋದ್ಯಮ ಬೆಳೆಗಳಾದ ಅಡಕೆ, ಕಾಫಿ, ಕಾಳುಮೆಣಸು, ಸಂಬಾರು ಪದಾರ್ಥ ಭಾರೀ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೂ ಸರಕು ಸಾಗಣೆಗೆ ಇಲ್ಲಿನ ಬೆಳೆಗಾರರು ರೈಲ್ವೆಯನ್ನು ಆಶ್ರಯಿಸದಿರುವುದರಿಂದ ರೈಲ್ವೆ ಅಷ್ಟೇನೂ ಮಹತ್ವ ಪಡೆದುಕೊಂಡಿಲ್ಲ.

ಪ್ಯಾಸೆಂಜರ್‌ ರೈಲು ಇದ್ದರೂ ಅವುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹಾಸನ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಹಾಸನ ಜಿಲ್ಲೆ ಬೇಲೂರುವರೆಗೂ ರೈಲ್ವೆ ಸಂಪರ್ಕ ವಿಸ್ತರಿಸಬೇಕು ಎನ್ನುವುದು ಜಿಲ್ಲೆಯ ಜನತೆಯ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿತ್ತು.

Advertisement

ಜಿಲ್ಲೆಯ ಜನರ ಮನವಿ ಪುರಸ್ಕರಿಸಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶೇ.50:50ರ ಅನುದಾನದಲ್ಲಿ ನೂತನ ರೈಲುಮಾರ್ಗ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು, ಚಿಕ್ಕಮಗಳೂರು-ಬೇಲೂರು-ಹಾಸನ ರೈಲುಮಾರ್ಗ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಬೂಸ್ಟರ್‌ ಡೋಸ್‌ ನೀಡಿದೆ.

ಚಿಕ್ಕಮಗಳೂರು- ಬೇಲೂರು ರೈಲ್ವೆ ಹಳಿ ಜಿಲ್ಲಾ ವ್ಯಾಪ್ತಿಯ ಅಂಬಳೆ, ಹಾದಿಹಳ್ಳಿ, ಗಂಜಲಗೋಡು, ಬಾಣಾವರ, ಮಳಲೂರು, ಹೇರುವಳ್ಳಿ ಮಾರ್ಗವಾಗಿ ಸಾಗಲಿದೆ. ಇದಕ್ಕೆ 131 ಎಕರೆ ಪ್ರದೇಶ. 182 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗ ನಿರ್ಮಾಣ ಪ್ರಸ್ತಾಪಿಸಿದ್ದು, ಇನ್ನಷ್ಟು ಚುರುಕು ಪಡೆದುಕೊಳ್ಳುವ ವಿಶ್ವಾಸ ಜಿಲ್ಲೆಯ ಜನತೆಯಲ್ಲಿ ಮೂಡಿದೆ. ಚಿಕ್ಕಮಗಳೂರು- ಬೇಲೂರು- ಹಾಸನ ಮಾರ್ಗವಾಗಿ ಬೆಂಗಳೂರು ಸಂಪರ್ಕ ಪಡೆದುಕೊಂಡಲ್ಲಿ ಜಿಲ್ಲೆಯಲ್ಲಿ ರೈಲ್ವೆ ಲಾಭದತ್ತ ಮುಖ ಮಾಡಲಿದೆಯೇ ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next