ನವದೆಹಲಿ: “ಎರಡು ಡೋಸ್ ಕೊರೊನಾ ಲಸಿಕೆ ಪಡೆದವರು ಬೂಸ್ಟರ್ ಡೋಸ್ ಪಡೆದರೆ ಹೇಳಿಕೊಳ್ಳುವಂಥ ಪ್ರಯೋಜನವೇನೂ ಆಗುವುದಿಲ್ಲ’.
– ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಭಾರತೀಯ ಔಷಧೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಬಗ್ಗೆ ಕೇಂದ್ರ ಸರ್ಕಾರಕ್ಕೆ ಇಂಥದ್ದೊಂದು ವರದಿಯನ್ನೊಂದನ್ನು ಸಲ್ಲಿಸಿದೆ. ಕೇಂದ್ರ ಸರ್ಕಾರದ ಸಲಹಾ ತಂಡವಾಗಿರುವ ಎನ್‌ಟಿಎಜಿಐ (ಪ್ರತಿರಕ್ಷಣೆ ಕುರಿತು ಭಾರತದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ) ವತಿಯಿಂದ ಸಲ್ಲಿಕೆಯಾಗಿರುವ ಈ ವರದಿಯಲ್ಲಿ, “ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕೆಯ ಅವಶ್ಯಕತೆಯಿಲ್ಲ’ ಎಂದೂ ತಿಳಿಸಿದೆ.
ಕೋವಿನ್ ಮೊಬೈಲ್ ಅಪ್ಲಿಕೇಷನ್ ಅಥವಾ ಜಾಲತಾಣದ ಮೂಲಕ, ಕೊರೊನಾ ಲಸಿಕೆ ಪಡೆದವರು ತಮ್ಮ ಲಸಿಕಾ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅನುಕೂಲವಾಗವಂಥ ಫೀಚರ್ ನೀಡಲಾಗಿರುವುದು ಸರಿಯಷ್ಟೆ. ಇದರ ಜೊತೆಗೆ, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ಯಾವುದೇ ವ್ಯಕ್ತಿಯ ಲಸಿಕೆ ಪ್ರಮಾಣಪತ್ರವನ್ನು ತಾವೇ ಕೋವಿನ್ ಮೂಲಕ ಪರಿಶೀಲಿಸಲು ಅವಕಾಶ ಮಾಡಿಕೊಡುವ ಮತ್ತೂಂದು ಫೀಚರ್ ಅವಕಾಶ ನೀಡಲಾಗಿದೆ. ಇದರಿಂದಾಗಿ ಸಿನಿಮಾ ಮಂದಿರ, ವಿಮಾನ ನಿಲ್ದಾಣ, ಹೋಟೆಲ್ ಸೇರಿ ಅನೇಕ ಕಡೆ ಗ್ರಾಹಕರ ಲಸಿಕಾ ಪ್ರಮಾಣಪತ್ರವನ್ನು ಅಲ್ಲಿನ ಸಿಬ್ಬಂದಿ ಪರಿಶೀಲಿಸಬಹುದಾಗಿದೆ.
ಇದನ್ನೂ ಓದಿ : ಚೊಚ್ಚಲ ಪಂದ್ಯದಲ್ಲೇ ಹೆಲ್ಮೆಟ್‌ಗೆ ಬಡಿದ ಚೆಂಡು, ಆಸ್ಪತ್ರೆಗೆ ದಾಖಲಾದ ವಿಂಡೀಸ್ ಆಟಗಾರ
10,488 ಪ್ರಕರಣ ದೃಢ: ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ದೇಶದಲ್ಲಿ 10,488 ಕೊರೊನಾ ಪ್ರಕರಣಗಳು ದೃಢವಾಗಿವೆ. 313 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,22,714ಕ್ಕೆ ಇಳಿದಿದ್ದು, ಇದು ಕಳೆದ 532 ದಿನಗಳಲ್ಲೇ ಅತ್ಯಂತ ಕನಿಷ್ಠ ಸಕ್ರಿಯ ಪ್ರಕರಣಗಳ ಸಂಖ್ಯೆಯಾಗಿದೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯು ಒಟ್ಟಾರೆ ಪ್ರಕರಣಗಳ ಶೇ. 0.36ರಷ್ಟಿದೆ. ಈವರೆಗೆ ರಾಜ್ಯಗಳಿಗೆ 129 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಅದರಲ್ಲಿ 116.50 ಕೋಟಿ ಲಸಿಕೆ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪರಿಶೀಲನಾ ಸಭೆ:
ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಪುದುಚೆರಿ ಸರ್ಕಾರದೊಂದಿಗೆ ಸೋಮವಾರ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ಲಸಿಕೆ ಅಭಿಯಾನ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.