ಸ್ವಾತಂತ್ರ್ಯದ 75ನೇ ವರ್ಷದ ಆಚರಣೆ ಅಂಗವಾಗಿ ಕೇಂದ್ರ ಸರಕಾರ 18ರಿಂದ 59 ವರ್ಷದೊಳಗಿನ ಎಲ್ಲರಿಗೂ ಉಚಿತ ಬೂಸ್ಟರ್ ಡೋಸ್ ನೀಡುವ ಬಗ್ಗೆ ನಿರ್ಧಾರ ಮಾಡಿದ್ದು, ಕೊರೊನಾ ನಿಯಂತ್ರಣದ ದೃಷ್ಟಿಯಲ್ಲಿ ಇದೊಂದು ಉತ್ತಮ ಕ್ರಮವಾಗಿದೆ.
ಅದೃಷ್ಟವಶಾತ್ ಮೂರು ಮತ್ತು ನಾಲ್ಕನೇ ಅಲೆ ಸಂದರ್ಭದಲ್ಲಿ ಕೊರೊನಾ ಹೆಚ್ಚು ಬಾಧಿಸಲಿಲ್ಲ. ತಜ್ಞ ವೈದ್ಯರ ಪ್ರಕಾರ, ಮುನ್ನೆಚ್ಚರಿಕೆ ಅಂಗವಾಗಿ ದೇಶದ ಬಹಳಷ್ಟು ಜನರಿಗೆ ಎರಡೂ ಕೊರೊನಾ ಲಸಿಕೆ ಹಾಕಿದ್ದರಿಂದ ಬಹಳಷ್ಟು ಸಮಸ್ಯೆಯಾಗಲಿಲ್ಲ. ಅಲ್ಲದೆ, ಈ ಹಿಂದೆಯೇ ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ನೀಡುವ ಕೆಲಸ ಶುರು ಮಾಡಿದ್ದು, ಅಷ್ಟೇನೂ ಸ್ಪಂದನೆಯೂ ವ್ಯಕ್ತವಾಗಿಲ್ಲ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಇದುವರೆಗೆ ಉಚಿತವಾಗಿ ಬೂಸ್ಟರ್ ಲಸಿಕೆ ನೀಡಲಾಗಿದ್ದು, ಇವರಲ್ಲಿಯೂ ಬಹುತೇಕರು ಪಡೆದುಕೊಂಡಿಲ್ಲ.
ಇದರ ನಡುವೆಯೇ ಈಗ ದೇಶಾದ್ಯಂತ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ ಬೆಳಗ್ಗೆ ಹೊತ್ತಿಗೆ ದೇಶದಲ್ಲಿ 16,906 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 45 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,32,457ಕ್ಕೆ ಏರಿಕೆಯಾಗಿದೆ. ಮಣಿಪುರದಲ್ಲಿ ಕೊರೊನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಜು.24ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಕರ್ನಾಟಕ ದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಆಚೀಚೆ ಕಾಣಿಸುತ್ತಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿಯೇ ಹೆಚ್ಚು ಪ್ರಕರಣಗಳು ಕಾಣಿಸುತ್ತಿವೆ. ಈ ಎರಡು ರಾಜ್ಯಗಳಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.
ಬುಧವಾರದ ವೇಳೆಗೆ ದೇಶದಲ್ಲಿ ಒಟ್ಟಾರೆಯಾಗಿ ಲಸಿಕೆ ಪಡೆದವರ ಸಂಖ್ಯೆ 199.12 ಕೋಟಿಗೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬೂಸ್ಟರ್ ಲಸಿಕೆ ಪಡೆಯುವಲ್ಲಿ ಜನ ಹಿಂದೇಟು ಹಾಕುತ್ತಿರುವುದು ಒಂದಷ್ಟು ಆತಂಕದ ವಿಚಾರವೇ. ಈ ಬಗ್ಗೆ ಪದೇ ಪದೆ ಸರಕಾರ ಜಾಗೃತಿ ಮೂಡಿಸಿದರೂ ಜನ ಬೂಸ್ಟರ್ ಡೋಸ್ ಪಡೆಯಲು ಮುಂದೆ ಬರುತ್ತಿಲ್ಲ. ಇದಕ್ಕೆ ಜನರಲ್ಲಿನ ಕೊರೊನಾ ಹೋಗಿದೆ ಎಂಬ ಭಾವನೆಯೇ ಕಾರಣ ಎಂಬುದು ವೈದ್ಯರ ಅನಿಸಿಕೆ. ಆದರೆ ವೈದ್ಯರೇ ಹೇಳುವ ಪ್ರಕಾರ, ಕೊರೊನಾ ಇನ್ನೂ ನಮ್ಮಿಂದ ಸಂಪೂರ್ಣವಾಗಿ ದೂರವಾಗಿಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು.
ಇನ್ನೊಂದೆಡೆ ಬೂಸ್ಟರ್ ಡೋಸ್‌ಗೆ ಹಣ ನಿಗದಿ ಮಾಡಿದ್ದರಿಂದಾಗಿ ಲಸಿಕೆ ಪಡೆಯಲು ಬರುವವರ ಸಂಖ್ಯೆ ಕಡಿಮೆಯಾಯಿತು ಎಂಬ ಮಾತುಗಳಿವೆ. ಇದು ಸತ್ಯವೂ ಇರಬಹುದು. ಮೊದಲ ಎರಡು ಲಸಿಕೆಗಳನ್ನು ಉಚಿತವಾಗಿಯೇ ನೀಡಲಾಗಿತ್ತು. ಈಗ ಹೇಗೂ ಎರಡು ಡೋಸ್ ಪಡೆದಿದ್ದೇವೆ. ಬೂಸ್ಟರ್ ಡೋಸ್‌ನ ಅಗತ್ಯವಿಲ್ಲ ಎಂಬ ಜನರ ಮನಃಸ್ಥಿತಿಯೂ ಇದರಲ್ಲಿ ಕೆಲಸ ಮಾಡಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಉಚಿತವಾಗಿ ಬೂಸ್ಟರ್ ಡೋಸ್ ನೀಡುವ ಕೇಂದ್ರ ಸರಕಾರದ ಕ್ರಮವನ್ನು ಸ್ವಾಗತಿಸಬೇಕಾಗಿದೆ.
ಅಲ್ಲದೆ ಕೊರೊನಾ ನಾನಾ ರೂಪಾಂತರಗಳನ್ನು ಪಡೆದುಕೊಳ್ಳುತ್ತಿದ್ದು, ಮುಂದೆ ಇದು ಹೇಗೆ ವರ್ತಿಸಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಈಗ ಬೂಸ್ಟರ್ ಡೋಸ್ ಪಡೆದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಉತ್ತಮ. ಜತೆಗೆ ಮೊದಲ ಎರಡು ಡೋಸ್ ಲಸಿಕೆ ಪಡೆದಿರುವುದರಿಂದಲೇ 3 ಮತ್ತು 4ನೇ ಅಲೆ ಬಾಧಿಸಲಿಲ್ಲ ಎಂಬ ಅಂಶವನ್ನು ಪರಿಗಣಿಸಬೇಕು.