ಹೊಸದಿಲ್ಲಿ : ಸಮಾಜವಾದಿ ಪಕ್ಷದೊಂದಿಗಿನ ಚುನಾವಣಾ ಮೈತ್ರಿಯಲ್ಲಿ ಯಶಸ್ವಿ ಸಂಧಾನ ನಡೆಸಿ ಸೀಟು ಹಂಚಿಕೆ ವಿವಾದವನ್ನು ಬಗೆಹರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ 105 ಸ್ಥಾನಗಳನ್ನು ದೊರಕಿಸಿಕೊಟ್ಟಿರುವ ಕಾಂಗ್ರೆಸ್ ಮುಖ್ಯಸ್ಥೆ, ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಜ್ಜಾಗಿದ್ದಾರೆ.
ಪ್ರಿಯಾಂಕಾ ಅವರ ಔಪಚಾರಿಕ ರಾಜಕೀಯ ಪ್ರವೇಶದ ಬಗ್ಗೆ ಈ ವರೆಗೂ ಇದ್ದ ಊಹಾಪೋಹಗಳಿಗೆ ಇದರೊಂದಿಗೆ ತೆರೆ ಬಿದ್ದಂತಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಅವರೊಂದಿಗೆ ಸೀಟು ಹಂಚಿಕೆ ವಿವಾದವನ್ನು ಯಶಸ್ವಿಯಾಗಿ ಬಗೆಹರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಪ್ರಿಯಾಂಕಾ ಗಾಂಧಿ ಅವರ ಸಂಧಾನ ಯತ್ನಗಳ ಬಗ್ಗೆ ಕಾಂಗ್ರೆಸ್ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಆಹ್ಮದ್ ಪಟೇಲ್ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಚುನಾವಣಾ ಹೊಣೆಗಾರಿಕೆ ಹೊತ್ತಿರುವ ಗುಲಾಮ್ ನಬೀ ಆಜಾದ್ ಅವರು, ಸಮಾಜ ವಾದಿ ಪಕ್ಷದೊಂದಿಗಿನ ಸೀಟು ಹಂಚಿಕೆ ವಿವಾದವನ್ನು ಬಗೆಹರಿಸುವಲ್ಲಿ ಪ್ರಿಯಾಂಕಾ ತೋರಿರುವ ಮುತ್ಸದ್ದಿತನಕ್ಕೆ ಅಭಿನಂದನೆ ಹೇಳಿದ್ದಾರೆ.
ಒಂದು ಹಂತದಲ್ಲಿ ಸಮಾಜವಾದಿ – ಕಾಂಗ್ರೆಸ್ ಪಕ್ಷದ ಚುನಾವಣಾ ಮೈತ್ರಿ ಬಹುತೇಕ ಮುರಿದು ಬೀಳುವುದಿತ್ತು; ಆ ಸಂದರ್ಭದಲ್ಲಿ ಮುಂದೆ ಬಂದ ಪ್ರಿಯಾಂಕಾ ನಿರ್ಣಾಯಕ ಪಾತ್ರ ವಹಿಸಿ ಯಶಸ್ವಿ ಸಂಧಾನ ನಡೆಸಿದರು ಎಂದವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ವಿವಾದವನ್ನು ಇತ್ಯರ್ಥಪಡಿಸಲು ಕಾಂಗ್ರೆಸ್ ಪಕ್ಷ ಪ್ರಶಾಂತ್ ಕಿಶೋರ್ ಅವರನ್ನು ಕಳುಹಿಸಿತ್ತು; ಆದರೆ ಅವರ ಮಧ್ಯಸ್ಥಿಕೆ ಫಲಕಾರಿಯಾಗಿರಲಿಲ್ಲ.