ನವದೆಹಲಿ:ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜತೆ ಮುನಿಸಿಕೊಂಡು ಬಂಡಾಯವೆದ್ದಿದ್ದ ಸಚಿನ್ ಪೈಲಟ್ ಹಾಗೂ ಶಾಸಕರು ಪಕ್ಷಕ್ಕೆ ಮರಳಿ ಬಂದ ಬೆನ್ನಲ್ಲೇ ಗೆಹ್ಲೋಟ್ ಗೆ ಸುಪ್ರೀಂಕೋರ್ಟ್ ನಲ್ಲಿ ಮತ್ತೊಂದು ಗೆಲುವು ಸಿಕ್ಕಂತಾಗಿದೆ.
ಕಳೆದ ವರ್ಷ ಬಹುಜನ್ ಸಮಾಜ್ ಪಕ್ಷದ ಆರು ಮಂದಿ ಶಾಸಕರು ಕಾಂಗ್ರೆಸ್ ಪಕ್ಷದ ಜತೆ ವಿಲೀನವಾಗಿದ್ದಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಇದರೊಂದಿಗೆ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಮಧ್ಯಂತರ ರಿಲೀಫ್ ಸಿಕ್ಕಂತಾಗಿದೆ.
ಕಾಂಗ್ರೆಸ್ ಪಕ್ಷದ ಜತೆ ಬಿಎಸ್ಪಿ ಪಕ್ಷದ ಆರು ಶಾಸಕರು ವಿಲೀನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ಈಗಾಗಲೇ ವಿಚಾರಣೆ ನಡೆಸಿದೆ. ಹೀಗಾಗಿ ನಾವು(ಸುಪ್ರೀಂಕೋರ್ಟ್ ) ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಶುಕ್ರವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸಲಿರುವ ಹಿನ್ನೆಲೆಯಲ್ಲಿ ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಬಿಜೆಪಿ ಶಾಸಕ ಮದನ್ ದಿಲಾವಾರ್ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.
ದಿಲಾವಾರ್ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ವಿಚಾರಣೆ ನಡೆಸಿದೆ. ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಯಾವುದೇ ಆದೇಶವನ್ನೂ ನೀಡುವುದಿಲ್ಲ ಎಂದು ತಿಳಿಸಿದೆ.
ಆರು ಮಂದಿ ಬಿಎಸ್ಪಿ ಶಾಸಕರು ಕಾಂಗ್ರೆಸ್ ಜತೆ ವಿಲೀನವಾಗಿದ್ದ ಬಗ್ಗೆ ಯಾವುದೇ ಮಧ್ಯಂತರ ಆದೇಶ ಹೊರಡಿಸದಿದ್ದ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ರಾಜಸ್ಥಾನ ವಿಶೇಷ ಅಧಿವೇಶನದಲ್ಲಿನ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಆರು ಬಿಎಸ್ಪಿ ಶಾಸಕರು ಮತದಾನದಲ್ಲಿ ತೊಡಗಬಹುದಾಗಿದೆ.
ಬಿಎಸ್ಪಿ ಶಾಸಕರ ವಿಚಾರದಲ್ಲಿ ರಾಜಸ್ಥಾನ ಹೈಕೋರ್ಟ್ ನೀಡಲಿರುವ ತೀರ್ಪಿನ ನಂತರ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಸೂಚಿಸಿರುವ ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.