ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಲ ಮತ್ತು ರಾಷ್ಟ್ರರಾಜಧಾನಿ ದೆಹಲಿ ಸಹಿತ ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಲವೆಡೆ ಹಿಂಸಾ ಸ್ವರೂಪವನ್ನು ತಾಳುತ್ತಿದೆ.
ಈ ಹಿನ್ನಲೆಯಲ್ಲಿ ಇಂದು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ನಡೆಸುವ ಹಕ್ಕು ಎಲ್ಲರಿಗೂ ಇದೆ ; ಆದರೆ ಹಿಂಸೆಯನ್ನು ನಡೆಸುವ ಹಕ್ಕು ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತು ಈ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಪ್ರಧಾನಿ ಮೋದಿ ಅವರು ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ.
ಆದರೆ ಪ್ರಧಾನಿ ಮೋದಿ ಅವರ ಈ ಟ್ವೀಟ್ ನೆಟ್ಟಿಗರನ್ನು ಕೆರಳಿಸಿದಂತಿದೆ. ಯುವ ಸಮುದಾಯವೇ ಅಧಿಕವಾಗಿರುವ ಟ್ವಿಟ್ಟರ್ ಲೋಕ ಮೋದಿ ಅವರ ಈ ಹೇಳಿಕೆಗೆ ಗರಂ ಆಗಿದೆ. ಪ್ರಧಾನಿ ಅವರಿಗೆ ಈ ಯೋಚನೆ ಕಾಯ್ದೆಯನ್ನು ಅಂಗೀಕಾರಗೊಳಿಸಿಕೊಳ್ಳುವ ಮೊದಲೇ ಇರಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ಕಾಯ್ದೆಯ ವಿರೋಧ ಪ್ರತಿಭಟನೆಯ ತೀವ್ರತೆಯನ್ನು ಅಂದಾಜಿಸುವಲ್ಲಿ ಕೇಂದ್ರ ಸರಕಾರ ಎಡವಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿರುವ ನಡುವೆಯೇ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಈ ರೀತಿಯ ಪ್ರತಿಭಟನೆಗಳನ್ನು ನಿರೀಕ್ಷಿಸಿರಲಿಲ್ಲ ಎಂಬುದು ಮಾತ್ರ ಸತ್ಯ.
Related Articles
ಕೆಲವು ಟ್ವಿಟ್ಟರಿಗರಂತೂ ಪ್ರಧಾನಿ ಮೋದಿ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
‘ಈ ಕಾಯ್ದೆಯನ್ನು ಜಾರಿ ಮಾಡುವ ಮುನ್ನವೇ ಬಹಿರಂಗ ಚರ್ಚೆ ನಡೆಸಬೇಕಿತ್ತಲ್ಲವೇ ಬೂಮರ್ ಅಂಕಲ್’ ಎಂದು ಓರ್ವ ಟ್ವಿಟ್ಟರಿಗ ಪ್ರತಿಕ್ರಿಯಿಸಿದ್ದಾರೆ.
‘ವಿದ್ಯಾರ್ಥಿಗಳ ಮೇಲೆ ಟಿಯರ್ ಗ್ಯಾಸ್ ಬಳಸುವುದು, ಪೊಲೀಸ್ ಬಲ ಪ್ರದರ್ಶನ ಮತ್ತು ಗುಂಡು ಹಾರಿಸುವುದು ನಿಮ್ಮ ಅತಿರೇಕವಲ್ಲದೇ ಇನ್ನೇನು?’ ಎಂದು ಇನ್ನೋರ್ವ ಟ್ವಿಟ್ಟರಿಗ ಕಿಡಿ ಕಾರಿದ್ದಾರೆ.
‘ವದಂತಿ ಹರಡುವುದರ ವಿರುದ್ಧ ನೀವು ಮಾತನಾಡುವುದನ್ನು ಕೇಳಲು ಖುಷಿಯಾಗುತ್ತಿದೆ. ಆದರೆ ಧರಿಸಿಕೊಂಡಿರುವ ಬಟ್ಟೆಯಿಂದ ಅವರನ್ನು ಗುರುತಿಸಿ ಎಂದು ನೀವು ಹೇಳಿದ್ದಾದರೂ ಯಾರ ಕುರಿತಾಗಿ’ ಎಂದು ಇನ್ನೊಬ್ಬ ಟ್ವಿಟ್ಟರಿಗ ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲ ಪ್ರಯೋಗ ನಡೆಸಿದ ಕ್ರಮಕ್ಕೆ ಟ್ವಿಟ್ಟರ್ ಲೋಕ ಪ್ರಧಾನಿ ಮೋದಿ ಮತ್ತು ಸರಕಾರದ ವಿರುದ್ಧ ಗರಂ ಆದಂತಿರುವುದು ಮೇಲ್ನೋಟಕ್ಕೆ ತೋರಿಬರುತ್ತಿದೆ.