Advertisement

ಸರ್ಕಾರಿ ಗ್ರಂಥಾಲಯಗಳ ಪುಸ್ತಕಗಳಿನ್ನು ಬೆರಳ ತುದಿಯಲ್ಲಿ

06:00 AM Aug 05, 2018 | Team Udayavani |

ಬೆಂಗಳೂರು: ರಾಜ್ಯದ ಗ್ರಂಥಾಲಯಗಳಲ್ಲಿರುವ ಪುಸ್ತಕಗಳು ಆನ್‌ಲೈನ್‌ನಲ್ಲೂ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ. ಓದುಗರಿಗೆ ಸುಲಭವಾಗಿ ಪುಸ್ತಕ ತಲುಪಿಸಲು ಗ್ರಾಮ ಪಂಚಾಯಿತಿ, ನಗರ, ಜಿಲ್ಲಾ ಹಾಗೂ ರಾಜ್ಯ ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶ ನೀಡಲು ಬೇಕಾದ ಪ್ರಸ್ತಾವನೆ ಗ್ರಂಥಾಲಯ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅತಿ ಶೀಘ್ರದಲ್ಲಿ ಡಿಜಿಟಲೀಕಣ ಪ್ರಕ್ರಿಯೆ ಆರಂಭವಾಗಲಿದೆ.

Advertisement

ರಾಜಧಾನಿಯಲ್ಲಿರುವ ಒಂದು ಕೇಂದ್ರ ಗ್ರಂಥಾಲಯ, 26 ನಗರ ಗ್ರಂಥಾಲಯ, 30 ಜಿಲ್ಲಾ ಗ್ರಂಥಾಲಯ, 5,766 ಗ್ರಾಮ ಪಂಚಾಯಿತಿ ಗ್ರಂಥಾಲಯ, 490 ಶಾಖಾ ಗ್ರಂಥಾಲಯ ಮತ್ತು 976 ಇತರೆ ಗ್ರಂಥಾಲಯಗಳು ಸೇರಿದಂತೆ ರಾಜ್ಯದಲ್ಲಿ 7,239 ಗ್ರಂಥಾಲಯಗಳಿವೆ. 41.10 ಲಕ್ಷ ಪುರುಷರು ಹಾಗೂ 42.18 ಲಕ್ಷ ಮಹಿಳೆಯರು ಸೇರಿ 83.28 ಲಕ್ಷ ಸದಸ್ಯರಿದ್ದಾರೆ. ಎಲ್ಲ ಗ್ರಂಥಾಲಗಳಲ್ಲಿ ಒಟ್ಟು 1.64 ಕೋಟಿ ಪುಸ್ತಕಗಳಿವೆ. ಇವುಗಳೆಲ್ಲವೂ ಡಿಜಿಟಲೀಕರಣ ಪ್ರಕ್ರಿಯೆಗೆ ಒಳಪಡಲಿವೆ.

ಪುಸ್ತಕ ಕ್ಲೌಡ್ಗೆ ಅಳವಡಿಕೆ:
ಕನ್ನಡ, ಇಂಗ್ಲಿಷ್‌, ಹಿಂದಿ ಸಹಿತವಾಗಿ ಅಗತ್ಯವಿರುವ ಎಲ್ಲ ಭಾಷೆಯ ಪುಸ್ತಕ ಆನ್‌ಲೈನ್‌ನಲ್ಲೇ ಓದುಗರಿಗೆ ತಲುಪಿಸಲು ಬೇಕಾದ ಸಿದ್ಧತೆ ನಡೆದಿದೆ. ಇದಕ್ಕಾಗಿ ಸಂಬಂಧಪಟ್ಟ ಲೇಖಕರಿಂದ ಪುಸ್ತಕ ಖರೀದಿಸುವ ಜತೆಗೆ ಗ್ರಂಥಾಲಯದಲ್ಲಿ ಇರುವ ಪುಸ್ತಕವನ್ನೂ ಕ್ಲೌಡ್ ಕಂಪ್ಯೂಟಿಂಗ್‌ ಮೂಲಕ ಆನ್‌ಲೈನ್‌ ವ್ಯವಸ್ಥೆಗೆ ಜೋಡಿಸಲಾಗುತ್ತದೆ. ಪುಸ್ತಕದ ಹಕ್ಕುಸ್ವಾಮ್ಯ(ಕಾಪಿರೈಟ್‌) ಸಮಸ್ಯೆ ತಪ್ಪಿಸಲು ಲೇಖಕರಿಂದ ಇದಕ್ಕಾಗಿ ಒಪ್ಪಿಗೆ ಪತ್ರ ಪಡೆಯಲಾಗುತ್ತದೆ. ಕ್ಲೌಡ್ನ‌ಲ್ಲಿರುವ ಪುಸ್ತಕ ಗ್ರಂಥಾಲಯ ಸದಸ್ಯರ ಸಹಿತವಾಗಿ ಎಲ್ಲರೂ ಪಡೆಯಬಹುದು ಎಂದು ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಪುಸ್ತಕ ಆಯ್ಕೆಯ ಸಂದರ್ಭದಲ್ಲಿ ಲೇಖಕರಿಂದ ಪುಸ್ತಕದ ಮೂಲ ಪ್ರತಿಯ ಜತೆಗೆ ಸಾಫ್ಟ್ ಕಾಪಿ(ಟೈಪ್‌ ಮಾಡಿರುವ ಪ್ರತಿ) ಪಡೆದುಕೊಳ್ಳಲಾಗುತ್ತಿದೆ. ಗ್ರಂಥಾಲಯ ಇಲಾಖೆ ಈಗಾಗಲೇ ಆಯ್ಕೆ ಮಾಡಿರುವ ಬಹುತೇಕ ಪುಸ್ತಕದ ಸಾಫ್ಟ್ಕಾಪಿ ಸಿದ್ಧವಿದೆ. ಮೊದಲ ಹಂತದಲ್ಲಿ ಆ ಎಲ್ಲ ಪುಸ್ತಕಗಳನ್ನು ಕ್ಲೌಡ್ಗೆ ಅಳವಡಿಸಲಾಗುತ್ತದೆ.

ಬಳಸುವುದು ಹೇಗೆ?
ಗ್ರಂಥಾಲಯ ಇಲಾಖೆ ಕ್ಲೌಡ್ ಕಂಪ್ಯೂಟಿಂಗ್‌ ವ್ಯವಸ್ಥೆಯೊಳಗೆ ಪುಸ್ತಕ ಅಪ್‌ಲೋಡ್‌ ಆದ ಬಳಿಕ ವೆಬ್‌ಸೈಟ್‌ನಲ್ಲಿ ಲಾಗ್‌ಇನ್‌ ಆಗಿ ಪುಸ್ತಕಗಳನ್ನು  ಸುಲಭವಾಗಿ ಪಡೆಯಬಹುದು. ಇದು ಸಂಪೂರ್ಣ ಉಚಿತವಾಗಿರುತ್ತದೆ. ಡಿಜಿಟಲ್‌ ರೈಟ್ಸ್‌ ಮ್ಯಾನೇಜಮೆಂಟ್‌ ಪ್ರೊಟೆಕ್ಟೆಡ್‌(ಡಿಆರ್‌ಎಂಪಿ) ವ್ಯವಸ್ಥೆ ಅಳವಡಿಸಲಾಗಿರುತ್ತದೆ. ಹೀಗಾಗಿ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್‌, ಕಿಂಡ್ಲ್ ರೀಡರ್‌ ಇತ್ಯಾದಿ ಉಪಕರಣಗಳಲ್ಲಿ ಓದಬಹುದೇ ಹೊರತು ಡೌನ್‌ಲೋಡ್‌ ಅಥವಾ ಸೇವ್‌(ಉಳಿಸಿಕೊಳ್ಳಲು) ಮಾಡಲು ಸಾಧ್ಯವಿಲ್ಲ. ಒಂದು ಪುಸ್ತಕ ಓದಲು 15 ದಿನದ ಕಾಲಾವಕಾಶ ನೀಡಲಾಗುತ್ತದೆ. 16ನೇ ದಿನಕ್ಕೆ ಆ ಪುಸ್ತಕ ತನ್ನಿಂದ ತಾನಾಗಿಯೇ ಅಕೌಂಟ್‌ನಿಂದ ಕಣ್ಮರೆಯಾಗುತ್ತದೆ. ಮತ್ತೆ ಅದೇ ಪುಸ್ತಕ ಬೇಕೆಂದರೆ ಕ್ಲೌಡ್ ಮೂಲಕ ಹೊಸದಾಗಿ ಪಡೆಯಬೇಕಾಗುತ್ತದೆ.

Advertisement

ಬೇರೆ ಗ್ರಂಥಾಲಯಗಳಿಗೆ ಲಿಂಕ್‌
ರಾಜ್ಯ ಗ್ರಂಥಾಲಯದ ಪುಸ್ತಕ ಮಾತ್ರವಲ್ಲದೇ ವಿಶ್ವವಿದ್ಯಾಲಯಗಳ ಪ್ರಸಾರಂಗ ಪ್ರಕಟಿಸುವ ಪ್ರಮುಖ ಪುಸ್ತಕಗಳನ್ನೂ ಜನ ಸಾಮಾನ್ಯರಿಗೆ ಆನ್‌ಲೈನ್‌ ಮೂಲಕ ಒದಗಿಸಲು ಇಲಾಖೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಇ-ಗ್ರಂಥಾಲಯ, ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯ, ಹೊರರಾಜ್ಯಗಳ ವಿಶ್ವವಿದ್ಯಾಲಯದ ಗ್ರಂಥಾಲಯಗಳಿಗೆ ನೇರ ಲಿಂಕ್‌ ಕಲ್ಪಿಸಲಾಗುತ್ತದೆ. ಇದರಿಂದ ಸುಮಾರು 1 ಕೋಟಿಗೂ ಅಧಿಕ ಪುಸ್ತಕ ಹೆಚ್ಚುವರಿಯಾಗಿ ಆನ್‌ಲೈನ್‌ನಲ್ಲಿ ಸಿಗಲಿದೆ.

ಸದಸ್ಯತ್ವ ಸಂಖ್ಯೆ ಏರಿಕೆ
2015 - 16ರಲ್ಲಿ ರಾಜ್ಯದಲ್ಲಿ 6777 ಗ್ರಂಥಾಲಯಗಳಿದ್ದು, 18.20 ಲಕ್ಷ ಮಂದಿ ಸದಸ್ಯತ್ವ ಹೊಂದಿದ್ದರು. 2017-18ನೇ ಸಾಲಿಗೆ ಗ್ರಂಥಾಲಯಗಳ ಸಂಖ್ಯೆ 7239ಕ್ಕೆ ಏರಿಕೆಯಾಗಿದೆ. ಹಾಗೆಯೇ ಸದಸ್ಯತ್ವ ಸಂಖ್ಯೆ ಕೂಡ 83.28 ಲಕ್ಷಕ್ಕೆ ಏರಿಕೆಯಾಗಿದೆ. ಸದಸ್ಯರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಗ್ರಂಥಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಇಳಿಕೆಯಾಗಿದೆ. ಪುಸ್ತಕ ಎರವಲು ಪಡೆಯುವುದಕ್ಕಾಗಿಯೇ ಸದಸ್ಯರಾಗುವವರು ಹೆಚ್ಚಾಗಿದ್ದಾರೆ.

ಗ್ರಂಥಾಲಯ ಡಿಜಿಟಲೀಕರಣದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅತಿ ಶೀಘ್ರದಲ್ಲಿ ಅನುಮತಿ ಸಿಗಲಿದೆ. ಆರಂಭದಲ್ಲಿ ಇಲಾಖೆಯಲ್ಲಿ ಲಭ್ಯವಿರುವ ಪುಸ್ತಕ ಕೌಡ್‌ಗೆ ಅಪ್‌ಲೋಡ್‌ ಮಾಡುತ್ತೇವೆ. ನಂತರ ಆನ್‌ಲೈನ್‌ನಲ್ಲೇ ಗ್ರಂಥಾಲಯದ ಸದಸ್ಯತ್ವ ನೀಡುವ ವ್ಯವಸ್ಥೆಗೂ ಚಾಲನೆ ನೀಡಲಿದ್ದೇವೆ.
– ಸತೀಶ್‌ ಕುಮಾರ್‌ ಎಸ್‌.ಹೊಸಮನಿ, ನಿರ್ದೇಶಕ, ಗ್ರಂಥಾಲಯ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next