Advertisement

ಟಾಕೀಸ್ ಕದ ತಟ್ಟಿದ ಬುಕ್ಸ್‌ ಆಫೀಸ್‌ ಹಿಟ್‌

06:00 AM Oct 26, 2018 | |

ಕನ್ನಡದಲ್ಲಿ ಕಥೆ ಇಲ್ಲ ಅನ್ನೋರಿಗೆ ಕಣ್ಣ ಮುಂದೆ ಹೊಸಬರ ಗಟ್ಟಿ ಕಥೆವುಳ್ಳ ಚಿತ್ರಗಳು ಬರುತ್ತಿವೆ. ಹಾಗೆಯೇ, ಕಾಲ ಬದಲಾದಂತೆ ಕಥೆಯೊಳಗಿನ ಹೂರಣದ ರುಚಿಯೂ ಬದಲಾಗಿದೆ ಎಂದು ಕೊರಗುವವರಿಗೆ ಕಾದಂಬರಿ ಆಧಾರಿತ ಚಿತ್ರಗಳೂ ತಯಾರಾಗುತ್ತಿವೆ. ಟ್ರೆಂಡ್‌ ಸಿನಿಮಾಗೇ ಅಂಟಿಕೊಂಡ ಪ್ರೇಕ್ಷಕನ ನೋಟ,ತನ್ನತ್ತ ಬೀರುವಂತೆ ಮಾಡುವ ಕಾದಂಬರಿ ಆಧರಿಸಿದ ಚಿತ್ರಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗೆ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳು ಬಂದಿವೆ ಎಂಬುದೇ ಹೆಮ್ಮೆಯ ವಿಷಯ. 

Advertisement

ಕಮರ್ಷಿಯಲ್‌ ಚಿತ್ರಗಳ ನಡುವೆಯೂ ಸದ್ದಿಲ್ಲದೆಯೇ ಕಾದಂಬರಿ ಚಿತ್ರಗಳು ತಯಾರಾಗುತ್ತಿದ್ದು, ತಕ್ಕಮಟ್ಟಿಗಾದರೂ ಜೀವಂತಿಕೆ ಉಳಿಸಿಕೊಳ್ಳುತ್ತಿವೆ ಎಂಬುದು ಸಮಾಧಾನ. ಕನ್ನಡದಲ್ಲಿ ಯಥೇತ್ಛವಾಗಿ ಕಾದಂಬರಿ ಆಧಾರಿತ ಚಿತ್ರಗಳು ಬರದೇ ಇದ್ದರೂ,
ಬರುವುದನ್ನು ನಿಲ್ಲಿಸಿಲ್ಲ ಎಂಬ ಮಾತು ಸತ್ಯ. ಗ್ರಾಮರ್‌ ಕಾಣದ ಗ್ಲಾಮರ್‌ ಚಿತ್ರಗಳೊಂದಿಗೆ ಪೈಪೋಟಿ ನಡೆಸದಿದ್ದರೂ ಅಲ್ಲಲ್ಲಿ ಒಂದಷ್ಟು ಗಮನಸೆಳೆಯುವ ಮೂಲಕ ಈಗಲೂ ನಂಟು ಉಳಿಸಿಕೊಂಡ ಚಿತ್ರಗಳ ಕುರಿತು ಒಂದಷ್ಟು…

ಕಪ್ಪು-ಬಿಳುಪು ಕಾಲದಿಂದಲೂ ಕಾದಂಬರಿಯ “ನಂಟು’ ಕನ್ನಡ ಚಿತ್ರರಂಗದ “ಗಂಟು’ ಎಂಬುದನ್ನು ಒಪ್ಪಿಕೊಳ್ಳಲೇಬೇಕು. 1962 ರಲ್ಲಿ ಮೂಡಿಬಂದ “ಕರುಣೆಯೇ ಕುಟುಂಬದ ಕಣ್ಣು’ ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಚಿತ್ರ. ಕೃಷ್ಣಮೂರ್ತಿ ಪುರಾಣಿಕರ “ಧರ್ಮ ದೇವತೆ’ ಕಾದಂಬರಿ ಆಧರಿಸಿ, ಟಿ.ವಿ. ಸಿಂಗ್‌ ಠಾಕೂರ್‌ ನಿರ್ದೇಶಿಸಿದ್ದರು.

ಡಾ.ರಾಜಕುಮಾರ್‌ ಅಭಿನಯದ ಈ ಚಿತ್ರ ಆ ಕಾಲಕ್ಕೇ ಅತ್ಯಂತ ಜನಪ್ರಿಯವಾಗಿತ್ತು. ಡಾ.ರಾಜಕುಮಾರ್‌ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರದಲ್ಲಿ ನಟಿಸಿದ್ದಷ್ಟೇ ಅಲ್ಲ, ಅವರ ಕೊನೆಯ ಚಿತ್ರ “ಶಬ್ದವೇಧಿ’ ಚಿತ್ರ ಕೂಡ ವಿಜಯ್‌ ಸಾಸನೂರ್‌ ಅವರ “ಶಬ್ದವೇಧಿ’ ಕಾದಂಬರಿ ಆಧರಿಸಿದ ಚಿತ್ರ ಎಂಬುದು ವಿಶೇಷ. 1962 ರಿಂದ ಹಿಡಿದು 2018ರ ತನಕವೂ ಕನ್ನಡದಲ್ಲಿ ಕಾದಂಬರಿ ಆಧರಿಸಿದ ಚಿತ್ರಗಳು ಬರುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅತೀ ಹೆಚ್ಚು ಕಾದಂಬರಿ ಆಧರಿಸಿದ ಚಿತ್ರಗಳಲ್ಲಿ ಡಾ.ರಾಜಕುಮಾರ್‌ ನಟಿಸಿದ್ದಾರೆ ಎಂಬುದು ಇತಿಹಾಸ.

ಹಾಗೊಮ್ಮೆ ಲೆಕ್ಕ ಹಾಕಿದರೆ ಸುಮಾರು 25 ಕ್ಕೂ ಹೆಚ್ಚು ಕಾದಂಬರಿ ಆಧರಿಸಿದ ಚಿತ್ರಗಳಲ್ಲಿ ರಾಜಕುಮಾರ್‌ ನಟಿಸಿದ್ದಾರೆ. ಆ ಕಾಲಕ್ಕೇ ಕಾದಂಬರಿ ಚಿತ್ರಗಳು ಅತ್ಯಂತ ಜನಪ್ರಿಯಗೊಂಡಿದ್ದವು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಕಾಲ ಬದಲಾದಂತೆ ಕನ್ನಡ ಪ್ರೇಕ್ಷಕ ಚಿತ್ರ ನೋಡುವ ಧಾಟಿಯನ್ನೂ ಬದಲಿಸಿಕೊಂಡ. ಅದಕ್ಕೆ ತಕ್ಕಂತಹ ಚಿತ್ರಗಳೂ ಬರತೊಡಗಿದವು. ಎಲ್ಲೋ ಒಂದು ಕಡೆ ಕಾದಂಬರಿ ಆಧರಿಸಿದ ಚಿತ್ರಗಳು ನಿಂತೇ ಹೋದವು ಎಂಬ ಪುಕಾರು ಎಲ್ಲೆಡೆ ಎದ್ದಿತು. ಆದರೆ, ಕಾದಂಬರಿ ಆಧಾರಿತ ಚಿತ್ರಗಳು ಬರುತ್ತಲೇ ಇಲ್ಲ ಎಂಬ ವಾದ ಅಪ್ಪಟ ಸುಳ್ಳು. ಕಾಲಕ್ರಮೇಣ ಕಾದಂಬರಿ ಚಿತ್ರಗಳ ಸಂಖ್ಯೆ ಕುಂಠಿತವಾಗಿರಬಹುದೇ ಹೊರತು, ಕಾದಂಬರಿ ಚಿತ್ರಗಳು ನಿಂತಿಲ್ಲ. ಇಂದಿಗೂ ಕಾದಂಬರಿ ಚಿತ್ರಗಳು ಜೀವಂತ ಎಂಬುದಕ್ಕೆ, ಅಲ್ಲೊಂದು, ಇಲ್ಲೊಂದು ಸದ್ದಿಲ್ಲದೆಯೇ ಸುದ್ದಿಯಾಗುತ್ತಿರುವುದೇ
ಕಣ್ಣೆದುರಿನ ಸಾಕ್ಷಿ.

Advertisement

ಅಷ್ಟಕ್ಕೂ ಕಾದಂಬರಿ ಚಿತ್ರಗಳು ಕನ್ನಡದಲ್ಲಿ ಈಗಲೂ ಬರುತ್ತಿವೆಯಾ? ಎಂದರೆ, ಹೆಚ್ಚಿಲ್ಲದಿದ್ದರೂ, ವರ್ಷಕ್ಕೆ ಬೆರಳೆಣಿಕೆಯಷ್ಟು ಕಾದಂಬರಿ ಚಿತ್ರಗಳಾಗುತ್ತಿವೆ ಎಂಬುದೇ ಸಮಾಧಾನ. ಈಗಾಗಲೇ ಕನ್ನಡದಲ್ಲಿ ಅದೆಷ್ಟೋ ಕಾದಂಬರಿ ಕುರಿತಾದ ಚಿತ್ರಗಳು ಬಂದು ಹೋಗಿವೆ. ಈಗಲೂ ಬರುತ್ತಲೂ ಇವೆ. ಆದರೆ, ಆ ಚಿತ್ರಗಳೇಕೆ ಗಮನಸೆಳೆಯುವುದಿಲ್ಲ ಎಂಬ ದೊಡ್ಡ ಪ್ರಶ್ನೆಯೂ ಇದೆ. ಇದಕ್ಕೆ ಕಾರಣ, ಹೊಸಬರ ಸ್ಪರ್ಶ. ಹಾಗಾಗಿ ಕಾದಂಬರಿ ಚಿತ್ರಗಳು ಬಂದು ಹೋಗುವ ಸದ್ದು ಕೇಳಿಸುವುದೇ ಇಲ್ಲ. ಹಾಗಾದರೆ ಕಾದಂಬರಿ ಚಿತ್ರಗಳು ಸದ್ದು ಮಾಡಬೇಕಾದರೆ ಸ್ಟಾರ್‌ ನಟರೇ ಇರಬೇಕಾ? ಈ ಪ್ರಶ್ನೆ ಎದುರಾಗಬಹುದು.

ಖಂಡಿತ ಇಲ್ಲಿ ಸ್ಟಾರ್‌ನಟರ ಅವಶ್ಯಕತೆ ಇಲ್ಲ. ಇಂದಿಗೂ ಅದೆಷ್ಟೋ ಒಳ್ಳೆಯ ಕಾದಂಬರಿಗಳಿವೆ.ಅವುಗಳು ದೃಶ್ಯರೂಪ ತಾಳುವಂತಾಗಬೇಕು.ಈಗಿನ ಕಮರ್ಷಿಯಲ್‌ ಮಾರ್ಕೆಟ್‌ನ ಆಳದಲ್ಲಿ ಕಾದಂಬರಿ ಚಿತ್ರಗಳು ಹೂತು ಹೋಗುತ್ತಿವೆ. ಅದೇ, ಕಾದಂಬರಿ ಆಧರಿತ ಚಿತ್ರದಲ್ಲಿ ಸ್ಟಾರ್‌ ನಟ ಕಾಣಿಸಿಕೊಳ್ಳುತ್ತಿದ್ದಾನೆ ಅಂದರೆ ಮಾತ್ರ, ಆ ಕಾದಂಬರಿಗೆ ಜೀವ ಬಂದಂತಾಗುತ್ತದೆ.

ಹಾಗಾದರೆ, ಇಲ್ಲಿ ಸ್ಟಾರ್‌ಗಷ್ಟೇ ಬೆಲೆನಾ? ಕಾದಂಬರಿಗಳಿಗಿಲ್ಲವೇ? ಎಂಬ ಮತ್ತೂಂದು ಪ್ರಶ್ನೆಗೆ ಉತ್ತರ, ವಾಸ್ತವ ನೆಲೆಗಟ್ಟಿನಲ್ಲಿ ಕಾದಂಬರಿ ಚಿತ್ರಗಳನ್ನು ಅಪ್ಪಿಕೊಳ್ಳುವ ಸ್ಟಾರ್‌ನಟರು ಕಮ್ಮಿ. ಸ್ಟಾರ್‌ ವ್ಯಾಲ್ಯು ಇರುವ ಅದೆಷ್ಟೋ ಕಾದಂಬರಿಗಳಿದ್ದರೂ, ಸ್ಟಾರ್‌ಗಳು
ಅತ್ತ ಚಿತ್ತಹರಿಸುತ್ತಿಲ್ಲ. ಹಾಗೇನಾದರೂ ಆದಲ್ಲಿ, ನಿರಂತರ ಕಾದಂಬರಿ ಚಿತ್ರಗಳದ್ದೇ ಕಾರುಬಾರು.ಸ್ಟಾರ್ಗಳು ಗಮನಿಸದಿರುವುದಕ್ಕೆ ಕಾದಂಬರಿ ಚಿತ್ರಗಳು ಸದ್ದಾಗದಿರಲು ಇದೂ ಕಾರಣವೆಂದರೆ ತಪ್ಪಿಲ್ಲ. ಹಾಗಂತ,ಕಾದಂಬರಿ ಚಿತ್ರಗಳು ನಿಂತ ನೀರಾಗಿಲ್ಲ ಎಂಬುದೂ ಅಷ್ಟೇ ಸ್ಪಷ್ಟ ಹಾಗೂ ಖುಷಿಯ ವಿಚಾರ.

ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿ ವರ್ಷ ಬೆರಳೆಣಿಕೆಯಷ್ಟು ಕಾದಂಬರಿ ಚಿತ್ರಗಳು ತಯಾರಾಗುತ್ತಲೇ ಇವೆ. ಜೋರು ಸದ್ದು ಮಾಡದೇ ಇದ್ದರೂ, ತಕ್ಕಮಟ್ಟಿಗಾದರೂ ಸುದ್ದಿಯಾಗುತ್ತಿವೆ.ಇವುಗಳಿಗೆ ಮಾರ್ಕೆಟ್‌ ಇಲ್ಲ ಎಂಬುದು ಬಿಟ್ಟರೆ, ಕನ್ನಡದ ಸತ್ವ ಇದೆ ಎಂಬುದನ್ನು ಒಪ್ಪಲೇಬೇಕು. ಕಾದಂಬರಿ ಇಟ್ಟುಕೊಂಡು ಸಿನಿಮಾ ಮಾಡಿದರೆ, ಕಮರ್ಷಿಯಲ್‌ ಆಗಿ ವಕೌìಟ್‌ ಆಗುತ್ತಾ ಎಂಬ ಅನುಮಾನ
ದಟ್ಟವಾಗಿದೆ. ಇದರ ನಡುವೆಯೂ ಒಂದಷ್ಟು ಪ್ರಯೋಗ ನಡೆಯುತ್ತಿವೆ. ಅಲ್ಲಿ ಕಮರ್ಷಿಯಲ್‌ ಸಾರವಿರದಿದ್ದರೂ, ಕಥೆಯ ಸತ್ವ ಇರುತ್ತೆ. ಅದೊಂದೇ ಕಾದಂಬರಿ ಚಿತ್ರಗಳ ಜೀವಂತಿಕೆ ಎನ್ನಬಹುದು. ಇಲ್ಲಿ ಜೀವಂತಿಕೆಯ ಪ್ರಸ್ತಾಪ ಯಾಕೆಂದರೆ, ಇಂದಿಗೂ ಕಾದಂಬರಿ ಆಧರಿಸಿದ ಚಿತ್ರಗಳು ಕನ್ನಡ ಪ್ರೇಕ್ಷಕರ ಮನದಾಳದಲ್ಲಿ ಅಚ್ಚಳಿಯದೆ ಉಳಿದಿವೆ ಎಂಬುದು. ತರಾಸು ಅವರ “ನಾಗರಹಾವು’, ಅಶ್ವತ್ಥ ಅವರ “ರಂಗನಾಯಕಿ’, ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ “ಜೀವನ ಚೈತ್ರ’ ಹೀಗೆ ಒಂದಾ, ಎರಡಾ ಕನ್ನಡ
ಚಿತ್ರರಂಗ ಕಂಡ ಮೇರು ನಟರೆಲ್ಲರೂ ನಟಿಸಿದ ಕಾದಂಬರಿ ಚಿತ್ರಗಳು ಇಂದಿಗೂ ಕಾಡುತ್ತಿವೆ. ಅದು ಸಾಹಿತ್ಯದೊಳಗಿರುವ ಹೂರಣವಲ್ಲದೆ ಮತ್ತೇನು?ಇನ್ನು, ಕಾಲಕ್ರಮೇಣ ಚಿತ್ರರಂಗದ ಟ್ರೆಂಡ್‌ ಬದಲಾದಂತೆ, ಕಾದಂಬರಿ ಚಿತ್ರಗಳ ಸಂಖ್ಯೆಯೂ
ಕಡಿಮೆಯಾಗುತ್ತಾ ಬಂತಾದರೂ, ಕಾದಂಬರಿ ಚಿತ್ರಗಳು ನಿಂತ ನೀರಾಗದೆ, ರಭಸವಾಗಿ ಹರಿಯುವ ನದಿಯಾಗದಿದ್ದರೂ, ತುಂತುರು ಮಳೆಹನಿಗಳಂತೆ ಕನ್ನಡದಲ್ಲಿ ಒಂದಷ್ಟು ಚಿತ್ರಗಳು ಸೆಟ್ಟೇರಿವೆ, ಸೆಟ್ಟೇರುತ್ತಲೇ ಇವೆ. ಇಲ್ಲಿ ಗಮನಿಸಬೇಕಾದ ಮತ್ತೂಂದು ಸೂಕ್ಷ್ಮವಿಷಯವೂ ಇದೆ. ಇತ್ತೀಚೆಗೆ ಬಹುತೇಕ ಹೊಸಬರೇ ಕಾದಂಬರಿ ಹಿಂದೆ ಹೊರಟಿದ್ದಾರೆ. 

ಹಾಗೆ ಹೆಸರಿಸುವುದಾದರೆ, ಡಾ. ವೈದೇಹಿ ಅವರ ಮೂರು ಕಾದಂಬರಿ ಆಧರಿಸಿ, ನಿರ್ದೇಶಕಿ ಚಂಪಾಶೆಟ್ಟಿ  “ಅಮ್ಮಚ್ಚಿಯೆಂಬ ನೆನಪು’ ಚಿತ್ರ ಮಾಡಿದ್ದಾರೆ. ಹನುಮಂತ ಹಾಲಿಗೇರಿ ಅವರ “ಕೆಂಗುಲಾಬಿ’ ಕಾದಂಬರಿ ಕೂಡ ಅದೇ ಹೆಸರಿನ ಚಿತ್ರವಾಗಿದೆ. ಈಗಾಗಲೇ ತೇಜಸ್ವಿ ಅವರ “ಕಿರಗೂರಿನ ಗಯ್ನಾಳಿಗಳು’ ಸದ್ದು ಮಾಡಿದ ಬಗ್ಗೆಯೂ ಗೊತ್ತಿದೆ. ಇನ್ನು, ಸರಜೂ ಕಾಟ್ಕರ್‌ ಅವರ “ದೇವರಾಯ’ ಕಾದಂಬರಿ “ಇಂಗಳೆ ಮಾರ್ಗ’ಕೂಡ ಚಿತ್ರವಾಗಿ ಮೆಚ್ಚುಗೆ ಪಡೆದಿದೆ. ಇದರೊಂದಿಗೆ “ಬರಗಾಲ’ ಎಂಬ ಕಾದಂಬರಿ ಕೂಡ ಅದೇ ಹೆಸರಿನ ಚಿತ್ರವಾಗಿದೆ. ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿ “ದನಗಳು’, “ಒನಕೆ ಓಬವ್ವ’ ಮತ್ತು “ಕಾಲೇಜ್‌’ ಚಿತ್ರಗಳಾಗಿವೆ. ವೇಣು ಅವರ ಕಾದಂಬರಿ ಆಧರಿಸಿ ಈಗ “ಗಂಡುಗಲಿ ವೀರ ಮದಕರಿ ನಾಯಕ’ ಚಿತ್ರವಾಗುತ್ತಿದೆ.

ಈ ಚಿತ್ರ ಶುರುವಿಗೆ ಮುನ್ನವೇ, ದೊಡ್ಡ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದೆ. ಅದಕ್ಕೆ ಕಾರಣ, ಸ್ಟಾರ್‌ ನಟ, ಹಿರಿಯ ನಿರ್ದೇಶಕ, ಬಿಗ್‌ಬಜೆಟ್‌ ಎಂಬುದು. ಇಲ್ಲಿ ಸ್ಟಾರ್‌ನಟರು ಕಾದಂಬರಿ ಬೆನ್ನಹಿಂದೆ ಬಿದ್ದು ಐತಿಹಾಸಿಕ ಚಿತ್ರ ಮಾಡಹೊರಟಿರುವುದು ಮತ್ತೂಂದು ವಿಶೇಷ. ಇದು ಕಾದಂಬರಿ ಎಂದಿಗೂ ಜೀವಂತ ಎನ್ನುವುದಕ್ಕೆ ಸಾಕ್ಷಿಯಷ್ಟೇ. ಇಲ್ಲಿ ಕಾದಂಬರಿಗಳು ಚಿತ್ರವಾದರೂ, ಚಿತ್ರಕ್ಕೆ ಅನುಗುಣವಾಗಿ ಬೇಕಾದ ಬದಲಾವಣೆ ಇದ್ದೇ ಇರುತ್ತೆ. ಇಂತಹ ಚಿತ್ರಗಳಲ್ಲಿ ಸವಾಲಿದ್ದರೂ, ಹೆಸರಿನ ಜೊತೆಗೆ ಯಶಸ್ಸು ಸಿಕ್ಕರೆ ಮತ್ತೂಂದಷ್ಟು ಕಾದಂಬರಿಯಾಧಾರಿತ ಚಿತ್ರಗಳು ಬರುವುದರಲ್ಲಿ ಸಂದೇಹವಿಲ್ಲ

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next