Advertisement

ವಿದ್ಯಾರ್ಥಿಗಳಿಗೆ ಪುಸ್ತಕ ಭಾಗ್ಯ

06:00 AM Jul 20, 2018 | |

ಎಸ್‌ಡಿಎಂ ಕಾಲೇಜಿನ ಬಿಬಿಎ ವಿಭಾಗ “ಪೇಪರ್‌ ಪೂಲ್‌ಕಾಂಪೇಯ್ನ’ ಎಂಬ ಹೊಸ ಸಮಾಜಮುಖಿ ಕಾರ್ಯವನ್ನು ಕೈಗೊಂಡು, ಆವಶ್ಯಕತೆ ಇರುವವರ ಮುಖದಲ್ಲಿ ಮಂದಹಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಪುಸ್ತಕದ ಅಗತ್ಯ ಇದ್ದ ಸೌಲಭ್ಯ ವಂಚಿತ ಮಕ್ಕಳ ಬಾಳಿನಲ್ಲಿ ಹೊಸ ಆಶಾಕಿರಣವನ್ನು  ಸೃಷ್ಟಿಸಿ, ಆದರ್ಶ ಸೇವೆಯನ್ನು ಮಾಡಿ ಆದರ್ಶಪ್ರಾಯರಾಗಿದ್ದಾರೆ ಎಸ್‌ಡಿಎಂ ಕಾಲೇಜಿನ ಬಿಬಿಎ ವಿದ್ಯಾರ್ಥಿಗಳು. 

Advertisement

ಏನಿದು ಪೇಪರ್‌ ಪೂಲ್‌ ಕಾಂಪೇಯ್ನ ?
ಸಾಮಾನ್ಯವಾಗಿ ನಾವೆಲ್ಲ ಉಪಯೋಗಿಸಿದ ನೋಟು ಪುಸ್ತಕಗಳಲ್ಲಿ ಕಾಗದ ಉಳಿದರೆ ಅದನ್ನು ಹಾಗೆಯೇ ಬಿಟ್ಟು ವ್ಯರ್ಥ ಮಾಡುತ್ತೇವೆ. ಅದನ್ನು ಮರಳಿ ಬಳಸುವ ಗೋಜಿಗೆ ಹೋಗುವುದಿಲ್ಲ. ಈ ಶೈಕ್ಷಣಿಕ ವರ್ಷ ಮುಕ್ತಾಯವಾಗುತ್ತಿದ್ದಂತೆ, ಅವುಗಳನ್ನು ಒಂದು ಮೂಲೆಯಲ್ಲಿ ಬಿಸಾಡಿ, ಮತ್ತೆ ಮುಂದಿನ ವರ್ಷ ಹೊಸ ಪುಸ್ತಕಗಳನ್ನು ಕೊಳ್ಳುತ್ತಾರೆ ವಿದ್ಯಾರ್ಥಿಗಳು. ಹೀಗೆ, ಬಳಕೆಯಾಗದೇ ಉಳಿದ ಕಾಗದಗಳನ್ನು ಸಂಗ್ರಹಿಸಿ ಅವುಗಳಿಂದ ಪುಸ್ತಕಗಳನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು ತೃತೀಯ ಬಿಬಿಎ ವಿದ್ಯಾರ್ಥಿಗಳು.

ಕಾರ್ಯರೂಪಕ್ಕೆ ತಂದಾಗ 
ಈ ಯೋಜನೆಯ ರೂವಾರಿ ಬಿಬಿಎ ವಿಭಾಗದ ಅಧ್ಯಾಪಕ ಶರಶ್ಚಂದ್ರ. ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಆಲೋಚನೆಯಿಂದ ವ್ಯಾಟ್ಸಾಪ್‌ ಗ್ರೂಪ್‌ಗ್ಳಲ್ಲಿ ನಿರಂತರವಾಗಿ ಸಂದೇಶಗಳನ್ನು ರವಾನಿಸಿದರು. ಪ್ರಾರಂಭದಲ್ಲಿ ಈ ಯೋಜನೆಯ ಗುರಿ ಇದ್ದದ್ದು 4000 ಕಾಗದದ ಹಾಳೆಗಳನ್ನು ಸಂಗ್ರಹಿಸಬೇಕೆಂದು. ಆದರೆ, ವಿದ್ಯಾರ್ಥಿಗಳ ಸ್ವಆಸಕ್ತಿಯಿಂದ ಸುಮಾರು 24,900 ಕಾಗದ ಸಂಗ್ರಹವಾಯಿತು. ಆನಂತರ ಗಾತ್ರದ ಆಧಾರದ ಮೇಲೆ ಕಾಗದಗಳನ್ನು ವರ್ಗೀಕರಿಸಿ, ಮಂಜುಶ್ರೀ ಪ್ರಿಂಟರ್ ಸಹಯೋಗದೊಂದಿಗೆ 240 ಪುಸ್ತಕಗಳನ್ನು ತಯಾರಿಸಲಾಯಿತು.

ಶಾಲೆಯ ಆಯ್ಕೆ 
ಪುಸ್ತಕಗಳು ತಯಾರಾದ ಮೇಲೆ  ಯಾವ ಶಾಲೆಯ ವಿದ್ಯಾರ್ಥಿಗಳಿಗೆ ಹಂಚಬೇಕೆಂಬ ಸವಾಲು ಬಿಬಿಎ ವಿಭಾಗಕ್ಕೆ ಎದುರಾಯಿತು. ನಂತರ ಬೆಳ್ತಂಗಡಿ ಆಸುಪಾಸಿನ ಸರಕಾರಿ ಶಾಲೆಗಳನ್ನು ಭೇಟಿ ಮಾಡಿ, ಮಾಹಿತಿಗಳನ್ನು ಸಂಗ್ರಹಿಸಿ, ಹೆಚ್ಚಿನ ಅಗತ್ಯತೆ ಇರುವ ಶಾಲೆಯನ್ನು ಪಟ್ಟಿ ಮಾಡಲಾಯಿತು.ಅಲ್ಲಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೊನೆಗೆ ನಾರಾವಿ ಸಮೀಪದ ಕುತ್ಲೂರು ಸರಕಾರಿ ಶಾಲೆಯನ್ನು ಪುಸ್ತಕ ವಿತರಣೆಗೆ ಆಯ್ಕೆ ಮಾಡಲಾಯಿತು.ಇಲ್ಲಿನ 46 ಅವಕಾಶ ವಂಚಿತ ಬಡ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳನ್ನು ವಿತರಿಸಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ಐದು ನೋಟುಪುಸ್ತಕಗಳು, ಜಾಮಿಟ್ರಿ ಬಾಕ್ಸ್‌, ಪೆನ್ನು, ಪೆನ್ಸಿಲ್‌, ರಬ್ಬರ್‌, ಶಾರ್ಪ್‌ನರ್‌ ಸೇರಿದಂತೆ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಈ ಮೂಲಕ ಪೂರೈಸಲಾಯಿತು.

ಕೇವಲ ಹೆಸರಿಗಾಗಿ ಮಾಡುವ ಇತರ ಕಾರ್ಯಗಳಿಗಿಂತಲೂ ಇಂತಹ ಕಾರ್ಯಗಳನ್ನು ಮಾಡಿದರೆ ಸಾರ್ಥಕತೆಯ ಭಾವ ನಮ್ಮನ್ನು ಆವರಿಸುತ್ತದೆ. ಜೊತೆಗೆ ಸಮಾಜದಲ್ಲಿ ನಿಜಕ್ಕೂ ಅಗತ್ಯ ಇರುವ ಕೈಗಳಿಗೆ ಸಹಾಯಹಸ್ತವನ್ನು ಚಾಚಿ ಒಳಿತನ್ನು ಮಾಡಿದಂತಾಗುತ್ತದೆ. ಈ ಸತ್ಕಾರ್ಯಕ್ಕೆ ಎಸ್‌ಡಿಎಂ ಸಂಸ್ಥೆಗಳ ಕಾರ್ಯದರ್ಶಿಯಾದ ಡಾ. ಬಿ. ಯಶೋವರ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ನಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣ, ಬಿಸಿ ಊಟದ ವ್ಯವಸ್ಥೆ ಇದ್ದರೂ ಪೋಷಕರಿಗೆ ವಿದ್ಯಾರ್ಥಿಗಳ ಪುಸ್ತಕದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಈ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದು. 

ಕೃಷ್ಣಪ್ಪ ನಾೖಕ್‌, ಮುಖ್ಯೋಪಾಧ್ಯಾಯರು, ಸ.ಉ.ಪ್ರಾ.ಶಾಲೆ, ಕುತ್ಲೂರು ಹೇಳಿದ್ದಾರೆ ಕಲಿಕೆಯ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯ ಬೀಜವನ್ನು ಬಿತ್ತಿದರೆ, ಮುಂದೆ ಅವರು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ನಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಂಡೆವು. ಈ ಯೋಜನೆ ಯಶಸ್ವಿಯಾಗಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.

ಪ್ರಜ್ಞಾ  ಹೆಬ್ಟಾರ್‌,  ಅಂತಿಮ ಪತ್ರಿಕೋದ್ಯಮ ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next