ವರದಿ : ದತ್ತು ಕಮ್ಮಾರ
ಕೊಪ್ಪಳ: ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಪುಸ್ತಕಗಳ ಪೂರೈಕೆಗೆ ಪ್ರತಿ ಜಿಲ್ಲೆಯಲ್ಲಿ ಬುಕ್ ಬ್ಯಾಂಕ್ ಮಾಡಲು ಸೂಚಿಸಿದೆ.
ಶಾಲೆ ಆರಂಭಗೊಂಡರೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಪುಸ್ತಕ ವಿತರಣೆ ಸದ್ಯದ ಮಟ್ಟಿಗೆ ಸುಲಭವಲ್ಲ. ಹೀಗಾಗಿ ಬುಕ್ ಬ್ಯಾಂಕ್ ಮಾಡಿ, ಹಳೇ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿ ಹೊಸದಾಗಿ ಕ್ಲಾಸ್‌ಗೆ ಬರುವ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಮುದ್ರಣಗೊಂಡಿಲ್ಲ ಪುಸ್ತಕ: ಪ್ರತಿ ವರ್ಷ ಜೂನ್ ತಿಂಗಳಿನಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳುತ್ತಿತ್ತು. ಶಾಲೆ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಕೊರೊನಾ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದು ಶಾಲೆ ಆರಂಭಿಸಿ ಪಾಠ-ಪ್ರವಚನ ಮಾಡುವುದೇ ಸವಾಲಾಗಿದೆ. ಅಲ್ಲದೆ ಲಾಕ್‌ಡೌನ್‌ನಿಂದಾಗಿ ಸರ್ಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಸೇರಿದಂತೆ ಪುಸ್ತಕ ಮುದ್ರಣಕ್ಕೂ ಹಿನ್ನಡೆಯಾಗಿದೆ. ಇದರಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿಲ್ಲ. ಈ ಮಧ್ಯೆ ಸಾರ್ವಜನಿಕ ಶಿಕ್ಷಣ ಇಲಾಖೆ 6ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್‌ಗಳನ್ನು ಆರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿದೆ. ಆದರೆ ಮಕ್ಕಳ ಬಳಿ ಪುಸ್ತಕಗಳೇ ಇಲ್ಲದೆ ಪಾಠ ಓದುವುದಾದರೂ ಹೇಗೆ? ಕಲಿಯುವುದಾದರೂ ಹೇಗೆ? ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಹೊಸ ಪುಸ್ತಕ ಮುದ್ರಣವಾಗಿ ಎಲ್ಲ ಶಾಲೆಗಳಿಗೆ ಪೂರೈಕೆಯಾಗುವವರೆಗೂ ಆಯಾ ಶಾಲೆಗಳಲ್ಲಿ ಬುಕ್ ಬ್ಯಾಂಕ್ ಮಾಡಲು ಮುಂದಾಗಲಾಗಿದೆ.
ಹಳೆ ಪುಸ್ತಕ ಹೊಸ ವಿದ್ಯಾರ್ಥಿಗೆ: ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿ ಅಭ್ಯಾಸ ಮಾಡಿ ಉತ್ತೀರ್ಣನಾಗಿ ಪ್ರಸಕ್ತ ವರ್ಷಕ್ಕೆ 7ನೇ ತರಗತಿಗೆ ಪ್ರವೇಶಾತಿ ಪಡೆದಿದ್ದರೆ ಆ ವಿದ್ಯಾರ್ಥಿಯಿಂದ 6ನೇ ತರಗತಿಯ ಎಲ್ಲ ಪುಸ್ತಕಗಳನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ವಾಪಸ್ ಪಡೆಯಬೇಕು. ಹೀಗೆ ಸಂಗ್ರಹಿಸಿ ಎಲ್ಲ ವಿಷಯಗಳ ಪುಸ್ತಕಗಳನ್ನು 5ನೇ ತರಗತಿಯಿಂದ 6ನೇ ತರಗತಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಿತರಿಸುವುದು. ಪ್ರತಿ ತರಗತಿಯ ವಿದ್ಯಾರ್ಥಿಗಳಿಂದಲೂ ಹೀಗೆ ಪುಸ್ತಕ ಸಂಗ್ರಹಿಸಿ ಅದನ್ನು ಹೊಸದಾಗಿ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಪೂರೈಸಬೇಕು. ಆ ಮೂಲಕ ಹೊಸ ಪುಸ್ತಕಗಳು ವಿತರಣೆಯಾಗುವವರೆಗೂ ಕಲಿಕೆಗೆ ತೊಂದರೆಯಾಗಬಾರದು ಎಂಬುದು ಈ ಬುಕ್ ಬ್ಯಾಂಕ್ ಯೋಜನೆಯ ಉದ್ದೇಶವಾಗಿದೆ.