Advertisement

ಮೌನ ಕ್ರಾಂತಿ ಮೂಲಕ ಓದುಗರತ್ತ ಪುಸ್ತಕ ಪಯಣ

06:37 AM Feb 12, 2019 | |

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಮೌನ ಕ್ರಾಂತಿಯ ಮೂಲಕ ಓದುಗರನ್ನು ಪುಸ್ತಕ ಲೋಕಕ್ಕೆ ಕರೆದೊಯ್ಯುತ್ತಿದೆ ಎಂದು ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

Advertisement

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ ಹಾಗೂ ಸಾಹಿತಿಗಳೊಂದಿಗೆ ಸೆಲ್ಫಿ ಮತ್ತು ಪುಸ್ತಕಕ್ಕೆ ಸಹಿ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಇದು ನಿಜವಾದ ಸಾಹಿತ್ಯ ಸಮ್ಮೇಳನ. ಈ ಪ್ರದರ್ಶನದಲ್ಲಿ ಮಾತಿಲ್ಲ, ಬರಿ ಮೌನ. ಇದೊಂದು ಬಗೆಯ ಮೌನದ ಕ್ರಾಂತಿ ಎನ್ನಬಹುದು ಎಂದು ಹೇಳಿದರು. 

ಮೌನದ ಮೂಲಕ ಓದುಗರನ್ನು ಪುಸ್ತಕದೆಡೆಗೆ ಸೆಳೆಯುವ ಈ ಸಾಹಿತ್ಯದ ಪರಿಚಾರಿಕೆಯ ಕೆಲಸ ಉತ್ತಮವಾದುದು. ಮೇಳದಲ್ಲಿ ನನಗೂ ಕೂಡ ಹಲವು ವರ್ಷಗಳಿಂದ ಹುಡುಕುತ್ತಿದ್ದ ಕೃತಿ ಸಿಕ್ಕಿದೆ. ಪಿ.ಸಾಯಿನಾಥ್‌ ಅವರ “ಬರ ಅಂದ್ರೆ ಎಲ್ಲರಿಗೂ ಇಷ್ಟ” ಎಂಬ ಕೃತಿಯನ್ನು ತುಂಬಾ ದಿನಗಳಿಂದ ಹುಡುಕುತ್ತಿದ್ದೆ. ಇಂದು ಅದು ನನಗೆ ಲಭಿಸಿದ್ದು ಕಳೆದು ಹೋದ ಸ್ನೇಹಿತನೊಬ್ಬ ಸಿಕ್ಕಷ್ಟು ಖುಷಿಯಾಗಿದೆ ಎಂದರು.

ಸಾಹಿತಿಗಳೊಂದಿಗೆ ಸೆಲ್ಫಿ ಮತ್ತು ಪುಸ್ತಕಕ್ಕೆ ಸಹಿ ಕಾರ್ಯಕ್ರಮ ಓದುಗರಲ್ಲಿ ಪುಸ್ತಕದ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ. ಇಲ್ಲಿ ಓದುಗ ಮತ್ತು ಪ್ರಕಾಶಕರ ಸಮನ್ವಯ ನಡೆಯುತ್ತಿದೆ. ಭಿನ್ನ ಶೈಲಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು ಪ್ರಕಾಶಕರಿಗೆ ಓದುಗರ ಆಸಕ್ತಿ ತಿಳಿದುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಕವಿ ಡಾ.ಬಿ.ಆರ್‌.ಲಕ್ಷ್ಮಣರಾವ್‌ ಮಾತನಾಡಿ, ತಡವಾಗಿಯಾದರೂ ಬಿಡುವಾಗಿ ಬಾ ಎಂಬ ಪು.ತಿ.ನ ಅವರ ಕಾವ್ಯದ ಸಾಲುಗಳಂತೆ ಈಗಲಾದರೂ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದೆಯಲ್ಲ ಎಂಬುದೇ ಸಂತಸದ ಸಂಗತಿ. ಇದು ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮೇಳವಲ್ಲ. ಓದುಗ, ಲೇಖಕ ಮತ್ತು ಪ್ರಕಾಶಕರನ್ನು ಬೆಸೆಯುವ ಕಾರ್ಯಕ್ರಮ. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ.

Advertisement

ಈ ರೀತಿಯ ಕಾರ್ಯಕ್ರಮಗಳು ಬಹುಬೇಗನೆ ಯುವ ಪೀಳಿಗೆಯನ್ನು ತಲುಪುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಪುಸ್ತಕಗಳನ್ನು ಓದುಗರೆಡೆಗೆ ಸೆಳೆಯುವ ಪ್ರಯತ್ನ ವಿಶಿಷ್ಟವಾದುದು. ಪುಸ್ತಕಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸುವುದು ಉತ್ತಮ ಕಾರ್ಯ. ಇದರಲ್ಲಿ ಮಡಿವಂತಿಕೆ ಸಲ್ಲ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಡಾ.ಎಸ್‌.ವಿ.ಪರಮೇಶ್ವರ ಭಟ್ಟ ಅವರ 7 ಸಂಪುಟಗಳ ಸಮಗ್ರ ಸಾಹಿತ್ಯ ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಹಾಜರಿದ್ದರು. 

ಮಂಗಳೂರು, ಕಲಬುರಗಿಯಲ್ಲೂ ಕಾರ್ಯಕ್ರಮ: ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ ಮಂಗಳವಾರ ರಾತ್ರಿ 8.30ಕ್ಕೆ ಕೊನೆಗೊಳ್ಳಲಿದೆ. ಮೊದಲಿನ ದಿನ 2 ಲಕ್ಷ 20 ಸಾವಿರ ರೂ, ಎರಡನೇ ದಿನ 3 ಲಕ್ಷ 15 ಸಾವಿರ ರೂ. ಹಾಗೂ ಮೂರನೇ ದಿನ 3ಲಕ್ಷ 50 ಸಾವಿರ ರೂ. ವಹಿವಾಟು ನಡೆದಿದೆ. ಸಾಹಿತಿಗಳೊಂದಿಗೆ ಸೆಲ್ಫಿ ಮತ್ತು ಪುಸ್ತಕಕ್ಕೆ ಸಹಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮಂಗಳೂರು, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ನಡೆಸುವ ಆಲೋಚನೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದರು.

ಪುಸ್ತಕ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ವಿನೂತನ ಕೆಲಸ ಮಾಡುತ್ತಿದೆ. 21ನೇ ಶತಮಾನದಲ್ಲಿ ಮಾಧ್ಯಮಗಳ ಅಬ್ಬರದಲ್ಲಿ ಒಳಗಿನ ಅಂತಃಸ್ವತದ ದನಿಯನ್ನು ಗಟ್ಟಿಯಾಗಿಸುವ ಕೆಲಸವನ್ನು ಪುಸ್ತಕಗಳನ್ನು ಮಾಡುತ್ತವೆ.
-ಕೆ.ಮರುಳಸಿದ್ಧಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ.

ಗ್ರಂಥಗಳು ಬದುಕಿನ ಸಂಗತಿಗಳು. ಪುಸ್ತಕಗಳು ತಿಳುವಳಿಯ ಪರಿಧಿಯನ್ನು ಹೆಚ್ಚಿಸುತ್ತವೆ. ಓದು ಒಂದು ಯಾನ ಇದ್ದಂತೆ. ಆ ಯಾನದಲ್ಲಿ ತೊಡಗಿಕೊಂಡರೆ ಅದರಿಂದ ಹೊರಗೆ ಬರಲು ಸಾಧ್ಯವಿಲ್ಲ.
-ಡಾ.ದೊಡ್ಡರಂಗೇಗೌಡ, ಕವಿ.

Advertisement

Udayavani is now on Telegram. Click here to join our channel and stay updated with the latest news.

Next