ಮರಳ ಕಣದಲ್ಲಿ ಬ್ರಹ್ಮಾಂಡವನ್ನೂ ಕಾಡು ಹೂವಲ್ಲಿ ಸ್ವರ್ಗವನ್ನು ಕಾಣಲು, ಕಾಣಿಸಲು ಹಂಬಲಿಸಿದವನು…, ಅಂಗೈ ಅಳತೆಯಲ್ಲಿ ಅನಂತತೆಯನ್ನು, ಕಾಲಘಟ್ಟದಲ್ಲಿ ಕಾಲಾತೀತವಾದುದನ್ನು ಹಿಡಿಯಲು ಹಂಚಲು ಹಾತೊರೆದವನು… ಹಾಗಾಗಿ ಆತ ಎಲ್ಲ ಕಾಲಕ್ಕೂ ಸಲ್ಲುವಂತಹ ಕವಿಯಾದವನು ಎಂದು ಕವಿ ವಿಲಿಯಮ್ ಬ್ಲೇಕ್ ಅವರನ್ನು ಬಣ್ಣಿಸುತ್ತಾರೆ ಡಾ| ಯು.ಆರ್. ಅನಂತಮೂರ್ತಿ. ‘ಶತಮಾನದ ಕವಿ ವಿಲಿಯಮ್ ಬ್ಲೇಕ್’ ಕೃತಿಯಲ್ಲಿ ಅವರ ಕವನಗಳನ್ನು ಅದರ ಅರ್ಥದೊಂದಿಗೆ ಹಾಗೂ ಅವರ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ ಅನಂತಮೂರ್ತಿಯವರು.
ಲಂಡಧಿನ್‌ನ ಬಟ್ಟೆ ವ್ಯಾಪಾರಿಯ ಮಗನಾಗಿ ಜನಿಸಿದ ವಿಲಿಯಂ ಬ್ಲೇಕ್‌ನ (1757- 1827) ಕಾಲದಲ್ಲಿ ಎರಡು ಮಹತ್ವಪೂರ್ಣ ಘಟನೆಗಳುನಡೆದವು. ಇಂಗ್ಲೆಂಡ್‌ನಲ್ಲಿ ಕೈಗಾರಿಕಾ ಕ್ರಾಂತಿಯಾದರೆ, ಫ್ರೆಂಚ್ ಕ್ರಾಂತಿಯೂ ಇದೇ ಸಂದರ್ಭದಲ್ಲಿ ನಡೆಯಿತುಕೇವಲ 10ನೇ ತರಗತಿವರೆಗೆ ಓದಿದ್ದ ಬ್ಲೇಕ್, ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ವಿರೋಧಿಸಿದ್ದಾರೆ. ಅಲ್ಲದೇ ತಾನು ಮುಂದೆ ಶಿಕ್ಷಣ ಮುಂದುವರಿಸಲು ಮನೆಯಲ್ಲಿ ತಮ್ಮ ಮೇಲೆ ಯಾರೂ ಒತ್ತಡ ಹೇರದೇ ಇದ್ದುದಕ್ಕೆ ಬಹಳ ಖುಷಿಪಡುತ್ತಾರೆ. ಮಠಾಧಿಕಾರ, ರಾಜಾಧಿಕಾರದ ವಿರೋಧಿಯಾಗಿದ್ದರೂ ದೇವತೆಗಳು, ಅತೀಂದ್ರಿಯ ಶಕ್ತಿಗಳು ಹಾಗೂ ಅನುಭಾವದಲ್ಲಿ ನಂಬಿಕೆಯನ್ನಿಟ್ಟಿದ್ದರು. ಲೇಖಕ, ಚಿತ್ರಕಲಾವಿದ, ಮುದ್ರಣ ತಂತ್ರಜ್ಞ, ಮುದ್ರಕ, ಪ್ರಕಾಶಕನಾಗಿ ಕಾರ್ಯನಿರ್ವಹಿಸಿದ ಬ್ಲೇಕ್ ಅಸಾಧಾರಣ ಪ್ರತಿಭೆ ಎಂದೆನಿಸಿಕೊಂಡಿದ್ದರು. ಬಡವನಾಗಿ ಬದುಕಿದರೂ ಬೇಸರ ಪಡಲಿಲ್ಲ.
ಪಾಶ್ಚಿಮಾತ್ಯ ನಾಗರಿಕತೆಯಲ್ಲೇ ಇದ್ದು ಅಲ್ಲಿನ ಕೆಲವೊಂದು ಜ್ಞಾನ ಪರಿಕಲ್ಪನೆಗಳನ್ನು, ಅದನ್ನು ಅನುಸರಿಸುವ ಜೀವನ ಕ್ರಮವನ್ನು ವಿರೋಧಿಸಿದ ಬ್ಲೇಕ್ ತನ್ನ ಕವಿತೆಗಳಲ್ಲಿ ದಯೆ, ಕರುಣೆ, ಪ್ರೇಮ ಮತ್ತು ಶಾಂತಿಗಳನ್ನು ವರ್ಣಿಸುತ್ತಾರೆ. ಅಲ್ಲದೇ ಮಾನವನ ದಾನವ ಸ್ವರೂಪವನ್ನೂ ಚಿತ್ರಿಸುತ್ತಾರೆ. ಜತೆಗೆ ಮೌಲ್ಯಾದರ್ಶಗಳು ಪೊಳ್ಳಾಗಿರುತ್ತವೆ ಎಂಬುದುದನ್ನು ತಮ್ಮ ಕವಿತೆಯಲ್ಲಿ ಸಾರಿದ್ದಾರೆ. ಸಂತನಂತೆ ಬದುಕಿದ ಕವಿಯೊಬ್ಬನ ಬದುಕಿನ ಬಗ್ಗೆ, ಕವಿತೆಗಳಲ್ಲಿ ತಾವು ಕಂಡದ್ದನ್ನು ಈ ಕೃತಿಯಲ್ಲಿ ಕಾಣಿಸಿದ್ದಾರೆ, ಓದುಗರಿಗೆ ಹಂಚಿದ್ದಾರೆ ಲೇಖಕರು.
– ವಿದ್ಯಾ ಕೆ. ಇರ್ವತ್ತೂರು