Advertisement

ಕಂಬಿ ಹಿಂದಿನ ಕೈದಿಗಳ ಕೈಯಲ್ಲಿ ಪುಸ್ತಕ ಕ್ರಾಂತಿ!

12:41 AM Jan 24, 2019 | |

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿದ ಉಗ್ರರು, ಭೀಕರ ಕೊಲೆಗಳನ್ನು ಮಾಡಿದ ನಟೋರಿಯಸ್‌ ರೌಡಿಗಳು, ಡ್ರಗ್ಸ್‌ ಮಾಫಿಯಾ ಆಳಿದ ಕುಖ್ಯಾತರು ತಮ್ಮ ಅನುಭವ ಕಥನಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಲಿದ್ದಾರೆ!

Advertisement

ಕೈದಿಗಳ ಕೈಗೆ ಲೇಖನಿ ನೀಡುವ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನಿರ್ಧರಿಸಿದೆ. ಜೈಲು ಕೈದಿಗಳಲ್ಲಿರುವ ಸಾಹಿತ್ಯದ ಅಭಿರುಚಿ ಗುರ್ತಿಸಿ, ಸ್ವತ: ಅವರಿಂದಲೇ ಅನುಭವ ಕಥನ ಬರೆಯಿಸಿ, ಅದಕ್ಕೆ ಪುಸ್ತಕ ರೂಪ ನೀಡುವ ಆಲೋಚನೆ ಪ್ರಾಧಿಕಾರಕ್ಕಿದೆ. ಈ ನಿಟ್ಟಿನಲ್ಲಿ ಕಾರಾಗೃಹ ಇಲಾಖೆಯೊಂದಿಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಪ್ರಾಧಿಕಾರ ಈ ಹಿಂದೆ ‘ನಿಮ್ಮ ಮನೆಗೆ ನಮ್ಮ ಪುಸ್ತಕ ‘ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಹಲವು ಕೈದಿಗಳು ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಮೈಸೂರು ಕೇಂದ್ರ ಕಾರಾಗೃಹದಲ್ಲೂ ಹಲವು ಕೈದಿಗಳು ಕನ್ನಡ ಸಾಹಿತ್ಯದಲ್ಲಿ ಎಂ.ಎ ಮತ್ತು ಬಿ.ಎ ಪದವಿ ಪಡೆದಿದ್ದು ಅವರಲ್ಲಿ ಹಲವರ ಕವಿತೆ ಮತ್ತು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಪ್ರಾಧಿಕಾರದ ಅಧ್ಯಕ್ಷರ ಅನುಭವಕ್ಕೆ ಬಂದಿತ್ತು. ಕಲಬುರಗಿ ಕಾರಾಗೃಹ ಸೇರಿದಂತೆ ಹಲವು ಕಡೆಗಳಲ್ಲಿ ಕೈದಿಗಳ ಅನುಭವ ಕಥನ ಬರೆಸುವ ಬಗ್ಗೆ ಕೈದಿಗಳಿಂದ ಮತ್ತು ಅತಿಥಿಗಳಿಂದ ಸಲಹೆ ಬಂದಿತ್ತು.

ಈ ಬಗ್ಗೆ ಸಂಬಂಧ ಪಟ್ಟ ಹಿರಿಯ ಜೈಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮುನ್ನುಡಿಗಾಗಿ ಸಾಹಿತಿಗಳಿಗೆ ಕರೆ!: ಕಲಬುರ್ಗಿ ಜೈಲಿನಲ್ಲಿರುವ ಕೆಲವು ಕೈದಿಗಳಿಗೆ ಪುಸ್ತಕ ಬರೆಯುವ ಅಭಿರುಚಿ ಇದೆ. ಈ ಹಿಂದೆ ಆ ಜೈಲಿನದ್ದ ಕೈದಿಯೊಬ್ಬ ಆ ಭಾಗದ ಸಾಹಿತಿಯೊಬ್ಬರಿಗೆ ಫೋನ್‌ ಕರೆ ಮಾಡಿ ತಮ್ಮ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಂತೆ ವಿನಂತಿಸಿಕೊಂಡಿದ್ದ. ಆದರೆ ಅವರು ಯಾರೋ ಏನೋ, ಬರೆದು ಕೊಡೋಣ ಅಂತ ಹೇಳಿ ಸುಮ್ಮನಿದ್ದರು. ಇತ್ತೀಚೆಗಷ್ಟೇ ಪ್ರಾಧಿಕಾರ ‘ನಿಮ್ಮ ಮನಗೆ ನಮ್ಮ ಪುಸ್ತಕ’ ಕಾರ್ಯಕ್ರಮವನ್ನು ಕಲಬುರ್ಗಿ ಜೈಲಿನಲ್ಲಿ ಹಮ್ಮಿಕೊಂಡಿದ್ದಾಗ ಆ ಜೈಲಿನದ್ದ ಕೈದಿ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಹಿತಿಗಳಿಗೆ ಫೋನ್‌ ಕರೆ ಮಾಡಿ ಮುನ್ನುಡಿಗೆ ಬೇಡಿಕೆ ಇಟ್ಟಿದ್ದನ್ನು ಮತ್ತೆ ನೆನಪಿಸಿದ. ಅದುವರೆಗೂ ಸಾಹಿತಿಗಳಿಗೆ ಆತ ಕೈದಿ ಎಂಬುವುದೇ ಗೊತ್ತಿರಲಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದರು. ‘ನಾವು ಕಾರಾಗೃಹಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗ ಹಲವು ಕೈದಿಗಳು ವಚನ ಸಾಹಿತ್ಯ ಸೇರಿದಂತೆ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಅತ್ಯುತ್ತಮವಾಗಿ ಮಾತನಾಡಿದರು. ಕೈದಿಗಳಲ್ಲೂ ಸಾಹಿತ್ಯದ ಅಭಿರುಚಿ ಇದೆ ಎಂಬುವುದು ಆಗ ಅರಿವಿಗೆ ಬಂತು. ಹೀಗಾಗಿಯೇ ಅವರಲ್ಲಿರುವ ಅನುಭವ ಕಥನಗಳನ್ನು ಬರೆಯಿಸಿ ಅವುಗಳಿಗೆ ಪುಸ್ತಕರೂಪ ನೀಡಲು ತೀರ್ಮಾನಿಸಲಾಗಿದೆ’ಎಂದು ತಿಳಿಸಿದ್ದಾರೆ.

Advertisement

ಜೈಲು ಕೈದಿಗಳಿಗೆ ಕಮ್ಮಟ: ಮೊದಲು ಪ್ರಾಧಿಕಾರ ಕೈದಿಗಳಿಗೆ ಕಥೆ, ಕವಿತೆ, ಲೇಖಕನ ಸೇರಿದಂತೆ ಸಾಹಿತ್ಯ ರಚನೆ ಸಂಬಂಧಿಸಿದಂತೆ ಕಥಾ ಕಮ್ಮಟವನ್ನು ಏರ್ಪಡಿಸಲಿದೆ. ಇಲ್ಲಿ ಸಾಹಿತ್ಯರಚನೆ ಸಂಬಂಧದ ಹಲವು ಆಯಾಮಗಳನ್ನು ಹೇಳಿ ಕೊಡಲಾಗುವುದು. ಬಳಿಕ ಆಯ್ದ ಕೈದಿಗಳಿಂದ ಮಾತ್ರ ಅನುಭವ ಕಥನ ದಾಖಲಿಸಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

30-50 ಕೈದಿಗಳಿಂದ ಅನುಭವ ಕಥನ ಬರೆಯಿ ಸುವ ಆಲೋಚನೆ ಪ್ರಾಧಿಕಾರದ ಮುಂದಿದ್ದು ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರ್ಗಿ ಸೇರಿ ಎಲ್ಲಾ ಜಿಲ್ಲೆಗಳಲ್ಲಿರುವ ಕೈದಿಗಳು ಕಮ್ಮಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. 

ಜೈಲು ಸೇರಿ ಲೇಖಕನಾಗಿ ಹೊರಬಂದ ಯಲ್ಲಪ್ಪ!

ಕ್ಷಣದ ಸಿಟ್ಟಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬರೋಬ್ಬರಿ 14 ವರ್ಷ 8 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ದೊಡ್ಡಬಳ್ಳಾಪುರದ ಟಿ. ಯಲ್ಲಪ್ಪ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಜತೆಗೆ, ಡಿಪ್ಲೋಮಾ ಇನ್‌ ಅಂಬೇಡ್ಕರ್‌ ಸ್ಟಡಿಸ್‌ ಕೋರ್ಸ್‌ ಕೂಡ ಪೂರೈಸಿದ್ದರು. ರಾಜ್ಯದ ಜೈಲುಗಳನ್ನು ಅಧ್ಯಯನ ಮಾಡಿದ ಅವರು, ಜೈಲು ವ್ಯವಸ್ಥೆ, ಜೈಲು ಜೀವನ, ಇತರೆ ಕೈದಿಗಳ ಅನುಭವಗಳನ್ನು ಒಟ್ಟುಗೂಡಿಸಿ ಬರೆದ ”ಜೈಲು ಜೀವಗಳು” ಜ.6ರಂದು ದೊಡ್ಡಬಳ್ಳಾಪುರದಲ್ಲಿ ಬಿಡುಗಡೆಗೊಂಡಿತ್ತು. ಕೈದಿಯೊಬ್ಬ ಪುಸ್ತಕ ಬರೆದು ಬಿಡುಗಡೆಗೊಂಡ ಮೊದಲ ಪುಸ್ತಕ ಇದಾಗಿದೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next