Advertisement
ಕೆಲವು ಅನುವಾದ ಕೃತಿಗಳು ಒಮ್ಮೊಮ್ಮೆ ಬರೀ ಜಾಳುಜಾಳಾಗಿ ನೀರಸ, ಬೇಸರ, ಕೋಪ, ತಾಪ, ಸಿಟ್ಟು ಎಲ್ಲವನ್ನೂ ತರಿಸಿಬಿಡುತ್ತವೆ. ಅದು ಭಾಷಾಂತರದಲ್ಲಿನ ಅಥವಾ ಭಾವಾಂತರದಲ್ಲಿನ ತೊಡಕಿನಿಂದಲೂ ಇರಬಹುದು. ಅಥವಾ ವಸ್ತುವಿನ ಆಳ ಮತ್ತು ವಿಸ್ತಾರದಿಂದಲೂ ಇರಬಹುದು.
Related Articles
Advertisement
ನನಗೆ, ಕಾಸರಗೋಡು ಮೂಲದವರಾದ ಪಾರ್ವತಿ ಜಿ. ಐತಾಳ್ ಅವರಿಗೆ ಮಲಯಾಳಂ ಹಾಗೂ ಕನ್ನಡದ ಗಡಿ ಸ್ಪರ್ಶ ಇರುವುದರಿಂದ ಈ ಕೃತಿಯಲ್ಲಿ ಕಥೆಯ ಆಳದ ಭಾವಾಂತರ ಚೆನ್ನಾಗಿ ಮೂಡಿ ಬರುವುದಕ್ಕೆ ಕಾರಣವಾಗಿದೆ ಅಂತನ್ನಿಸುತ್ತದೆ.
ಹದಿನೈದು ಸಣ್ಣ ಕಥೆಗಳನ್ನು ಹೊಂದಿರುವ ಈ ಕೃತಿ, ಸ್ತ್ರೀ ಭಾವಗಳ ಹಲವು ಆಯಾಮಗಳ ಸೂಕ್ಷ್ಮ ಧ್ವನಿ.
ಹೆಣ್ಣಿನ ಆಂತರ್ಯದ ತುಡಿತ, ಅವಳ ಪ್ರತಿ ಕ್ಷಣದ ನುಡಿ ನುಡಿತ, ಹಿತ, ಮಿತ, ಮೃದು ಧೋರಣೆಗಳ ಸಂವೇದನೆಗಳನ್ನು ಕಟ್ಟಿಕೊಡುತ್ತದೆ.
ಹೆಣ್ಣಿನೊಳಗಿನ ಮೃದು ವಿರೋಧ, ಕಟು ವಿರೋಧ, ದುಃಖ, ದುಮ್ಮಾನ, ಸಂಕಟ, ಸುಖ, ಸಂತೋಷ ಜೊತೆಗಿಷ್ಟು ಗೊಂದಲ ಎಲ್ಲವೂ ಇಲ್ಲಿನ ಕಥೆಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಪುಟ ತೆರೆಯುವುದಕ್ಕೆ ಸ್ಫೂರ್ತಿಯಾಗುವುದು ಕೃತಿಯ ಶಿರ್ಷಿಕೆ ಮತ್ತು ಶಿರ್ಷಿಕೆಯ ಕಥೆ. ‘ನೆರಳು ಮರಗಳಿಲ್ಲದ ದಾರಿ’ ಕಥೆಯ ನಾಯಕಿಯ ಧಿಕ್ಕರಿಸುವ ಗುಣ. ಮತ್ತು ಧಿಕ್ಕರಿಸುವುದಕ್ಕೆ ಕಾರಣವಾದ ನಿಶ್ಚಯವಾದ ಮದುವೆಯ ಹುಡುಗನ ಸ್ವಾರ್ಥ ಗುಣಗಳ ಸುತ್ತ ನಡೆಯುವ ಕಥೆ, ಸ್ಪಂದನೆಗೆ ಪ್ರತಿ ಸ್ಪಂದನೆ ದೊರಕದಿದ್ದಾಗ ನಿತ್ಯ ನರಕವನ್ನು ನುಂಗುವ ಬಾಳನ್ನು ಇಷ್ಟ ಪಡದ ಕಥಾ ನಾಯಕಿಯ ಮನಸ್ಥಿತಿ ವಿಶೇಷ ಅನ್ನಿಸುತ್ತದೆ.
ಹೆಣ್ಣೊಬ್ಬಳು ನೆರಳು ಮರಗಳಿಲ್ಲದ ದಾರಿಯಲ್ಲಿ ಎಷ್ಟು ದೂರ ನಡೆಯಬಲ್ಲಳು…? ಅಷ್ಟಕ್ಕೂ ಈ ಕಥೆಯ ನಾಯಕಿ ಕವಯತ್ರಿ. ಸಹಜವಾಗಿ ಆಕೆಯಲ್ಲಿ ಬದುಕು ಬಂದ ಹಾಗೆ ಸ್ವೀಕರಿಸುವ ಮತ್ತು ಅದು ಹಿತವೆನ್ನಿಸಿದಾಗ ಒಪ್ಪುವ, ಹಿತವಲ್ಲವೆನ್ನಿಸಿದಾಗ ದೂರ ತಳ್ಳುವ ಗುಣ ಆಕೆಯದ್ದು. ಪ್ರಾಯ ಕಳೆದರೂ ಮದುವೆಗೆ ಒಪ್ಪದಿದ್ದುದ್ದಕ್ಕೆ ಹೆತ್ತವರ ತಿರಸ್ಕಾರ, ಸುಡುಸುಡು ಕೆಂಡದಲ್ಲಿ ಸುಟ್ಟು ಹೋದ ಎದೆಯ ಹಸಿ ನೋವುಗಳು ಅವಳನ್ನು ಬದುಕಿನುದ್ದಕ್ಕೂ ಚಂಚಲಕ್ಕೆ ಸಿಲುಕಿಸುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಕಥಾ ನಾಯಕಿಯಿಂದ, ಅವಳೊಂದಿಗೆ ನಿಶ್ಚಯವಾದ ಮದುವೆಯ ಹುಡುಗ ಏನನ್ನು ಬಯಸಿದ್ದ ಎನ್ನುವುದನ್ನು ಹೇಳಿ ನಿಮ್ಮ ಓದನ್ನು ನಾನು ಕಸಿದುಕೊಳ್ಳಲಾರೆ.
ಉಳಿದ ಕಥೆಗಳಲ್ಲಿ ಕಾಣುವ ಶೋಷಣೆ, ವಿರೋಧ, ಅಸೂಯೆ, ಮೃದು ಪ್ರತಿಭಟನೆ, ಸಹನೆ, ಅಸಹನೆ, ಸ್ವಾಭಿಮಾನ, ಏನೇ ಆದರೂ ಒಪ್ಪಿಕೊಳ್ಳುವ ಮನಸ್ಥಿತಿ ಎಲ್ಲವೂ ಧ್ವನಿಸುತ್ತವೆ.
‘ಸ್ತ್ರೀವಾದ’ ಎನ್ನುವ ಕನ್ನಡಕ ಹಾಕಿಕೊಳ್ಳದೆ ಓದಿದಾಗ ಇದು ಪ್ರತಿ ಹೆಣ್ಣು ತನ್ನೊಳಗೆ ಅನುಭವಿಸುವ ಸಾಮಾನ್ಯ ನೋವು ಅಂತನ್ನಿಸುತ್ತದೆ.
ಈ ಕೃತಿಯಲ್ಲಿ ಹೆಣ್ಣಿನ ನೋವಿನ ಭಾರಗಳಿಲ್ಲ, ಆದರೇ, ಹೆಣ್ಣು ಅದನ್ನು ಇಳಿಸಿಕೊಳ್ಳುವಲ್ಲಿ ತುಡಿಯುವ ಹೆಜ್ಜೆಗಳಿವೆ.
ಕೆಲವು ಕಥೆಗಳು ಅತಿಯಾಗಿ ಬಿಂಬಿಸಲ್ಪಟ್ಟಿವೆ ಅಂತನ್ನಿಸಿದರೂ, ಆರಂಭದಲ್ಲಿ ಸುತ್ತಿ ಬಳಸಿ ಕರೆದುಕೊಂಡು ಹೋಗುತ್ತಿವೆ ಅಂತನ್ನಿಸಿದರೂ, ‘ಅಯ್ಯೋ..ಬೋರ್ ಅನ್ನಿಸುತ್ತಿದೆ’ ಅಂತ ಅನ್ನಿಸುವುದಿಲ್ಲ. ಓದಿಸಿಕೊಂಡು ಹೋಗುವ ಗುಣ ಕಥೆಗಳಿಗಿವೆ. ಮತ್ತು ಅನುವಾದಕರ ಭಾಷಾ ಹಿಡಿತದ ಬಗ್ಗೆ ಎರಡನೇ ಮಾತಿಲ್ಲ.
ಕಥೆಗಳಲ್ಲಿ ಕಥೆಗಾರ್ತಿಯ ಸ್ತ್ರೀ ಕಾಳಜಿ, ಮಾನವೀಯ ಕಾಳಜಿ, ಕಳಕಳಿ ಇಷ್ಟವಾಗುತ್ತದೆ. ಸ್ತ್ರೀ ಅಂದರೆ ಕೇವಲ ಜೀವವಷ್ಟೇ ಅಲ್ಲ. ಅದೊಂದು ಸುಖ ದುಃಖಗಳಿಗೆ ಸ್ಪಂದಿಸುವ ಭಾವ ಎನ್ನುವುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತದೆ.
ಹೌದು, ಹೆಣ್ಣಿನ ಬದುಕು ಒಂಥರಾ ‘ನೆರಳು ಮರಗಳಿಲ್ಲದ ದಾರಿ’. ಕೃತಿಯ ಓದು ನಿಮಗೆ ದೊರಕಲಿ.
-ಶ್ರೀರಾಜ್ ವಕ್ವಾಡಿ
ಓದಿ : ವೈರಲ್ ಸ್ಟೋರಿ : ಇದು 82ರ ವೃದ್ಧನೋರ್ವನ ಪ್ರೇಮ ಕಥೆ..! ಪ್ರೀತಿಯೆಂದರೇ, ಶುದ್ಧ ಸಲಿಲ..!