ಕೆಲವು ವಾರಗಳ ಹಿಂದೆ ಕೋಟ್ಯಾಧಿಪತಿಯೋರ್ವರ ಮನೆಯಲ್ಲಿ ನಾಗ ದೇವರ ಪ್ರೀತ್ಯರ್ಥವಾಗಿ ನಡೆದ ನಾಗಮಂಡಲ ಸೇವೆಗೆ ಹೋಗಿದ್ದೆ. ಅಸಮಾಧಾನದೊಂದಿಗೆ ದೇವರ ಶಕ್ತಿಗೆ ಭಕ್ತಿ ನನ್ನಲ್ಲಿತ್ತು. ನಾಗಮಂಡಲಕ್ಕಾಗಿ ಬನದ ಸುತ್ತಲೂ ದಟ್ಟವಾಗಿ ಬೆಳೆದಿದ್ದ ನೂರಾರು ಮರಗಳ ಹಾಡಿ ನೆಲಕ್ಕೆ ಸಮವಾಗಿತ್ತು. ನಾಗಮಂಡಲದ ಸೇವೆ ಭಕ್ತಿಯಿಂದ, ವೈಭವದಿಂದ ನಡೆದಿತ್ತು.
ನೂರಾರು ಮರಗಳಿದ್ದ ಹಾಡಿ ಬರಡು ಬಯಲಾಗಿ ನಾಗಮಂಡಲ ಸೇವೆಗೆ ವೇದಿಕೆಯಾಗಿತ್ತು. ಸಹಸ್ರಾರು ಜೀವ ಜಂತುಗಳ ನೆಲೆ ನಾಶವಾಗಿತ್ತು. ದೇವರ ಹೆಸರಿನಲ್ಲಿ ಆಡಂಬರವೇ ಹೆಚ್ಚಿತ್ತು. ಸಾವಿರಾರು ನಾಗ ಭಕ್ತರು ಭಕ್ತಿಯನ್ನು ಅರ್ಪಿಸಿ ಹೋದರು. ನಾಗರ ಹಾವಿನ ಕಾರಿಡಾರ್ ದ್ವಂಸಗೊಂಡು ಸಮತಟ್ಟಾಗಿ ಹೋಗಿತ್ತು.
ಬನದ ಬೆಳದಿಂಗಳಿಲ್ಲದ ಸ್ಥಳದಲ್ಲಿ ಪವಿತ್ರ ನಾಗಮಂಡಲೋತ್ಸವ ಸೇವೆ ನಡೆದಿತ್ತು. ದೇವರ ಸೇವೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಹಾಡಿ ನಾಶವಾದ ಅಸಮಾಧಾನದೊಂದಿಗೆ, ಭಕ್ತಿಯ ನನ್ನ ಪಾಲೂ ಇತ್ತು.
ಅಷ್ಟಕ್ಕೂ ನಾನು ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವಿದೆ. ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಉದ್ದೇಶವಲ್ಲ. ನಂಬಿ ಕೈ ಮುಗಿದವರಲ್ಲಿ ನಾನೂ ಒಬ್ಬ. ಆದರೇ, ನಂಬಿಕೆಯನ್ನು ಧಾರ್ಮಿಕತೆಯ ಹೆಸರಿನೊಂದಿಗೆ ವೆಪನ್ ಆಗಿ ಬಳಸಿಕೊಳ್ಳುತ್ತಿರುವ ಕೆಲವರ ಮೇಲೆ ಮೃದು ಕೋಪವಿದು.
ಇದನ್ನೂ ಓದಿ : ಬಹುಭಾಷಾ ನಟಿ ಅಮೈರಾ ದಸ್ತೂರ್ ಫೋಟೋ ಗ್ಯಾಲರಿ
ನಂಬಿಕೆಗಳು ಆಡಂಬರದ ಹೆಸರಿನಲ್ಲಿ, ವೈಭವದ ಹೆಸರಿನಲ್ಲಿ ಕಾಂಕ್ರೀಟ್ ನೆಲ ಹಾಸಿಗೆಯ ಮೇಲೆ ನಡೆಯುವಷ್ಟು ಅಭಿವೃದ್ಧಿಯ ಚಿಂತನೆ ಬುದ್ಧಿ ಜೀವಿ ಮಾನವನ ತಲೆಯೊಳಗೆ ತುಂಬಿ ಹೋಗಿದೆ ಎನ್ನುವ ಅಸಹನೀಯ ಸ್ಥಿತಿ ಇದು.
ಯಾವ ದೇವರು ನೂರಾರು ಮರಗಳನ್ನು ಕೆಡವಿ ನನ್ನನ್ನು ಆರಾಧಿಸು ಅಂತ ಕೇಳಿಕೊಂಡಿದ್ದಾನೆ…? ನಾವು ದೇವರೆಂದು ಪೂಜಿಸುವ ಯಾವ ನಾಗರ ಹಾವು ನಾನು ಓಡಾಡುವ ದಾರಿಯನ್ನು ನಾಶ ಮಾಡಿ ಆಡಂಬರದಿಂದ ಆರಾಧನೆ ಮಾಡು ಅಂತ ಕೇಳಿಕೊಂಡಿದೆ…? ಸಹಜವಾಗಿ ಬರುವ ಪ್ರಶ್ನೆಗಳಿವು. ನೆಲೆ ಕಿತ್ತು ಭಕ್ತಿ ಮಾಡಿದರೇನು ಫಲ…?
ಇಷ್ಟೆಲ್ಲಾ ಅಸಮಾಧಾನ, ಪ್ರಶ್ನೆಗಳು ಹುಟ್ಟುವುದಕ್ಕೆ ಬಲವಾದ ಕಾರಣವಿದೆ.
ಉರಗ ತಜ್ಞ ಗುರುರಾಜ್ ಸನಿಲ್ ಅವರ ‘ನಾಗಬನವೆಂಬ ಸ್ವರ್ಗೀಯ ತಾಣ’ ಎಂಬ ಕೃತಿ ಇಂದು ನಂಬಿಕೆಯ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಆಡಂಬರಗಳಿಗೆ, ಬೆಳೆದು ನಿಲ್ಲುತ್ತಿರುವ ಕಾಂಕ್ರೀಟ್ ಕಾಡುಗಳಿಗೆ ಹಿಡಿದ ಕನ್ನಡಿ ಈ ಕೃತಿ.
ನಾಗಾರಾಧನೆ ಪ್ರಕೃತಿಯ ಒಂದು ಧಾರ್ಮಿಕ ಆಚರಣೆ. ಕೃತಿಯಲ್ಲಿ ಉಲ್ಲೇಖವಾಗಿರುವ ಹಾಗೆ ಇದೊಂದು ಶುದ್ಧ ನಿಸರ್ಗ ಆರಾಧನೆಯ ಸಂಕೇತ. ಪವಿತ್ರ ವೃಕ್ಷ ಪ್ರಬೇಧಗಳ ಹಾಗೂ ವನ್ಯ ಪ್ರಾಣಿಗಳನ್ನು ಪೂಜಿಸುವ ಮತ್ತು ಅವುಗಳನ್ನು ರಕ್ಷಿಸುವ ಭಯ ಭಕ್ತಿ ಮತ್ತು ನಂಬಿಕೆ ಈ ಆಚರಣೆಯಲ್ಲಿದೆ.
ನಾಗಾರಾಧನೆಯ ಹೆಸರಿನೊಂದಿಗೆ ಪ್ರಕೃತಿ ನಾಶ ಮಾಡಿ ನಮಗೇ ನಾವು ಕುತ್ತು ತಂದುಕೊಳ್ಳುತ್ತಿರುವುದರ ಬಗ್ಗೆ ಸಂಕಟ ಈ ಕೃತಿಯಲ್ಲಿದೆ. ಪ್ರಕೃತಿಯ ಸಂರಕ್ಷಣೆಯಾಗಬೇಕು, ಸರಿಸ್ರಪಗಳ, ಜೀವ ಜಂತುಗಳ, ವೃಕ್ಷ ಪ್ರಬೇಧಗಳ ರಕ್ಷಣೆಯಾಗಬೇಕು ಎಂಬ ಮೂಲ ಆಶಯದೊಂದಿಗೆ ಈ ಕೃತಿ ಸೃಷ್ಟಿಯಾಗಿದೆ.
ಈ ಕೃತಿಯಲ್ಲಿ ಕೃತಿಕಾರ ಬಹಳ ಚೆನ್ನಾಗಿ ಉಲ್ಲೇಖಿಸಿದ್ದಾರೆ. ‘ಒಂದೊಮ್ಮೆ ಭಯ, ಕೋಪಗೊಂಡಾಕ್ಷಣ ತನ್ನ ಚಾಮರದಂತಹ ಹೆಡೆಯನ್ನು ಸರ್ರನೇ ಅರಳಿಸಿ ಎದೆಯುಬ್ಬಿಸಿ ನಿಲ್ಲುವ ನಾಗರ ಹಾವಿನ ಘನತೆ, ಗಾಂಭೀರ್ಯ ಮತ್ತು ಸ್ನಿಗ್ಧ ಸೌಂದರ್ಯಕ್ಕೆ ಮಾರು ಹೋಗದ ಮನಸ್ಸುಗಳೇ ಇಲ್ಲ ಎನ್ನಬಹುದು. ಇವೆ ಎಂದಾದರೆ ಅವು ನಾಗರ ಹಾವಿನ ಕುರಿತು ಅಸಹಜ ಭಯ, ಮೌಡ್ಯತೆಗಳನ್ನು ತುಂಬಿಕೊಂಡಿವೆ ಎಂದೇ ಅರ್ಥ.’ ಹೌದು, ನಾಗ ಬನದಲ್ಲಿ ನಾಗರ ಹಾವಿನ ಕಲ್ಲಿನ ಮೂರ್ತಿಗೆ ಹಾಲೆರೆದು ಪೂಜೆ ಮಾಡುವ ಭಕ್ತರು ನಿಜ ನಾಗರ ಹಾವು ಬಂದರೇ ಓಡಿ ಹೋಗುವ ಮನಸ್ಥಿತಿಯನ್ನು ಹೊಂದಿದವರೇ ಹೆಚ್ಚು ಅಥವಾ ಆ ಹಾವನ್ನು ಓಡಿಸುವ ಪ್ರಯತ್ನ ಮಾಡುವವರೇ ಜಾಸ್ತಿ. ಯಾರು ನಿಂತು ಆ ಹಾವಿನ ಸೌಂದರ್ಯ ವನ್ನು ನೋಡಿ ಬೆರಗಾಗಿ ನೋಡುತ್ತಾರೆ ಹೇಳಿ..? ಇಲ್ಲವೇ ಇಲ್ಲ. ಇದು ಕಾಂಕ್ರೀಟ್ ಕಾಡುಗಳ ನಡುವೆ ವೈಭವವಾಗಿ ನಡೆಯುವ ಆರಾಧನೆಯೇ ಸರಿ.
(ನಾಗರ ಹಾವಿನೊಂದಿಗೆ ಉರಗ ತಜ್ಞ ಗುರುರಾಜ್ ಸನಿಲ್)
ಇದು ಭಕ್ತಿ ಹಾಗೂ ನಂಬಿಕೆಗಳ ಮೇಲೆ ಪ್ರಹಾರವಲ್ಲ. ಕೃತಿಕಾರರೇ ಉಲ್ಲೇಖಿಸಿರುವ ಹಾಗೆ ಇದು ‘ಹೈಟೆಕ್ ನಾಗಾರಾಧನೆ’.
ಇಂತಹ ಮೌಡ್ಯತೆಗಳನ್ನು ದೂರ ಮಾಡುವ ನಿಜ ವಿಷಯಾಧಾರಿತ ಕೃತಿ ಇದು ಎನ್ನುವುದಕ್ಕೆ ಒಬ್ಬ ಓದುಗನಾಗಿ ತುಂಬಾ ಖುಷಿಯಾಗುತ್ತದೆ. ಈ ಪ್ರಕೃತಿ ಆಚರಣೆಯ ಹಿರಿಯವರ ಉದ್ದೇಶ ಮತ್ತು ನಂಬಿಕೆಗೆ ಎಲ್ಲಿಯೂ ನೋವು ಉಂಟು ಮಾಡದೇ ವೈಜ್ಞಾನಿಕ ಸತ್ಯಾಂಶವನ್ನು ವಿಸ್ತೃತ ರೂಪದಲ್ಲಿ ಒದಗಿಸಿಕೊಡುವ ಉತ್ತಮ ಗ್ರಂಥವಿದು.
ನಾಗರ ಹಾವುಗಳ ಸಂತಾನೋತ್ಪತ್ತಿ ಕ್ರಿಯೆ, ನಾಗರ ಹಾವಿನ ನಡೆ(ಸ್ನೇಕ್ ಕಾರಿಡಾರ್), ನಾಗದೋಷ, ನಾಗರ ಹಾವಿನ ಮೇಲಿನ ಅಸಹಜ ಭಯ, ಮೂಡ ನಂಬಿಕೆಗಳ ಬಗೆಗಿನ ಅಧ್ಯಯನ ಶೀಲ ಮಾಹಿತಿ ಇದು.
ಅವನತಿ ಹೊಂದುತ್ತಿರುವ ಪ್ರಕೃತಿಯ ಬಗ್ಗೆ ವಿಷಾದವಿದೆ. ಮುಗ್ದ ಜನರ ನಂಬಿಕೆಗಳನ್ನು ವ್ಯಾಪಾರ ಮಾಡಿಕೊಂಡ ಕೆಲವರ ಬಗ್ಗೆ ಅಸಹನೀಯ ಕೋಪ ಈ ಕೃತಿಯ ಉದ್ದಕ್ಕೂ ಕಾಣಸಿಗುತ್ತದೆ. ಜೀರ್ಣೋದ್ಧಾರದ ಹೆಸರಿನಲ್ಲಿ ಪ್ರಕೃತಿ ನಾಶಗೊಂಡು ಚಿಗುರದ ಕಾಂಕ್ರೀಟ್ ಕಾಡು ಬೆಳೆಸಿ ಸಹಸ್ರಾರು ಜೀವ ಜಂತುಗಳು ಬದುಕುವ ಬನವನ್ನೇ ನಾಶಗೊಳಿಸಿ, ಆ ಜೀವ ಜಂತುಗಳ ನೆಲೆಯೇ ಇಲ್ಲದ ಹಾಗೆ ಮಾಡಿ ಆರಾಧನೆ ಮಾಡುವುದರ ಬಗ್ಗೆ ತೀವ್ರವಾದ ಅಸಮಾಧಾನವನ್ನು ಕೃತಿಕಾರ ವ್ಯಕ್ತಪಡಿಸುವುದರ ಜೊತೆಗೆ ವೈಜ್ಞಾನಿಕ ಸತ್ಯಾಂಶ ಮತ್ತು ನಡೆದುಕೊಂಡು ಬಂದ ಪ್ರಕೃತಿ ಆರಾಧನೆಯ ಬಗೆಗಿನ ಕುರುಹು ಮತ್ತು ಪದ್ಧತಿಗಳ ಒಳಾರ್ಥವನ್ನು ಹೇಳಿರುವುದು ವಿಶೇಷ.
ತಮ್ಮ ಜೀವನದಲ್ಲಿ ಸುಮಾರು ಹದಿನೇಳು ಸಾವಿರದಿಂದ ಹದಿನೆಂಟು ಸಾವಿರ ನಾಗರ ಹಾವುಗಳ ರಕ್ಷಣೆ ಮಾಡಿದ ಸನಿಲ್ ಅವರ ಜೀವನಾನುಭವವಿದೆ. ಅವರು ಕಂಡುಕೊಂಡ ಸತ್ಯ ಇಲ್ಲಿದೆ. ನಾಗರ ಹಾವುಗಳ ಜೀವನ ಕ್ರಮ, ಅವುಗಳ ಗುಣ ..ಹೀಗೆ ಹತ್ತು ಹಲವು ಮಾಹಿತಿಗಳ ವಿಷಯಾಧಾರಿತ ಪುಸ್ತಕವಿದು ಎನ್ನುವುದರಲ್ಲಿ ಅನುಮಾನವೇ ಬೇಕಾಗಿಲ್ಲ.
ಇದನ್ನೂ ಓದಿ : ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!
ಕೆಲವು ಕಡೆ ಜನರ ನಂಬಿಕೆಗಳ ಮೇಲೆ ಸಣ್ಣ ಮಟ್ಟಿನ ಪ್ರಹಾರ ಮಾಡಿದ ಹಾಗೆ ಸಾಮಾನ್ಯ ಓದುಗನಿಗೆ ಅನ್ನಿಸಿದರೂ ಕೃತಿಕಾರನ ಮೂಲ ಆಶಯ ಸ್ಪಷ್ಟ ಮತ್ತು ಸುಸ್ಪಷ್ಟವಾಗಿದೆ ಎನ್ನುವುದು ಈ ಕೃತಿಯ ಹಿರಿಮೆ. ನಾಗರ ಹಾವಿನ ಕುರಿತಾಗಿ ಇರುವ ಕಪೋಲ ಕಲ್ಪಿತ ನಂಬಿಕೆಗಳನ್ನು ನಿವಾರಣೆ ಮಾಡಬೇಕಾಗದ ತುರ್ತು ಅಗತ್ಯತೆಯನ್ನು ಕೃತಿಕಾರ ಕಂಡುಕೊಂಡಿರುವುದು ಈ ಕೃತಿಯ ಮೂಲಕ ಸ್ಪಷ್ಟವಾಗಿ ತಿಳಿಯುತ್ತದೆ.
ಇಡೀ ಜಗತ್ತೇ ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾದರೂ ಕೂಡ ಪ್ರಕೃತಿಗೆ ಪ್ರಕೃತಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವ ವಿಚಾರ ಗೊತ್ತಿದೆ. ಮಾಫಿಯಾಗಳ ಕಪ ಮುಷ್ಟಿಯಲ್ಲಿ ನಾಶವಾಗುತ್ತಿರುವ ಪ್ರಕೃತಿಗೆ ಹೇಗೆ ಪ್ರತಿಕಾರ ತೀರಿಸಿಕೊಳ್ಳುವುದೆಂದೂ ಕೂಡ ಗೊತ್ತಿದೆ. ಆದರೇ, ಅವನತಿಗೊಂಡ ಕಾಡುಗಳ ನಡುವೆ ಪ್ಲ್ಯಾಸ್ಟಿಕ್ ಗಾಳಿಯಂತ್ರದಲ್ಲಿ ಉಸಿರಾಡಿ ವೈಭವ ಮಾಡುತ್ತಿರುವ ಮನುಷ್ಯ ‘ಬುದ್ಧಿಜೀವಿ’ ಎನ್ನಿಸಿಕೊಂಡಿರುವುದು ದೊಡ್ಡ ದುರಂತವೇ ಸರಿ. ಈ ಎಲ್ಲದರ ನಡುವೆ ನಮ್ಮ ಬದುಕಿಗೆ ನಾವೇ ಕುತ್ತು ತಂದುಕೊಳ್ಳುವುದು ಬೇಡ ಎನ್ನುವ ಕಾಳಜಿ ಹಾಗೂ ನಿಷ್ಕಳಂಕ ಕಳಕಳಿ ಇಲ್ಲಿ ಅಡಗಿದೆ.
ಕಾಡುಗಳು ಒಲೆಗಳಲ್ಲಿ ಸುಡುತ್ತಿವೆ. ನಾಗ ಬನ ಪ್ರಕೃತಿಯನ್ನು ಉಳಿಸಲಿ. ಬನಗಳು ಜೀವ ಸಂಕುಲಗಳಿಗೆ ನೆಲೆಯಾಗಲಿ. ವನ್ಯ ಜೀವಿಗಳ ಕಾರಿಡಾರ್ ಗಳನ್ನು ನಮ್ಮ ಭೋಗಕ್ಕೆ ಬಳಸಿಕೊಳ್ಳುವಷ್ಟು ಬುದ್ಧಿಜೀವಿಗಳಾಗುವ ತೆವಲಿನ ಬಗ್ಗೆ ಈ ಕೃತಿಯಲ್ಲಿ ಸೌಮ್ಯ ಧ್ವನಿಯ ವ್ಯಂಗ್ಯವೂ ಅಲ್ಲಲ್ಲಿ ಮಾರ್ಮಿಕವಾಗಿ ಇದೆ.
ಈ ಕೃತಿಯನ್ನು ಓದುವವನಿಗೆ ಇದೊಂದು ಕಮ್ಯುನಿಸ್ಟ್ ಧೋರಣೆಯೋ, ವೈಜ್ಞಾನಿಕ ಚಿಂತನೆಯೋ, ಎಡ ಚಿಂತನೆಯೋ, ಪರಿಸರವಾದವೋ, ನಾಸ್ತಿಕ ಚಿಂತನೆಯೋ ಅಂತನ್ನಿಸಲೂ ಬಹುದು. ಕೃತಿಕಾರ ವಿಸ್ತಾರ ವಿಷಯವನ್ನು ಓದುಗರಿಗೆ ಬಿಟ್ಟಿದ್ದಾರೆ. ಕೆಲವು ವರ್ಗಗಳಿಂದ ಬರುವ ಉಚಿತ ಹಣೆ ಪಟ್ಟಿಗಳಿಗೆ ತಲೆಕೆಡಿಸಿಕೊಳ್ಳುವ ಜನ ಗುರುರಾಜ್ ಸನಿಲ್ ಅಲ್ಲ ಎನ್ನುವುದು ಈ ಕೃತಿ ತಿಳಿ ಹೇಳುತ್ತದೆ. ಈ ಕೃತಿಯಲ್ಲಿ ವಾಸ್ತವವನ್ನು ಪದರವನ್ನು ಮಾತ್ರ ತೋರಿಸಿಲ್ಲ, ಅದರ ಪದರವನ್ನು ಎಳೆ ಎಳೆಯಾಗಿ ತೋರಿಸಿದ್ದಾರೆ ಎನ್ನುವುದು ಸತ್ಯಾಂಶ.
ಒಳ್ಳೆಯ ಓದು ಕನ್ನಡ ಸಾಹಿತ್ಯಕ್ಕೆ ಕೊಟ್ಟಂತಹ ಕೃತಿಕಾರರಿಗೂ, ‘ನಮ್ಮ ಮನೆ ನಮ್ಮ ಮರ’ ಸಂಸ್ಥೆಯವರಿಗೂ ಓದುಗ ವಂದಿಸಲೇ ಬೇಕು. ಕೃತಿಯ ಉದ್ದೇಶ ಈಡೇರಲಿ, ಬನಗಳು ವಿಸ್ತಾರಗೊಳ್ಳಲಿ, ಜೀವ ಸಂಕುಗಳಿಗೆ ಬನಗಳೇ ನೆಲೆಯಾಗಲಿ. ಕಾಂಕ್ರೀಟ್ ಕಾಡುಗಳು ನಾಶವಾಗಲಿ. ಬನ ಬನಗಳಲ್ಲಿ ಪ್ರಕೃತಿ ಆರಾಧನೆ ನಡೆಯಲಿ.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಕೋವಿಡ್ ನಿಂದ ಮೃತ ಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ನೀಡುವ ಸುದ್ದಿ ಸುಳ್ಳು :ಜಿ. ಜಗದೀಶ್