Advertisement

ಭಾವನಾತ್ಮಕತೆಯ ಬದುಕನ್ನು ತೇಲಿಸಿದ ‘ಹಿನ್ನೀರ ಅಲೆಗಳು’

01:21 PM Mar 28, 2021 | ಶ್ರೀರಾಜ್ ವಕ್ವಾಡಿ |

ಈ ಕೃತಿಯನ್ನು ಓದುವಾಗ,  ನನಗೆ ಬಹಳವಾಗಿ ಬೇಕಾದ ಹಿರಿಯರೊಬ್ಬರು ನನ್ನ ಕಥೆಗಗಳನ್ನು ವಿಮರ್ಶಿಸುವಾಗ ಹೇಳಿದ ಮಾತು ನೆನಪಾದವು.

Advertisement

ಅದೇನೆಂದರೇ, ಕಥೆಗಳಿಗೆ ಎರಡು ಪ್ರಮುಖ ಉದ್ದೇಶಗಳಿವೆ. ಒಂದು – ಕಥೆಗಳಲ್ಲಿನ ಪಾತ್ರಗಳ ಸ್ವಭಾವ ಮತ್ತು ಚಿತ್ರ, ವಿಶ್ಲೇಷಣೆ. ಇನ್ನೊಂದು – ಪಾತ್ರಗಳು ಬದುಕುತ್ತಿರುವ ಸಮಾಜದ ಸುತ್ತಲಿನ ಆಯಾಮಗಳು ಹಾಗೂ ಅವುಗಳ ಚಿತ್ರಣ ಮತ್ತು ವಿಶ್ಲೇಷಣೆ.

ಈ ‘ಹಿನ್ನೀರ ಅಲೆಗಳು’ ಕಥಾ ಸಂಕಲನದಲ್ಲಿ ಕಥೆಗಾರ ಪರಮೇಶ್ವರ ಕರೂರು ಮೇಲೆ ಹೇಳಿರುವ ಎರಡು ಉದ್ದೇಶಗಳನ್ನು ತಮ್ಮ ಇಲ್ಲಿನ ಏಳು ಕಥೆಗಳಲ್ಲಿ ಭಾಗಶಃ ಅಥವಾ ಬಹುತೇಕ ಪೂರೈಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದಾರೆ ಎಂದು ನನಗೆ ಕೃತಿ ಓದಿ ಮುಗಿಸಿದ ಮೇಲೆ ಗಮನಕ್ಕೆ ಬಂದಿದೆ.

ಓದಿ : ಕೋವೊವ್ಯಾಕ್ಸ್  ಸಪ್ಟೆಂಬರ್ ನಲ್ಲಿ ಬಳಕೆಗೆ ಲಭ್ಯ : ಪೂನವಾಲಾ

‘ಹಿನ್ನೀರ ಅಲೆಗಳು’ ಮಾನವೀಯ ಸಂಬಂಧಗಳ ನಡುವೆ ಬೆಳೆಯುವ ಭಾವನಾತ್ಮಕ ಬೆಸುಗೆ ಹಾಗೂ ಬೇಡವೆಂದರೂ ಬೆಳೆಯುವ ನೋವು, ದುಃಖ, ದುಮ್ಮಾನ, ಕ್ರೌರ್ಯ, ಹಿಂಸೆಗಳಿಂದ ಕೂಡಿರುವ, ಪ್ರಾದೇಶಿಕ ನೆಲ ಸೊಗಡನ್ನು ಕಥೆಗಳುದ್ದಕ್ಕೂ ಭರ್ತಿ ಮಾಡುವ ಕೃತಿ.

Advertisement

ಇಲ್ಲಿನ ಏಳೂ ಕಥೆಗಳಲ್ಲಿ ಕಥೆಗಾರ ಪರಮೇಶ್ವರ ಕರೂರು ಅವರು, ತನ್ನ ಸುತ್ತಮುತ್ತಲಿನ ಬದುಕು ಮತ್ತು ಅದರ ಸ್ವಭಾವ, ನಡತೆ, ಸ್ಪಂದನೆ ಮತ್ತದರ ಬೆಳವಣಿಗೆಗಳನ್ನು ಗ್ರಹಿಸಿದ ಬಗೆ ಅದ್ಭುತ.

ಪಾತ್ರಗಳ ಭಾವಗಳನ್ನು ತನ್ನದು ಎಂದು ಸ್ಪಂದಿಸುವ ಅತಿ ಸೂಕ್ಷ್ಮ ಮನಸ್ಸು ಇರುವುದು ಬಹುತೇಕ ಎಲ್ಲಾ ಇಲ್ಲಿನ ಕಥೆಗಳ ವಿಸ್ತಾರ ಮತ್ತು ಆಳದಲ್ಲಿ ನಾವು ಗಮನಿಸಬಹುದು.

ಲಿಂಗನಮಕ್ಕಿ ಬ್ಯಾಕ್ ವಾಟರ್ ಅಥವಾ ಹಿನ್ನೀರಿನ ಕಾರಣದಿಂದ ಅಲ್ಲಿನ ಸುತ್ತಮುತ್ತಲಿನ ವಾಸಿಗಳಿಗೆ ಆದ ಸಮಸ್ಯೆಗಳು ಇಲ್ಲಿನ ಕಥೆಗಳಲ್ಲಿ ಧ್ವನಿಸುತ್ತವೆ‌.

ಪ್ರಚಲಿತಕ್ಕೆ ತೊಡಗಿಕೊಳ್ಳುವ ಕಥೆಗಾರರ ಭಾವಾಭಿವ್ಯಕ್ತಿಯ ಕಾರಣದಿಂದಲೇ, ಕಥೆಗಳಲ್ಲಿನ ನೋವುಗಳೂ ಸೃಜನಶೀಲತೆಯಿಂದ ಮನಮುಟ್ಟುವಂತೆ ಮಾಡುತ್ತದೆ ಅಂತನ್ನಿಸುತ್ತದೆ ನನಗೆ.

ಕಥೆಗಳಲ್ಲಿ ಬಳಸಿದ ಭಾಷೆ ಚೆನ್ನಾಗಿದೆ. ಪರಮೇಶ್ವರ ಕರೂರು ಅವರಿಗೆ ಉಡುಪಿ ಜಿಲ್ಲೆಯ ಕುಂದಾಪುರಕ್ಕೂ ವೈಯಕ್ತಿಕ ಸಂಬಂಧ ಇರುವ ಕಾರಣದಿಂದಲೇ ಅಂತನ್ನಿಸುತ್ತದೆ ಎರಡು ಮೂರು ಕಥೆಗಳಲ್ಲಿ ಕುಂದಾಪ್ರ ಕನ್ನಡವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ.

‘ಹಿನ್ನೀರ ಅಜ್ಜಿಯ ಕಣ್ಣೀರ ಕಥೆ’ ಯಲ್ಲಿ ಈರಜ್ಜಿಯ ಬತ್ತಿ ಹೋಗುವ ಭಾವಗಳು ಎದೆ ಹಿಂಡುತ್ತವೆ. ಸಿಗಂದೂರಿನ ಲಾಂಚ್ ನ ಸುತ್ತ ಕಥೆ ಹುಟ್ಟಿಕೊಳ್ಳುತ್ತದೆ‌. ಅಜ್ಜಿಯ ಕೂಗು, ರೋಧನ ಕೇಳಿಸದ ಕಿವಿಗಳು ಮತ್ತು ಅವುಗಳ ವರ್ತನೆಯ ಬಗ್ಗೆ ಕೋಪ ಉಂಟು ಮಾಡಿಸುತ್ತದೆ. ‘ಕಬ್ಬನದ ಲಾಂಚ್ಗೆ ಕಣ್ಣೀರ್ ಬರತ್ತದಾ..?’ ಎಂದು ರೋಧಿಸುವ ಅಜ್ಜಿ ಕಾಡದೇ ಇರಲಾರಳು‌. ಇನ್ನು, ಈರಜ್ಜಿಯ ಮೂಲಕ ಸಮಸ್ಯೆಗಳಿಗೆ ಕನ್ನಡಿ ಹಿಡಿದ ಪರಿ ನಿಜಕ್ಕೂ ಸ್ತುತ್ಯಾರ್ಹ‌. ‘ರಾಮನ ದುಡಿ’ ಅಚ್ಚ ಕುಂದಾಪ್ರ ಕನ್ನಡದ ಕಥೆ. ಕಾರಂತರ ‘ಚೋಮನ ದುಡಿ’ಯನ್ನು ನೆನಪಿಸದೇ ಇರದು‌‌. ಪ್ರಾದೇಶಿಕತೆಯ ಮಾನವೀಯ ತುಡಿತ ಈ ಕಥೆಯಲ್ಲಿ ಎದ್ದು ಕಾಣಿಸುತ್ತದೆ. ಕಥೆ ಇಷ್ಟು ಬೇಗ ಮುಗಿಸಬಾರದಿತ್ತು ಅಂತನ್ನಿಸಿದರೂ ಓಡಿಸಿಕೊಂಡು ಹೋದಂತೆ ಭಾಸವಾಗುವುದಿಲ್ಲ‌.

ಓದಿ : ಡಾ| ಸಂಧ್ಯಾ ಎಸ್‌. ಪೈ ಸಹಿತ ಐವರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ

‘ಒಂದು ವಿಷದ ಬಾಟಲಿಯ ಸುತ್ತ’ ಸಂಕಟಗಳ ಸುತ್ತ ನಡೆಯುವ ಕಥೆ‌. ದುಃಖ ಸಾಲುಗಳೇ ತುಂಬಿರುವ ಕಥೆಯಲ್ಲಿ ನಾಳೆಗಳ ಬಗ್ಗೆ ತೆಳುವಾದ ಭರವಸೆಯೂ ಇದೆ‌‌. ಈ ಕಥೆ ತಾನನುಭವಿಸಿದ್ದನ್ನೇ ಅಕ್ಷರಗಳಿಗಿಳಿಸಿದ್ದಾರೆ ಅನ್ನಿಸುವುದರ ಜೊತೆಗೆ ಸಾಯುವುದು ಮಾತಿನಲ್ಲಿ ಹೇಳಿಬಿಡುವಷ್ಟು ಸುಲಭವಲ್ಲ ಎನ್ನುವುದನ್ನು ತಿಳಿಸುತ್ತದೆ.

‘ಹಂಚಿನ ಮನಿ, ಕಂಚಿನ ಕದ’ ಸೋಲಿನ ಕಥೆ, ‘ಅಪ್ಪನ ಕಾಗೆ’ ನಂಬಿಕೆ, ಆಚರಣೆ, ಪದ್ಧತಿಗಳ ಪ್ರತಿಬಿಂಬ.

ಉಳಿದ ಕಥೆಗಳು ಸ್ವಲ್ಪ ಸಾಮಾನ್ಯ ಅನ್ನಿಸಿದರೂ ಓದಿಸಿಕೊಂಡು ಹೋಗುವ ಕಥಾಂಶ, ತಂತ್ರಾಂಶ, ಪ್ರಾದೇಶಿಕತೆಯ ಒಲವಿಗೆ ಓದುಗನಿಂದ ಮೆಚ್ಚುಗೆ ಪಡೆಯುತ್ತವೆ ಎನ್ನುವುದು ಸತ್ಯ.

ಒಟ್ಟಿನಲ್ಲಿ, ಇಡೀ ಕೃತಿ ಶರಾವತಿಯ ಕಣಿವೆ ಭಾಗಗಳಲ್ಲಿ ನಿಂತ ಹಿನ್ನೀರುಗಳ ಅಲೆಯಲ್ಲಿ ತೇಲುವ ಬದುಕುಗಳ ಚಿತ್ರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಅಭಿವೃದ್ಧಿಯ ಹೆಸರಿನಲ್ಲಿ ಆಗದ ಅಭಿವೃದ್ಧಿ, ಸಮಾಜದ ಸ್ಥಿತಿ ಗತಿಗಳು, ಪರಿವರ್ತನೆಯಾಗಬಾರದ ರೀತಿಯಲ್ಲಿ ಪರಿವರ್ತನೆಯಾದ ವಿಷಯಗಳಿಗೆ ಕಥೆಗಾರ ಸ್ಪಂದಿಸಿದ ಪರಿ ಭಾವ ಬಿಂದುಗಳನ್ನು ಕೆಳಗುದುರಿಸುತ್ತದೆ.

-ಶ್ರೀರಾಜ್ ವಕ್ವಾಡಿ

ಓದಿ : ಅಂತಿಮ ಹಣಾಹಣಿ: ಟಾಸ್ ಗೆದ್ದ ಬಟ್ಲರ್, ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ

Advertisement

Udayavani is now on Telegram. Click here to join our channel and stay updated with the latest news.

Next