ಧಾರವಾಡ: ನಗರದಲ್ಲಿ ಸೆ. 22ರಿಂದ ಆರಂಭಗೊಳ್ಳಲಿರುವ ಕೃಷಿ ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತೆ ಸಿದ್ಧಪಡಿಸಿರುವ ನುಡಿಮುತ್ತುಗಳ ಪುಸ್ತಕವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯಪುರದಿಂದ ಧಾರವಾಡದವರೆಗೆ ಸ್ಕೂಟರ್ ಮೇಲೆ ಪುಸ್ತಕ ಪ್ರಚಾರ ಯಾತ್ರೆ ಆರಂಭಿಸಿದ್ದ ವಿಜಯಪುರ ಜಿಲ್ಲೆ ಹೂವಿನ ಹಿಪ್ಪರಗಿ ಗ್ರಾಮದ ಭೀಮರಾಯ ಹೂಗಾರ ಗುರುವಾರ ಧಾರವಾಡ ತಲುಪಿದ್ದಾರೆ.
ಬಿಕಾಂ ಪದವೀಧರರಾದ ಹೂಗಾರ ಅವರು ಬುಧವಾರ ಬೆಳಗ್ಗೆ 7 ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 7 ಗಂಟೆಗೆ ಧಾರವಾಡ ತಲುಪಿದ್ದಾರೆ. ಗುರುವಾರ ಇಡೀ ದಿನ ನಗರದಲ್ಲಿ ಪ್ರಚಾರ ನಡೆಸಿದರು.’ರೈತರ ಅಭಿವೃದ್ಧಿಗಾಗಿ ಸಾವಿರ ನುಡಿಮುತ್ತುಗಳು’ ಎಂಬ ಪುಸ್ತಕ ಸಿದ್ಧಪಡಿಸಿದ್ದು, ಸೆ.22ರಿಂದ ನಗರದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಈ ಪುಸ್ತಕ ಮಾರಾಟ ಮಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಕೇವಲ ಪುಸ್ತಕ ಪ್ರಚಾರ ಮಾತ್ರವಲ್ಲದೆ ಕೃಷಿ ವಿವಿಯ ವಿವಿಧ ವಿಭಾಗದ ಡೀನ್‌ಗಳನ್ನು ಭೇಟಿ ಸಹ ಮಾಡಿ ಚರ್ಚಿಸಲಿದ್ದಾರೆ.
ರಾಜ್ಯದ ವಿವಿಧೆಡೆ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಿಗೆ ಸಹ ಸ್ಕೂಟರ್ ಮೇಲೆ ತೆರಳಿ ಜನಜಾಗೃತಿ ಕೆಲಸ ಮಾಡಿರುವ ಭೀಮರಾಯ ಅವರು ಬರೆದ ಸ್ವಚ್ಛ ಭಾರತ ಪುಸ್ತಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರ ಬರೆದಿದ್ದಾರೆ.
ರೈತರು ಎದುರಿಸುತ್ತಿರುವ ಸಮಸ್ಯೆಗಳ ಆಧಾರದ ಮೇಲೆ ಸಾವಿರ ನುಡಿಮುತ್ತುಗಳನ್ನು ಬರೆದಿದ್ದು, ಇದರಿಂದ ರೈತರಲ್ಲಿ ಜಾಗೃತಿ ಮೂಡಲಿದೆ ಎಂಬುದು ಆಶಯ. 2019ರ ಜನವರಿ ತಿಂಗಳಲ್ಲಿ ಪುಸ್ತಕ ಪ್ರಚಾರಾರ್ಥ ವಿಜಯಪುರದಿಂದ ದೆಹಲಿವರೆಗೆ ಸ್ಕೂಟರ್‌ನಲ್ಲಿ ಯಾತ್ರೆ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇನೆ.
.
ಭೀಮರಾಯ
ಹೂಗಾರ