ಬೆಂಗಳೂರು: ಓದುಗರನ್ನು ಮತ್ತಷ್ಟು ಸೃಷ್ಟಿಸುವ ನಿಟ್ಟಿನಲ್ಲಿ ಗೋ ದಾನ, ಭೂ ದಾನದಂತೆ ಪುಸ್ತಕ ದಾನ ನಾಡಿನಾದ್ಯಂತ ನಡೆಯಬೇಕು ಎಂದು ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಹೇಳಿದ್ದಾರೆ.
ಸಪ್ನ ಬುಕ್ ಹೌಸ್ ಗಾಂಧಿನಗರ ಶಾಖೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ “ನೂರು ವಿದ್ಯಾರ್ಥಿಗಳಿಗೆ ನೂರು ಪುಸ್ತಕ ವಿತರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಲ್ಲಿ ಓದುವ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕ ದಾನ ನಡೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ಹೀಗಾಗಿ ಮಕ್ಕಳು ಬಾಲ್ಯದಲ್ಲೆ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು. ಶಾಲಾ ದಿನಗಳಲ್ಲಿ ಶಿಕ್ಷಕರು ನಮಗೆ ಕಥೆ ಪುಸ್ತಕ ಸೇರಿದಂತೆ ವಿವಿಧ ಪುಸ್ತಕಗಳನ್ನು ಮನೆಯಲ್ಲಿ ಓದಲು ಕೊಡುತ್ತಿದ್ದರು. ಆ ಸಂಸ್ಕೃತಿಯೇ, ನನ್ನಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಿತು ಎಂದು ತಮ್ಮ ಬಾಲ್ಯವನ್ನು ನೆನೆದರು.
ಸಪ್ನ ಬುಕ್ ಹೌಸ್ ಕನ್ನಡ ನಾಡು-ನುಡಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಉಚಿತವಾಗಿ ಪುಸ್ತಕ ನೀಡುವ ಮೂಲಕ ಅವರಲ್ಲಿ ಓದಿನ ಆಸಕ್ತಿ ಬೆಳೆಸುತ್ತಿದ್ದು ಇದು ಖುಷಿ ಪಡುವ ವಿಚಾರ. ಹೀಗಾಗಿ, ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋದ ನಂತರ ಆ ಪುಸ್ತಕದ ಬಗ್ಗೆ ನಿಮ್ಮ ಅನಿಸಿಕೆಯನ್ನು ಸಪ್ನ ಬುಕ್ ಹೌಸ್‌ಗೆ ಪತ್ರ ಮುಖೇನ ತಿಳಿಸಿ “ವಿಶೇಷ ಬಹುಮಾನ ಗೆಲ್ಲಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪತ್ರಕರ್ತ ಗಿರೀಶ್ ರಾವ್ ಮಾತನಾಡಿದರು. ಇದೇ ವೇಳೆ ಕನ್ನಡ ಸಾಹಿತ್ಯದ ಕುರಿತಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ ನೀಡಲಾಯಿತು. ಸಪ್ನ ಬುಕ್ ಹೌಸ್‌ನ ಮಾಲೀಕ ನಿತಿನ್ ಷಾ, ವ್ಯವಸ್ಥಾಪ ನಿರ್ದೇಶಕ ದೊಡ್ಡೆಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗಾಂಧಿನಗರದ ಬಿಬಿಎಂಪಿ ಶಾಲೆ, ಆರ್ಯ ವಿದ್ಯಾ ಶಾಲೆ ಸೇರಿದಂತೆ ಹಲವು ಶಾಲೆಗಳ ನೂರು ವಿದ್ಯಾರ್ಥಿಗಳಿದ್ದರು.