ಹಾವೇರಿ: ಕಳೆದ ವಾರದಿಂದಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆರಂಭಗೊಂಡಿದ್ದು, ಇದುವರೆಗೂ ಸಮರ್ಪಕವಾಗಿ ಪಠ್ಯಪುಸಕ್ತಗಳು ವಿತರಣೆಗೊಂಡಿಲ್ಲ. ಈ ಹಿನ್ನೆಲೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಶಿಕ್ಷಣ ಇಲಾಖೆ ಪ್ರತಿಯೊಂದು ಶಾಲೆಗಳಲ್ಲಿ “ಬುಕ್ ಬ್ಯಾಂಕ್’ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸಕ್ತಗಳ ಪೂರೈಕೆಗೆ ಮುಂದಾಗಿದೆ.
ಕಳೆದ ಎರಡು ವರ್ಷ ಕೋವಿಡ್ ಲಾಕ್‌ಡೌನ್ ಕಾರಣದಿಂದ ಪಠ್ಯಪುಸ್ತಕಗಳ ಮುದ್ರಣ ತಡವಾಗಿದ್ದು, ಈ ಬಾರಿ ಕಾಗದದ ಕೊರತೆ ಮತ್ತು ಮುದ್ರಣ ವೆಚ್ಚದಲ್ಲಿ ಭಾರಿ ಏರಿಕೆಯಾದ ಕಾರಣ ಪಠ್ಯಪುಸ್ತಕಗಳ ಮುದ್ರಣ ವಿಳಂಬವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬುಕ್ ಬ್ಯಾಂಕ್ ಮಾಡಿ ಹಳೆಯ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿ ಹೊಸದಾಗಿ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಪೂರೈಸುವ ಮೂಲಕ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಏನಿದು ಬುಕ್ ಬ್ಯಾಂಕ್: ವಿದ್ಯಾರ್ಥಿಗಳಿಗೆ ಪುಸ್ತಕಗಳ ಕೊರತೆ ಎದುರಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬುಕ್ ಬ್ಯಾಂಕ್ ತೆರೆಯಲಾಗಿದೆ. ಈ ಬುಕ್ ಬ್ಯಾಂಕ್‌ನಲ್ಲಿ ಸಂಗ್ರಹಗೊಂಡ ಪುಸ್ತಕಗಳನ್ನು ಹೊಸದಾಗಿ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಐದನೇ ತರಗತಿಯ ವಿದ್ಯಾರ್ಥಿಯಿಂದ ಪುಸ್ತಕಗಳನ್ನು ಸಂಗ್ರಹ ಮಾಡಿಕೊಂಡು, ಆ ವಿದ್ಯಾರ್ಥಿಗೆ ಆರನೇ ತರಗತಿಯ ಪುಸಕ್ತಗಳನ್ನು ನೀಡಲಾಗುತ್ತದೆ. ಹೀಗೆ ಒಂದರಿಂದ 10ನೇ ತರಗತಿ ವರೆಗೂ ಪುಸ್ತಕಗಳನ್ನು ಸಂಗ್ರಹಿಸಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಶೇ.70 ಪುಸ್ತಕಗಳ ಸಮಸ್ಯೆ ನೀಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಶಾಲೆಗಳಲ್ಲಿ ಮಾತ್ರ ಸಮಸ್ಯೆಯಾಗುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾಗಿ ಇಟ್ಟುಕೊಳ್ಳದೆ ಹಾಳು ಮಾಡಿಕೊಂಡಿದ್ದರೆ, ಸಂಗ್ರಹ ಕಡಿಮೆಯಾಗುತ್ತದೆ. ಉಳಿದಂತೆ ಶೈಕ್ಷಣಿಕ ಚಟುವಟಿಕೆಗೆ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಯನ್ನು ಬುಕ್ ಬ್ಯಾಂಕ್ ನೀಗಿಸುತ್ತದೆ.
ವ್ಯಾಪಕ ಪ್ರಶಂಸೆ: ಪ್ರಸಕ್ತ ವರ್ಷ ಪುಸ್ತಕಗಳು ಮುದ್ರಣಗೊಂಡಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಈ ರೀತಿಯಾಗಿ ಹಳೆಯ ಪುಸ್ತಕಗಳನ್ನು ಸಂಗ್ರಹ ಮಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗದಂತೆ ಕೈಗೊಂಡಿರುವ ಯೋಜನೆ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರತಿ ಶಾಲೆಯಲ್ಲಿಯೂ ಪುಸ್ತಕ ಸಂಗ್ರಹ ಮಾಡುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 75 ಸಾವಿರ ಹಳೆಯ ಪುಸ್ತಕಗಳನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಶಾಲಾ ಹಂತದಲ್ಲಿಯೇ ನೂತನ ವರ್ಷದ ವಿದ್ಯಾರ್ಥಿಗಳಿಗೆ ಶಾಲೆಗೆ ಬಂದ ಮೊದಲ ದಿನದಿಂದಲೇ ಹಂಚಿಕೆ ಮಾಡಲಾಗುತ್ತಿದೆ. ಇನ್ನು ಎರಡೂ¾ರು ತಿಂಗಳುಗಳ ಕಾಲ ಹೊಸ ಪುಸ್ತಕಗಳು ಬರುವುದು ತಡವಾಗುವುದರಿಂದ ಹಳೆಯ ಪುಸ್ತಕಗಳ ಮೂಲಕವೇ ಪಾಠ-ಪ್ರವಚನ ನಡೆಸಲು ಉದ್ದೇಶಿಸಲಾಗಿದೆ.
ಶೇ.35-40 ಪುಸ್ತಕ ಪೂರೈಕೆ: ಕಳೆದ ವಾರದಿಂದಲೇ ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಇದುವರೆಗೆ ಶೇ.40 ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಇನ್ನೂ ಶೇ.60 ಪಠ್ಯಪುಸಕ್ತಗಳು ಪೂರೈಕೆ ಆಗಬೇಕಿದೆ. ಜಿಲ್ಲೆಯಲ್ಲಿ ಒಟ್ಟು 23,28,939 ಪಠ್ಯಪುಸಕ್ತಗಳಿಗೆ ಬೇಡಿಕೆ ಸಲ್ಲಿಸಿದ್ದು, ಇದುವರೆಗೆ 9,19,296 ಪುಸಕ್ತಗಳು ಮಾತ್ರ ಪೂರೈಕೆಯಾಗಿವೆ. ಇದರಲ್ಲಿ ಬ್ಯಾಡಗಿ ತಾಲೂಕಿಗೆ 94,098, ಹಾನಗಲ್ಲ 1,61,939, ಹಾವೇರಿ 1,75,380, ಹಿರೇಕೆರೂರು 1,21,014, ರಾಣೆಬೆನ್ನೂರ 1,72,913, ಸವಣೂರ 95,436 ಹಾಗೂ ಶಿಗ್ಗಾವಿ 98,516 ಪುಸ್ತಕಗಳು ಪೂರೈಕೆಯಾಗಿವೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಳೆದ ವರ್ಷದಂತೆಯೇ ಶಾಲಾ ಹಂತದಲ್ಲಿ ಬುಕ್ ಬ್ಯಾಂಕ್ ಸ್ಥಾಪಿಸಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಯೋಜನೆ ರೂಪಿಸಿರುವುದು ಶ್ಲಾಘನೀಯ ಕಾರ್ಯ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.
ಕಳೆದ ವರ್ಷದಂತೆಯೇ ಶಾಲಾ ಹಂತದಲ್ಲಿಯೇ ಬುಕ್ ಬ್ಯಾಂಕ್ ಸ್ಥಾಪಿಸಲಾಗಿದ್ದು, ಈ ಮೂಲಕ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ನೂತನ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಸುಮಾರು 75 ಸಾವಿರ ಪುಸ್ತಗಳನ್ನು ಸಂಗ್ರಹಿಸಲಾಗಿದ್ದು, ಪುಸ್ತಕಗಳ ಸಂಗ್ರಹ ಕಾರ್ಯ ಮುಂದುವರಿಯಲಿದೆ. ಜಿಲ್ಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶೇ.40 ಪಠ್ಯಪುಸಕ್ತಗಳು ಪೂರೈಕೆಯಾಗಿದ್ದು, ಇನ್ನು ಶೇ.60 ಪೂರೈಕೆಯಾಗಬೇಕಿದೆ. –
ಬಿ.ಎಸ್.ಜಗದೀಶ್ವರ, ಡಿಡಿಪಿಐ ಹಾವೇರಿ ವಿಶೇಷ ವರದಿ