Advertisement

ಬೂದುಗುಂಬಳ ವೈವಿಧ್ಯ

12:30 AM Jan 04, 2019 | |

ತರಕಾರಿ ಯಾವುದೇ ಇರಲಿ ಅದರ ಎಲ್ಲಾ ಬಗೆಯ ಉಪಯೋಗಗಳನ್ನು ತಿಳಿದು ಬಳಸಿಕೊಂಡರೆ ಅದರಿಂದ ಸಿಗುವ ಗರಿಷ್ಠ ಪೌಷ್ಟಿಕಾಂಶಗಳು ನಮಗೆ ದೊರೆಯುತ್ತವೆ. ಜೊತೆಗೆ ಹಣದ ಉಳಿತಾಯವೂ ಆಗುತ್ತದೆ. ಬೂದುಗುಂಬಳಕಾಯಿಯ ಸಿಪ್ಪೆ , ತಿರುಳು ಎಲ್ಲದರಿಂದಲೂ ಬಗೆಬಗೆಯ ಆಹಾರವನ್ನು ತಯಾರಿಸಬಹುದು. ಇಲ್ಲಿವೆ ಕೆಲವು ಅಂತಹ ರೆಸಿಪಿಗಳು.

Advertisement

ಬೂದು ಗುಂಬಳಕಾಯಿಯ ಹಲ್ವ (ಕೂಷ್ಮಾಂಡ ಹಲ್ವ)

ಬೇಕಾಗುವ ಸಾಮಗ್ರಿ: ಬೂದುಗುಂಬಳಕಾಯಿ (ಚೆನ್ನಾಗಿ ಬೆಳೆದದ್ದು)- 3/4 ಕೆಜಿ, ಸಕ್ಕರೆ- 2 ಕಪ್‌, ತುಪ್ಪ- 250 ಗ್ರಾಂ, ಹಲ್ವದ ರಂಗು ಚಿಟಿಕೆ, ಇಲ್ಲದಿದ್ದರೆ ಚೂರು ಅರಸಿನಪುಡಿ, ಏಲಕ್ಕಿ , ದ್ರಾಕ್ಷಿ , ಗೋಡಂಬಿ.

ತಯಾರಿಸುವ ವಿಧಾನ: ಕುಂಬಳಕಾಯಿಯ ಸಿಪ್ಪೆ , ಬೀಜ, ತಿರುಳನ್ನು ತೆಗೆದು ಅದನ್ನು ತುರಿಮಣೆಯಲ್ಲಿ ಸಣ್ಣದಾಗಿ ತುರಿಯಿರಿ. ನಂತರ ಒಂದು ಬಾಣಲೆಗೆ ಹಾಕಿ ಅದನ್ನು ಕೈಯಾಡಿಸುತ್ತಿರಿ. ಸಮಯ ಜಾಸ್ತಿ ಬೇಕಾಗುತ್ತದೆ. ಚಿಟಿಕೆ ಬಣ್ಣ ಹಾಕಿ. ಚೆನ್ನಾಗಿ ಬೆಂದ ನಂತರ ಅದಕ್ಕೆ ಸಕ್ಕರೆಯನ್ನು ಹಾಕಿ ಕೈಯಾಡಿಸುತ್ತಿರಿ. ನಿಧಾನ ಕಾವು ಇರಬೇಕು. ನೀರಿನ ಅಂಶ ಹೋಗುವವರೆಗೆ ಮಗಚುತ್ತಿದ್ದು, ನಂತರ ತುಪ್ಪ ಹಾಕಿ, ಸ್ವಲ್ಪ ಹೊತ್ತಿನ ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯ ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರ ಮಾಡಿ. ಇದು ಪೀಸ್‌ ಮಾಡುವಷ್ಟು ಗಟ್ಟಿಯಾಗುವುದಿಲ್ಲ. ಬಟ್ಟಲಿಗೆ ಹಾಕಿ ಚಮಚದಲ್ಲಿ ತಿನ್ನುವಂಥ ಹದಕ್ಕೆ ಬಂದ ನಂತರ ಕೆಳಗಿಳಿಸಿ.

ಬೂದುಗುಂಬಳ ದೋಸೆ 
ಬೇಕಾಗುವ ಸಾಮಗ್ರಿ:
ಬಿಳಿ ಅಕ್ಕಿ- 2 ಲೋಟ, ಕುಂಬಳಕಾಯಿ ತಿರುಳು- ಬೀಜ ತೆಗೆದದ್ದು- ಒಂದು ದೊಡ್ಡ ಬಟ್ಟಲು, ಉದ್ದಿನಬೇಳೆ- 1 ಟೇಬಲ್‌ ಸ್ಪೂನ್‌, ಎಣ್ಣೆ.

Advertisement

ತಯಾರಿಸುವ ವಿಧಾನ: ದೋಸೆ ಅಕ್ಕಿಯನ್ನು ಉದ್ದಿನಬೇಳೆ ಜೊತೆ ನೆನೆಸಿಟ್ಟು ನೆನೆದ ಅಕ್ಕಿಯನ್ನು ದೋಸೆ ಹಿಟ್ಟಿನಂತೆ ರುಬ್ಬುವಾಗ ತಿರುಳನ್ನು ಹಾಕಿಕೊಂಡು ಚೆನ್ನಾಗಿ ಸಣ್ಣಗೆ ರುಬ್ಬಿ. ನಂತರ ದೋಸೆಯಂತೆ ತವಾದ ಮೇಲೆ ಹಾಕಿ ಮೇಲೆ ಸ್ವಲ್ಪ ಎಣ್ಣೆ ಹಾಕಿ. ಗರಿಗರಿಯಾದ ದೋಸೆಯ ಪರಿಮಳ ಬಹಳ ಚೆನ್ನಾಗಿರುತ್ತದೆ. ಚಟ್ನಿ , ಚಟ್ನಿಪುಡಿ ಜೊತೆ ಬೆಳಗಿನ ಫ‌ಲಾಹಾರ ಸವಿಯಿರಿ.

ಬೂದುಗುಂಬಳ ಸಿಪ್ಪೆಯ ಕೆಂಪು ಚಟ್ನಿ
ಬೇಕಾಗುವ ಸಾಮಗ್ರಿ:
ಸ್ವಲ್ಪ ದಪ್ಪಗಾಗಿ ತೆಗೆದ ಕುಂಬಳದ ಸಿಪ್ಪೆ- 1 ಬಟ್ಟಲು, ತೆಂಗಿನತುರಿ- 1 ಬಟ್ಟಲು, ಬ್ಯಾಡಗಿ ಮೆಣಸು – 4, ಧನಿಯ- 1/2 ಚಮಚ, ಹುಣಸೆಹಣ್ಣು ಸ್ವಲ್ಪ , ಉಪ್ಪು ರುಚಿಗೆ, ಅರಸಿನಪುಡಿ ಚಿಟಿಕೆ, ಉದ್ದಿನಬೇಳೆ – 3 ಚಮಚ, ಬೆಲ್ಲ ಸ್ವಲ್ಪ , ಎಣ್ಣೆ ಹುರಿಯಲು, ಕರಿಬೇವು, ಇಂಗು. 

ತಯಾರಿಸುವ ವಿಧಾನ: ಕುಂಬಳಕಾಯಿಯ ಸಿಪ್ಪೆಯನ್ನು ತೊಳೆದು ಒಂದು ಬಾಣಲೆಗೆ ಹಾಕಿ ಸ್ವಲ್ಪ ನೀರು, ಅರಸಿನಪುಡಿ, ಉಪ್ಪು, ಬೆಲ್ಲ, ಹುಣಸೆಹಣ್ಣನ್ನು ಹಾಕಿ ಚೆನ್ನಾಗಿ ಬೇಯಿಸಿ. ಮತ್ತೂಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಅದಕ್ಕೆ ಮೆಣಸಿನಕಾಯಿ, ಧನಿಯಾ, ಉದ್ದಿನಬೇಳೆಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಕೊನೆಗೆ ಇಂಗನ್ನು ಸೇರಿಸಿ. ಈಗ ಎಲ್ಲಾ ಸಾಮಾನುಗಳನ್ನು ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ ತೆಂಗಿನತುರಿಯೊಂದಿಗೆ ರುಬ್ಬಿಕೊಳ್ಳಿ. ಊಟದ ಜೊತೆಗೆ ಮಾತ್ರವಲ್ಲ ಇಡ್ಲಿ, ದೋಸೆ, ಚಪಾತಿ ಜೊತೆಗೂ ಚಟ್ನಿ ಸವಿಯಲು ರುಚಿಯಾಗಿರುತ್ತದೆ.

ಬೂದುಗುಂಬಳ ತಿರುಳಿನ ತಂಬುಳಿ 
ಬೇಕಾಗುವ ಸಾಮಗ್ರಿ:
ತಿರುಳು- 1 ಬಟ್ಟಲು, ಹಸಿಮೆಣಸು- 1, ಹುಳಿ ಮಜ್ಜಿಗೆ- 1/2 ಬಟ್ಟಲು, ಜೀರಿಗೆ- 1 ಚಮಚ, ಸಾಸಿವೆ- 1 ಚಮಚ, ತೆಂಗಿನತುರಿ- 1/2 ಬಟ್ಟಲು, ಉಪ್ಪು ರುಚಿಗೆ, ತುಪ್ಪ ಒಗ್ಗರಣೆಗೆ, ಕೆಂಪು ಮೆಣಸಿನಕಾಯಿ- 1, ಕರಿಬೇವು.

ತಯಾರಿಸುವ ವಿಧಾನ: ಒಂದು ಬಾಣಲೆಗೆ ಸ್ವಲ್ಪ ಜೀರಿಗೆ ಹಾಕಿ ತುಪ್ಪದೊಂದಿಗೆ ಹುರಿದುಕೊಳ್ಳಿ. ನಂತರ ಅದಕ್ಕೆ ತಿರುಳನ್ನು, ಹಸಿಮೆಣಸನ್ನು  ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ನಂತರ ತೆಂಗಿನ ತುರಿಯೊಂದಿಗೆ ಉಪ್ಪನ್ನು ಹಾಕಿ ಹುಳಿ ಮಜ್ಜಿಗೆಯ ಜೊತೆ ಸಣ್ಣಗೆ ರುಬ್ಬಿ. ಒಂದು ಪಾತ್ರೆಯಲ್ಲಿ ತೆಗೆದಿಟ್ಟು ನಂತರ ಕೆಂಪು ಮೆಣಸಿನಕಾಯಿ, ಜೀರಿಗೆ, ಕರಿಬೇವಿನ ಒಗ್ಗರಣೆಯನ್ನು  ತುಪ್ಪದಲ್ಲಿ ಕೊಡಿ. ಸಾರನ್ನಕ್ಕಿಂತ ಮೊದಲು ಊಟದ ಜೊತೆ ತಂಬುಳಿಯಲ್ಲಿ ಊಟಮಾಡಿ.

ಬೂದುಗುಂಬಳಕಾಯಿ ಸಿಪ್ಪೆಯ ಪಲ್ಯ 
ಬೇಕಾಗುವ ಸಾಮಗ್ರಿ:
ದಪ್ಪನಾಗಿ ಸಿಪ್ಪೆ ತೆಗೆದಿರಬೇಕು- 2 ಬಟ್ಟಲು, ತೆಂಗಿನತುರಿ-1/4 ಬಟ್ಟಲು, ಒಣಮೆಣಸಿನಕಾಯಿ- 2, ಸಾಸಿವೆ- 2 ಚಮಚ, ಉದ್ದಿನಬೇಳೆ- 1 ಚಮಚ, ಕಡಲೆಬೇಳೆ- 1 ಚಮಚ, ಎಣ್ಣೆ- 3 ಚಮಚ, ಹುಣಸೆರಸ- 3 ಚಮಚ, ಉಪ್ಪು ರುಚಿಗೆ, ಬೆಲ್ಲ ಸ್ವಲ್ಪ, ಅರಸಿನಪುಡಿ- 1/4 ಚಮಚ, ಕರಿಬೇವು ಸ್ವಲ್ಪ.

ತಯಾರಿಸುವ ವಿಧಾನ: ಕುಂಬಳಕಾಯಿಯಿಂದ 1/4 ಇಂಚಿನಷ್ಟು ದಪ್ಪವಾಗಿ ಸಿಪ್ಪೆ ತೆಗೆದು ಅದನ್ನು ಸಣ್ಣಗೆ ಪಲ್ಯದ ಹೋಳುಗಳಂತೆ ಕತ್ತರಿಸಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಮೆಣಸಿನಕಾಯಿ, ಸಾಸಿವೆ, ಉದ್ದಿನ, ಕಡಲೆಬೇಳೆ, ಕರಿಬೇವನ್ನು ಹಾಕಿ ಸಿಡಿದ ನಂತರ ಹೋಳುಗಳನ್ನು ಹಾಕಿ. ಅದಕ್ಕೆ ಹುಣಸೆ ರಸ, ಮೆಣಸಿನಕಾಯಿ, ತೆಂಗಿನತುರಿಯನ್ನು ಹಾಕಿ ಎರಡು ಸಲ ತಿರುಗಿಸಿ. ಬೆಂದು ನೀರು ಆರಿದ ಪಲ್ಯದ ಹೋಳುಗಳಿಗೆ ಜಾರಿನಲ್ಲಿದ್ದ ಮಿಶ್ರಣವನ್ನು ಸೇರಿಸಿ ಕೈಯಾಡಿಸಿ. ಅನ್ನದ ಜೊತೆ, ಚಪಾತಿ, ರೊಟ್ಟಿಗಳಿಗೆ ಈ ಪಲ್ಯ ಸೊಗಸಾಗಿರುತ್ತದೆ.

ಪುಷ್ಪಾ ಕೆ.ಎನ್‌. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next