Advertisement

Bone Growth: ನಿಮ್ಮ ಮಗುವಿನ ಎಲುಬಿನ ಬೆಳವಣಿಗೆ ಸರಿಯಿದೆಯೇ

09:21 AM Sep 03, 2023 | Team Udayavani |

ಮಂಜುನಾಥ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಜಾಣ ಬಾಲಕ. ಆತನಿಗೆ ಹುಟ್ಟಿನಿಂದಲೇ ಎರಡೂ ಪಾದ ವಕ್ರ ರೂಪದಲ್ಲಿ ತಿರುಗಿವೆ, ಇದು. ಇದು ತಾಯಿ ಮಹಾದೇವಿ ಅಮ್ಮನವರ ಶಾಪವೆಂದು ಭಾವಿಸಿ ಆತನಿಗೆ ಹೆತ್ತವರು ಚಿಕಿತ್ಸೆ ನಡೆಸಿಲ್ಲ. ಆತ ಪಾಪ ಈಗಲೂ ಈ ವಿರೂಪ ಹೊಂದಿದ ಕಾಲಿನಲ್ಲಿಯೇ ನಡೆದು ಶಾಲೆಗೆ ಹೋಗುತ್ತಿದ್ದಾನೆ,

Advertisement

ಶಕುಂತಲಾ ಬಾಲ್ಯದಲ್ಲಿ ಪೋಲಿಯೋ ವ್ಯಾಧಿಗೆ ತುತ್ತಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ. ಆಕೆಗೆ ಈಗ ಹದಿನೆಂಟರ ವಯಸ್ಸು. ಕಾಲಮೊಣಗಂಟನ್ನು ಕೈಯಲ್ಲಿ ಊರಿ ಪ್ರಯಾಸದಿಂದ ನಡೆಯುತ್ತಾಳೆ. ಮದುವೆಗೆ ಮುನ್ನ ಕಾಲನ್ನು ಯಾವುದೇ ರೀತಿಯಲ್ಲಿ ಸರಿಪಡಿಸಲಾಗುತ್ತದೆಯೋ ಎಂದು ಈಗ ಪಾಲಕರಿಗೆ ಕಾಳಜಿ ಹುಟ್ಟಿದೆ.

ಡಾ| ನವೀನ್‌ ನಗರದ ಖ್ಯಾತ ವೈದ್ಯರಲ್ಲೊಬ್ಬರು. ಅವರ ಮಗುವಿಗೆ ಬುದ್ಧಿಮಾಂದ್ಯ, ಎಂಟು ವಯಸ್ಸಿನ ಮಗುವಿಗೆ ಕೇವಲ ಎರಡೂವರೆ ವರ್ಷ ವಯಸ್ಸಿನ ಬೆಳವಣಿಗೆ ಇದೆಯಷ್ಟೆ.. ಆಕೆಯನ್ನು ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಸೇರಿಸುವ ಆಲೋಚನೆಯಲ್ಲಿದ್ದಾರೆ.

ಮೇಲೆ ತಿಳಿಸಿರುವ ಕಾಯಿಲೆಗಳು ಮಕ್ಕಳಲ್ಲಿ ಕಂಡುಬರುವ ಎಲುಬು ಹಾಗೂ ನರಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಕೆಲವು ಉದಾಹರಣೆಗಳು ಅಷ್ಟೆ. ಈ ಬಗೆಯ ಕಾಯಿಲೆಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಇಲ್ಲದೆ ನತದೃಷ್ಟ ಹೆತ್ತವರು ಮತ್ತು ಮಕ್ಕಳು ಸಮಾಜದಲ್ಲಿ ತೊಳಲಾಡುತ್ತಿದ್ದಾರೆ.

ಪೋಲಿಯೋ ಪ್ರಚಲಿತ ಕಾಯಿಲೆಯೇ?

Advertisement

ಪೋಲಿಯೋ ಬಗ್ಗೆ ಸಾಕಷ್ಟು ಪ್ರಚಾರ, ಸಂಶೋಧನೆ, ಲಸಿಕೆ ಅಳವಡಿಕೆ ಇತ್ಯಾದಿ ಬೆಳವಣಿಗೆಗಳು ಹೊಂದಿದರೂ ಪೋಲಿಯೋ ಕಾಯಿಲೆ ಈಗಲೂ ಕಾಣ ಸಿಗುತ್ತದೆ. ಈ ಕಾಯಿಲೆಯಲ್ಲಿ ಮಾಂಸದ ಬಲ ಕ್ಷೀಣಿಸುತ್ತದೆ ಹಾಗೂ ಗಂಟುಗಳು ವಿರೂಪಗೊಳ್ಳಬಹುದು. ಮಗು ಬಹಳ ಪ್ರಯಾಸದಿಂದ ನಡೆದಾಡಬಹುದು.

ಮಗುವಿನ ತೀವ್ರ ಕಾಯಿಲೆ

Arthrogrypsis ಎಂಬುದು ನವಜಾತ ಶಿಶುವಿನಲ್ಲಿ ಕಂಡುಬರುವ ಎಲುಬಿಗೆ ಸಂಬಂಧಪಟ್ಟ ತೀವ್ರತರದ ಕಾಯಿಲೆ. ಇದರಲ್ಲಿ ಮಗುವಿನ ಹೆಚ್ಚಿನ ಸಂಧಿಗಳು ಕೊಕ್ಕೆಯ ಹಾಗೆ ಉಬ್ಬಿಕೊಂಡಿರುತ್ತವೆ ಹಾಗೂ ಮಡಚುವುದು ಕಷ್ಟ ಸಾಧ್ಯ. ಇದರ ಜತೆಗೆ ಮಗುವಿನ ಹೃದಯದ ಅಥವಾ ಶ್ವಾಸಕೋಶದ ತೊಂದರೆಯೂ ಇರಬಹುದು. ಇದರ ಚಿಕಿತ್ಸೆ ಬಹಳ ಕ್ಲಿಷ್ಟಕರವಾದದ್ದು ಹಾಗೂ ಇದನ್ನು ಸರಿಪಡಿಸಲು ಹಲವು ಶಸ್ತ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗುತ್ತದೆ. ವೈದ್ಯ ಹಾಗೂ ಹೆತ್ತವರ ತಾಳ್ಮೆ ಇಲ್ಲಿ ಮಹತ್ವ ದ ಪಾತ್ರ ವಹಿಸುತ್ತದೆ.

ಎಲುಬಿನಲ್ಲಿ ಕೀವು

ಸಣ್ಣ ಮಗುವಿಗೆ ಭಾರೀ ಜ್ವರ, ಗಂಟು ಬಾತುಕೊಳ್ಳುವುದು, ನೋವಿನಿಂದ ಕೂಗುತ್ತಿರುವುದು ಇವು ಗಂಟಿನಲ್ಲಿ ಕೀವು ತುಂಬಿದ ಕಾಯಿಲೆಯ ಲಕ್ಷಣಗಳು (Septic Arthritis) ಅಥವಾ ಎಲುಬಿನಲ್ಲಿ ಕೀವು ತುಂಬಿದರೆ (Osteomyelitis) ಸಂಬಂಧಪಟ್ಟ ಕಾಲು ಅಥವಾ ಕೈ ಬಾವು ಬರುತ್ತದೆ. ಇದಕ್ಕೆ ತುರ್ತಾಗಿ ಎಲುಬು ತಜ್ಞರ ಸಲಹೆ ಪಡೆಯಬೇಕು.

ಎಲುಬಿನ ಅರ್ಬುದ ರೋಗ

ಅಪರೂಪವಾಗಿ ಮಕ್ಕಳಲ್ಲಿ ಎಲುಬಿನ ಅರ್ಬುದ ರೋಗ (Bone Tumours) ಅಥವಾ ಮಾಂಸದ ಅರ್ಬುದ ರೋಗ (Soft Tissue Sarcoma) ಕಾಣಬಹುದು. ಈ ಕಾಯಿಲೆ ಇರುವ ಮಗುವಿಗೆ ನೋವಿನ ಜತೆ ತೀರಾ ಬಳಲಿಕೆ ಹಾಗೂ ನಿಶ್ಶಕ್ತಿ ಇರುತ್ತದೆ. ಹೆತ್ತವರು ಅಸಡ್ಡೆ ಮಾಡದೆ ಮಗುವನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.

ಮಕ್ಕಳ ಸಂಧಿವಾತ

ಸಣ್ಣ ಮಕ್ಕಳಲ್ಲಿ ಕಂಡು ಬರುವ ಸಂಧಿವಾತ (Juvenile Rheumatoid Arthritis) ಹಲವು ಮನೆತನಗಳಿಗೆ ಮಾತ್ರ ಮೀಸಲಾಗಿದ್ದಿರಬಹುದು. ಕೈ ಬೆರಳುಗಳ ಗಂಟುಗಳು ಸಾಮಾನ್ಯವಾಗಿ ಈ ಕಾಯಿಲೆಗೆ ಬಲಿಯಾಗುತ್ತವೆ, ಜತೆಗೆ ದೇಹದ ಇತರ ಅಂಗಗಳೂ ಈ ಕಾಯಿಲೆಗೆ ಗುರಿಯಾಗಬಹುದು.

ದಾರಿ ಯಾವುದು?

ಆಲೊಪಥಿ ಚಿಕಿತ್ಸೆ ವಿಧಾನದಲ್ಲಿ ಎಲ್ಲ ಕಾಯಿಲೆಗಳಿಗೆ ಶತ ಪ್ರತಿಶತ ಫ‌ಲಕಾರಿ ಉಪಶಮನ ಇದೆಯೆಂದು ಹೇಳುವಂತಿಲ್ಲ. ಈ ಮಾತು ಮುಖ್ಯವಾಗಿ ಎಲುಬಿನ ಅರ್ಬುದ ರೋಗ (Bone Cancer) ಅಥವಾ ತೀವ್ರ ರೂಪದ ಸಂಧಿವಾತಗಳಿಗೆ ಅನ್ವಯಿಸುತ್ತದೆ. ಮಗುವನ್ನು ಶೀಘ್ರದಲ್ಲಿ ನುರಿತ ವೈದ್ಯರಿಂದ ತಪಾಸಣೆ ನಡೆಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೈಗೊಳ್ಳುವುದರಿಂದ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು, ಗುಣಪಡಿಸಬಹುದು. ತಪ್ಪಿದಲ್ಲಿ ಅದರ ತೀವ್ರತೆಯನ್ನು ಕುಗ್ಗಿಸಬಹುದು.

ಕಾರಣಗಳು ಏನು?

ಸಣ್ಣ ಮಕ್ಕಳಿಗೆ ತಗಲುವ ಎಲುಬಿನ, ಗಂಟಿನ, ನರ ಆಥವಾ ಮಾಂಸದ ಕಾಯಿಲೆಗೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಹೆಚ್ಚಿನವು ಮಗು ಹುಟ್ಟಿದಾಗಲೇ ಗೋಚರಿಸುತ್ತವೆ (Congential Disorders). ಪಾದ ಸೊಟ್ಟಗಾಗಿರುವುದು (Clubfoot), ಮೆದುಳು ಬಳ್ಳಿ ಬೆನ್ನಿನ ಭಾಗದಲ್ಲಿ ಹೊರದೂಡಿ ಕಂಡು ಬರುವುದು, (Meningocele) ಸೊಂಟದ ಕೀಲು ತಪ್ಪಿರುವುದು (Congenital hip dislocation), ತೊಡೆಯ ಎಲುಬಿನ ಬೆಳವಣಿಗೆ ಕುಂಠಿತವಾಗಿರುವುದು (Congenital short femur), ಕೈ ಬೆರಳುಗಳು ಅಂಟಿಕೊಂಡಿರುವುದು (Syndactyly) ಇತ್ಯಾದಿ ಈ ಬಗೆಯ ತೊಂದರೆಗಳಿಗೆ ಉದಾಹರಣೆಗಳು. ಇವುಗಳಲ್ಲಿ ಕೆಲವು ವಂಶಪಾರಂಪರವಾಗಿ ಬರಬಹುದು ಅಥವಾ ತಾಯಿ ಗರ್ಭಿಣಿಯಾಗಿರುವಾಗ ಕೆಲವು ಕಾಯಿಲೆಗಳಿಗೆ ಒಳಗಾದರೆ ಅದು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ರೋಗನಿರೋಧಕ ಗುಳಿಗೆ, ಧೂಮಪಾನ, ಶರಬು ಸೇವನೆ ಇವೆಲ್ಲ ಭ್ರೂಣದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ.

ಮಗುವಿನ ಬುದ್ಧಿಮಾಂದ್ಯತೆಗೆ ಮೆದುಳಿಗೆ ತಗಲುವ ಆಘಾತ ಮುಖ್ಯ ಕಾರಣ. ಈ ಆಘಾತ ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಜನಿಸಿದ ಮೊದಲ ಹಲವು ದಿನಗಳಲ್ಲಿ ಸಂಭವಿಸಬಹುದು. ಇದರ ಜತೆಗೆ ಮಗುವಿನ ಮೆದುಳು ಅಥವಾ ಮೆದುಳುಬಳ್ಳಿಯ ಬೆಳವಣಿಗೆಯಲ್ಲಿ ತಡೆ ಉಂಟಾಗಿದ್ದಲ್ಲಿ ಇಂತಹ ಶಿಶು ತೀವ್ರತರಹದ ಬುದ್ಧಿಮಾಂದ್ಯತೆಗೆ ಒಳಗಾಗುತ್ತದೆ.

ಕೈಕಾಲುಗಳ ನರ ಹಾಗೂ ಮಾಂಸದ ಮೇಲೆ ಪರಿಣಾಮ ಕಂಡುಬಂದು ಮಗು ಬೆಳವಣಿಗೆಯಲ್ಲಿ ಹಿಂದೆ ಬೀಳುತ್ತದೆ (CerebralPalsy). ಇದಲ್ಲದೆ ಮಕ್ಕಳಿಗೆ ತಗಲುವ ತೀವ್ರತರದ ಮೆದುಳು ಜ್ವರ (Meningitis), ವಿಷಮ ಜ್ವರ (Infection) ಇತ್ಯಾದಿ ಬೆಳವಣಿಗೆಗೆ ಮಾರಕವಾಗಬಹುದು.

ಹುಟ್ಟಿನಲ್ಲಿ ಕಂಡುಬರುವ ಕಾಯಿಲೆಗಳ ಪರಿಹಾರ ಏನು?

ಮಗುವಿನ ಕಾಲು ಸೊಟ್ಟಾಗಿರುವುದು, ಮೆದುಳು ಅಥವಾ ಮೆದುಳು ಬಳ್ಳಿಯ ತೊಂದರೆ ಇತ್ಯಾದಿ ಕಾಯಿಲೆಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಕೆಲವೊಮ್ಮೆ ಮಗು ಜನಿಸಿದ ಒಂದೆರಡು ದಿನಗಳೊಳಗೆ ಮೆದುಳು ಬಳ್ಳಿಯ ಸೀಳನ್ನು ಮುಚ್ಚುವ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಸೊಟ್ಟಗಿರುವ ಕಾಲನ್ನು ಚಿಕ್ಕ ಪ್ರಾಯದಲ್ಲಿಯೇ ಪ್ಲಾಸ್ಟರ್‌ ಅಳವಡಿಸಿ ಸರಿಪಡಿಸಲು ಸಾಧ್ಯವಿದೆ. ಬಳಿಕ ವಿಶೇಷ ತರದ ಶೂ ಅಳವಡಿಸಿ ಕಾಲು ಸರಿಪಡಿಸಲು ಸಾಧ್ಯವಿದೆ ಅಥವಾ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಪಾದದ ಮಾಂಸ, ಎಲುಬು ಅಥವಾ ಗಂಟಿನ ಸುತ್ತ ಶಸ್ತ್ರಚಿಕಿತ್ಸೆ ನಡೆಸಿ ಮೊದಲಿನಂತಾಗುವಂತೆ ಮಾಡಲು ಸಾಧ್ಯ. ಬಾಲ್ಯದಲ್ಲಿ ಆಸಕ್ತಿ ವಹಿಸದೆ ಬಿಟ್ಟ ಕಾಲಿನ ಊನವನ್ನು ಯೌವನಾವಸ್ಥೆಯಲ್ಲಿಯೂ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದ ನಿದರ್ಶನಗಳಿವೆ.

ಪೋಲಿಯೋ ಪೀಡಿತ ಕಾಲನ್ನು ಸರಿಪಡಿಸಲು ಸಾಧ್ಯವೇ?

ನರ ಹಾಗೂ ಮೂಂಸ ದೌರ್ಬಲ್ಯ ಹೊಂದಿದ ಪೋಲಿಯೋ ಪೀಡಿತ ಕಾಲನ್ನು ಅಥವಾ ಕೈಯನ್ನು ವ್ಯಾಯಾಮದ ಮೂಲಕ (Physiotherapy), ಪಟ್ಟಿ ಅಳವಡಿಸುವ ಮೂಲಕ (Calipers) ಅಥವಾ ಶಸ್ತ್ರಕ್ರಿಯೆಯ ಮೂಲಕ ಉತ್ತಮಗೊಳಿಸುವ ಸಾಧ್ಯತೆ ಇದೆ. ಮಗುವಿನ ವಯಸ್ಸನ್ನು ಹೊಂದಿಕೊಂಡು ಹಾಗೂ ದೌರ್ಬಲ್ಯದ ಬಗೆಯನ್ನು ಹೊಂದಿಕೊಂಡು ನರದ, ಮಾಂಸದ ಅಥವಾ ಕೀಲಿನ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಬುದ್ಧಿಮಾಂದ್ಯ ಮಗು ಶಾಪವೇ?

ಬುದ್ಧಿಮಾಂದ್ಯ ಹೊಂದಿರುವ ಮಗುವನ್ನು ಪಡೆದಿರುವ ಕುಟುಂಬದ ಕಥೆ ಕರುಣಾಜನಕವಾದದ್ದು. ಇಂತಹ ಮಗುವಿನ ದಿನಂಪ್ರತಿ ಚಟುವಟಿಕೆಗಳಲ್ಲಿ ಬಹಳಷ್ಟು ತೊಡಕುಗಳು ಇದ್ದು, ಮಗು ಇತರರನ್ನು ಅವಲಂಬಿಸಬೇಕಾಗುತ್ತದೆ. ತೀವ್ರ ಸ್ಥಿತಿಯ ಮಗುವಂತೂ ಹಾಸಿಗೆಯಲ್ಲೇ ಬಿದ್ದುಕೊಂಡಿರುವುದು ಹೃದಯವಿದ್ರಾವಕ ದೃಶ್ಯ. ಇಂತಹ ಮಕ್ಕಳಿಗೆ ಜೀವನ ಪರ್ಯಂತ ಆರೈಕೆ ನಡೆಸಬೇಕಾಗುತ್ತದೆ. ಹಾಗೆಯೇ ಮಕ್ಕಳ ತಜ್ಞ, ಎಲುಬು ತಜ್ಞ, ನರಗಳ ತಜ್ಞ ವೈದ್ಯರು, μಸಿಯೋಥೆರಪಿಸ್ಟ್‌ ಹಾಗೂ ಸಮಾಜ ಸೇವಕ -ಇವರೆಲ್ಲರ ಸೇವೆಯ ಅಗತ್ಯ ಇದೆ. ಬುದ್ಧಿಮಾಂದ್ಯ ಸಣ್ಣ ಮಟ್ಟಿನದ್ದಾದರೆ ಈ ಮಕ್ಕಳಿಗೂ ಪೋಲಿಯೋ ಕಾಯಿಲೆಗೆ ಪ್ರಚಲಿತದಲ್ಲಿರುವ ಚಿಕಿತ್ಸೆಯನ್ನು ಪಟ್ಟಿ (Calipers) ಅಥವಾ ಶಸ್ತ್ರಕ್ರಿಯೆಯ ರೂಪದಲ್ಲಿ ನೀಡಬಹುದು, ಮರದ ಕೊರಡಿನಂತಿರುವ ಕೈಕಾಲು ಗಂಟುಗಳನ್ನು ನಿರಂತರ ವ್ಯಾಯಾಮದ ಮೂಲಕ ಸಡಿಲಗೊಳಿಸಬಹುದು.

ನಿಮ್ಮ ಮಗು ಕುಬ್ಜರೂಪ ಹೊಂದಿದೆಯೇ?

ಕುಬ್ಜತೆ ಹೊಂದಿದ ವೃಕ್ತಿಯನ್ನು ರಸ್ತೆಯಲ್ಲಿ ಸಂಧಿಸಿದಾಗ ಎಲ್ಲರ ಗಮನ ಅತ್ತ ಹೊರಳುವುದು ಸಹಜ. ಕುಬjತೆಗೆ ಹಲವಾರು ಕಾರಣಗಳು ಇವೆ. ಅವುಗಳಲ್ಲಿ ತೊಡೆಯ ಅಥವಾ ಕಾಲಿನ ಮೂಳೆ ಸರಿಯಾದ ಪ್ರಮಾಣದಲ್ಲಿ ಬೆಳೆಯದಿದ್ದಲ್ಲಿ ಎಲುಬು ತಜ್ಞರ ಗಮನ ಹರಿಯುತ್ತದೆ. ಕೂಲಂಕುಷವಾಗಿ ಪರೀಕ್ಷೆ ನಡೆಸಿದ ಬಳಿಕ ಹಲವು ವಿನ್ಯಾಸದ ಶೂಗಳನ್ನು ಧರಿಸಲು ವ್ಯವಸ್ಥೆ ಮಾಡಬಹುದು. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಕುಬ್ಜ ಮಗುವನ್ನು ಉದ್ದ ಮಾಡಬಹುದು. ಇದಕ್ಕೆ ಪರಿಣತಿಯನ್ನು ಹೊಂದಿದ ಎಲುಬು ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ ಹಾಗೂ ಚಿಕಿತ್ಸೆ ತುಂಬಾ ದುಬಾರಿಯಾದದ್ದು ಮತ್ತು ಪ್ರಯಾಸಕರವಾದದ್ದು.

ಅಂಟಿದ ಕೈ ಬೆರಳುಗಳು

ಕೈಯ ಕೆಲಸದಲ್ಲಿ ಬೆರಳುಗಳ ಸಮರ್ಪಕವಾದ ರೂಪ ಹಾಗೂ ಬೆಳವಣಿಗೆ

– ಇವು ಅತೀ ಅಗತ್ಯ. ಅಂಟಿಕೊಂಡ ಬೆರಳುಗಳನ್ನು ಪ್ವಾಸ್ಟಿಕ್‌ ಸರ್ಜರಿ ರೂಪದ ಶಸ್ತ್ರಕ್ರಿಯೆಯ ಮೂಲಕ ಬೇರ್ಪಡಿಸಿ ಕೈಗೆ ನೈಜ ರೂಪ ಹಾಗೂ ಅದು ಸಮರ್ಥ ರೀತಿಯಲ್ಲಿ ಕೆಲಸ ಮಾಡುವ ಹಾಗೆ ಮಾಡಲು ಸಾಧ್ಯ. ಅದೇ ರೀತಿ ಹುಟ್ಟಿನಲ್ಲಿ ಹೆಬ್ಬೆರಳು ಇಲ್ಲದಿದ್ದಲ್ಲಿ, ಕೈಯ ಇನ್ನೊಂದು ಬೆರಳನ್ನು ಆಥವಾ ಕಾಲಿನ. ಹೆಬ್ಬೆರಳನ್ನು ಜೋಡಿಸಿ ನ್ಯೂನತೆಯನ್ನು ಹೋಗಲಾಡಿಸಬಹುದು, ಇದಕ್ಕೂ ಅನುಭವ ಹೊಂದಿದ ಎಲುಬು ತಜ್ಞ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

ಸೊಂಟದ ಕೀಲಿನ ತೊಂದರೆ

ಹುಟ್ಟಿದ ಮಗುವಿಗೆ ಸೊಂಟದ ಕೀಲು ತಪ್ಪಿರುವ ಸಾಧ್ಯತೆ ಇದೆ. ನವಜಾತ ಶಿಶುವನ್ನು ಮಕ್ಕಳ ತಜ್ಞರು ತಪ್ಪದೆ ಪರೀಕ್ಷೆ ನಡೆಸುವುದು ಅತೀ ಅಗತ್ಯ. ಮಗುವಿನ ವಯಸ್ಸು, ಕ್ಷ ಕಿರಣದ ಮಾಹಿತಿ – ಇತ್ಯಾದಿಗಳನ್ನು ಹೊಂದಿಕೊಂಡು ಕೀಲನ್ನು ಮತ್ತೆ ಸರಿಪಡಿಸಬಹುದು. ಇದನ್ನು ಪ್ಲಾಸ್ಟರ್‌ ಮೂಲಕ, ತೂಕ ಹಾಕಿ ಎಳೆಯುವುದರ ಮೂಲಕ (Traction) ಅಥವಾ ಗಂಟಿನ ಸುತ್ತ ನಡೆಸುವ ಶಸ್ತ್ರ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ನಿರ್ಲಕ್ಷ್ಯದಿಂದ ಸರಿಪಡಿಸದ ಮಗುವಿನ ಚಿಕಿತ್ಸೆಯನ್ನು ಶಾಲೆಗೆ ಹೋಗುವ ಹಂತದಲ್ಲಿಯೂ ನಡೆಸಬಹುದು.

ಮಾರಕವಾದ ಅರ್ಬುದ ರೋಗ “ಕುಮಾರನ ಏಳೂವರೆ ವರ್ಷದ ಮಗ ತೀರಿ ಹೋದನಂತೆ, ಹುಡುಗನಿಗೆ ಎಲುಬಿನ ಕ್ಯಾನ್ಸರ್‌ ಆಗಿತ್ತಂತೆ’ – ಈ ರೀತಿ ಕೆಟ್ಟ ಸುದ್ದಿಯನ್ನು ನಮ್ಮ ಬಂಧು ಬಳಗದಲ್ಲಿ ಕೇಳುತ್ತಿರುತ್ತೇವೆ. ವೈದ್ಯಕೀಯ ಜಗತ್ತಿನಲ್ಲಿ ಹಲವು ನಿಟ್ಟಿನಲ್ಲಿ ಪ್ರಗತಿ ಕಂಡು ಬಂದಿದ್ದರೂ ಅಬುìದ ರೋಗ ಚಿಕಿತ್ಸೆ‌ಯಲ್ಲಿ ಅದು ಕುಂಟುತ್ತ ಇದೆ, ಎಲುಬಿನ ಅಬುìದ ರೋಗಕ್ಕೂ ಈ ಮಾತು ಅನ್ವಯಿಸುತ್ತದೆ. ಸುಮಾರು 5ರಿಂದ 15 ವರ್ಷದ ವಯಸ್ಸಿನಲ್ಲಿ ಮಕ್ಕಳಿಗೆ ನಾನಾ ವಿಧದ ಎಲುಬಿನ ಅರ್ಬುದ ರೋಗ ಕಾಣಿಸಬಹುದು. ಇಂತಹ ಮಗು ತೀವ್ರ ರೂಪದ ನೋವು, ಬೆಳೆಯುತ್ತಿರುವ ಗೆಡ್ಡೆ, ತೀರಾ ಬಳಲಿಕೆ ಹಾಗೂ ಜ್ವರದಿಂದ ನರಳುತ್ತದೆ. ಅತೀ ಶೀಘ್ರದಲ್ಲಿ ತಪಾಸಣೆ ನಡೆಸಿ ಈ ಕಾಯಿಲೆಯನ್ನು ಹತೋಟಿಗೆ ತರಲು ವೈದ್ಯರು ಕಾದಾಡಬೇಕಾಗುತ್ತದೆ. ಆದರೆ ಇದು ಮಾರಕ ರೋಗ ಎಂಬುದನ್ನು ಗಮನದಲ್ಲಿಡಬೇಕು. ಸಮಾಧಾನಕರವಾದ ಅಂಶವೆಂದರೆ ಎಲುಬಿನಲ್ಲಿ ಕಂಡುಬರುವ ಅರ್ಬುದ ರೋಗ ನಮ್ಮ ಪ್ರಾಂತ್ಯದ ಮಕ್ಕಳಲ್ಲಿ ಅಪರೂಪ.

ಮಗುವಿಗೆ ವಿಟಮಿನ್‌ನ ಅಗತ್ಯ ಏನು?

ಮಕ್ಕಳ ಸಮರ್ಪಕ ಬೆಳವಣಿಗೆಯಲ್ಲಿ ಸಮತೋಲನ ಆಹಾರ ಸೇವನೆಯ ಜತೆಗೆ ಖನಿಜ ಪದಾರ್ಥ, ಹಲವು ವಿಟಮಿನ್‌ಗಳು ಮಹತ್ತರ ಕಾರ್ಯ ಹೊಂದಿವೆ. ವಿಟಮಿನ್‌ ಗಳ ಪೈಕಿ ವಿಟಮಿಎನ್‌ “ಡಿ’ ಎಲುಬಿನ ಬೆಳವಣಿಗೆಗೆ ಅತೀ ಅಗತ್ಯ. ಕ್ಯಾಲ್ಸಿಯಂ ಕೂಡ ಬೇಕು. ರಿಕೆಟ್ಸ್‌ ಎಂಬ ರೋಗಕ್ಕೆ ಮೂಲ ಕಾರಣ ವಿಟಮಿನ್‌ “ಡಿ’ಯ ಕೊರತೆ. ಹಾಲು, ಮೊಟ್ಟೆ, ಹಸುರು ತರಕಾರಿ, ಮೀನು ಇತ್ಯಾದಿ ವಿಟಮಿನ್‌ ಡಿಯನ್ನು ಅಧಿಕ ಪ್ರಮಾಣದಲ್ಲಿ ಹೊಂದಿವೆ. ಅದೇ ರೀತಿ ಸೂರ್ಯನ ಬಿಸಿಲು ದೇಹದ ಮೇಲೆ ಬಿದ್ದಾಗ ವಿಟಮಿನ್‌ “ಡಿ’ ನಮ್ಮ ದೇಹದಲ್ಲಿ ಸಮರ್ಪಕವಾಗಿ ಕೆಲಸ ನಡೆಸುತ್ತದೆ. ವಿಟಮಿನ್‌ “ಡಿ’ ಕೊರತೆಯ ಮಗು ನಿಶ್ಶಕ್ತಿ ಹೊಂದಿದ್ದು, ಕೈ ಕಾಲುಗಳು ಸೊಟ್ಟಗಾಗಿ ಬೆಳವಣಿಗೆ ಕುಂದುತ್ತದೆ. ಇದನ್ನು ವಿಟಮಿನ್‌ “ಡಿ’ಯ ಔಷಧಗಳ ಮೂಲಕ ಗುಣಪಡಿಸಲು ಸಾಧ್ಯ.

ಮಗುವಿನ ಅಪರೂಪ ಕಾಯಿಲೆಗಳು:

ರಕ್ತ ಹೆಪುrಗಟ್ಟುವುದರಲ್ಲಿ ತೊಡಕು (Haemophila), ಸ್ಕರ್ವಿ (ವಿಟಮಿನ್‌ ಸಿಯ ಕೊರತೆ), ಲೈಂಗಿಕ ರೋಗ (Congentital Syphilis, Gonorrhoea) ಇತ್ಯಾದಿ ಅಪರೂಪವಾಗಿ ಕೆಲವು ಮಕ್ಕಳಲ್ಲಿ ಕಂಡು ಬರುತ್ತವೆ. ಕೆಲವು ರೋಗಗಳು ವಂಶ ಪಾರಂಪರ್ಯವಾಗಿ ಕಂಡುಬರುತ್ತವೆ.

ಮಕ್ಕಳಲ್ಲಿ ಕಂಡುಬರುವ ಇನ್ನೊಂದು ಎಲುಬಿನ ಕಾಯಿಲೆಯೆಂದರೆ ತುಂಬಾ ಮೆದುವಾದ ಮೂಳೆಗಳು. ಇದಕ್ಕೆ ವೈದ್ಯಕೀಯ ಜಗತ್ತಿನಲ್ಲಿ Osteogenesis Imperfecta ಎಂದು ಹೆಸರು ಇದೆ. ಇದನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಸಂಧಿವಾತ ಕಾಯಿಲೆ ಕೆಲವು ಮಕ್ಕಳನ್ನು ಕಾಡಬಹುದು (Juvenile Rheumatoid Arthritis). ಇದು ಹಲವು ಕುಟುಂಬಗಳಲ್ಲಿ ಮಾತ್ರ ಕಂಡುಬರಬಹುದು, ನಾನಾ ವಿಧದ ಮಾತ್ರೆ, ಮದ್ದು ಹಾಗೂ ವ್ಯಾಯಾಮಗಳಿಂದ ಇದಕ್ಕೆ ಚಿಕಿತ್ಸೆ ನಡೆಸಬಹುದು. ಮಕ್ಕಳ ಬೆನ್ನಿನ ಕಾಯಿಲೆಗಳಲ್ಲಿ ಗೂನುಬೆನ್ನು (Scolisis Kyphosis) ಹಾಗೂ ಟಿ.ಬಿ. ಕಾಯಿಲೆ ಪ್ರಮುಖವಾದವುಗಳು. ಇವುಗಳಿಗೂ ಸೂಕ್ತ ಪರಿಹಾರ ಎಲುಬು ತಜ್ಞರಲ್ಲಿದೆ.

ಸಮಸ್ಯೆಗಳು ಹಲವು

ಮಕ್ಕಳಲ್ಲಿ ಕಂಡುಬರುವ ಹಲವು ಅಸ್ಥಿ ರೋಗಗಳನ್ನು ಗುರುತಿಸುವುದರಲ್ಲಿ ಹಾಗೂ ಚಿಕಿತ್ಸೆ ನಡೆಸುವುದರಲ್ಲಿ ಉಂಟಾಗುವ ವಿಳಂಬವೇ ರೋಗ ಮಾರಕ ರೂಪ ಹೊಂದುವುದಕ್ಕೆ ಕಾರಣ. ಗರ್ಭಿಣಿ ಸ್ವೀಯರಲ್ಲಿ ಕಾಣುವ ಹಲವು ಕಾಯಿಲೆಗಳು ಹಾಗೂ ಹಾನಿಕಾರಕ ಮಾತ್ರೆಗಳ ಸೇವನೆ ಗರ್ಭದಲ್ಲಿ ರೂಪ ಹೊಂದುತ್ತಿರುವ ಭ್ರೂಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಡತನ, ನಿರ್ಲಕ್ಷ್ಯ, ರೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು, ಸಮತೋಲಿತ ಆಹಾರದ ಬಗ್ಗೆ ಉದಾಸೀನ, ವೈದ್ಯರಿಂದ ವೈದ್ಯರಲ್ಲಿ ಓಡಾಟ (Doctor Shopping) ಇವು ಬೆರಳೆಣಿಕೆಯಷ್ಟು ಮಾತ್ರದ ಇತರ ಕಾರಣಗಳು.

ಕಿವಿಮಾತು

ಮಗುವಿಗೆ ಬುದ್ಧಿಮಾಂದ್ಯ, ಕುಂಠಿತ ಬೆಳವಣಿಗೆ ಅಥವಾ ಇತರ ನ್ಯೂನತೆಗಳು ಕಂಡುಬಂದಲ್ಲಿ ಸಕಾಲಿಕ ಸಲಹೆ ಹಾಗೂ ಚಿಕಿತ್ಸೆ ಅಗತ್ಯ. ಗರ್ಭಿಣಿ ಸ್ಟೀಯರು ಆರೋಗ್ಯದ ಹಾಗೂ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. Prevention is better than cure ಎಂಬುದು ವೈದ್ಯಕೀಯ ಉವಾಚಗಳಲ್ಲೊಂದು. ಇದು ಅಕ್ಷರಶಃ ಸತ್ಯ. ಮಗುವಿಗೆ ಸಿರಿಲ್ಯಾಕ್‌, ಕಾರ್ನ್ಫ್ಲೇಕ್ಸ್‌ ಇತ್ಯಾದಿ ಕೊಡುತ್ತೀರೋ ಅಥವಾ ಹಾಲು, ಮಣ್ಣಿ ಇತ್ಯಾದಿ ಕೊಡುತ್ತೀರೋ – ಅದು ಅವರವರ ಪಾಲಿಗೆ ಬಿಟ್ಟದ್ದು. ಆದರೆ ಸಮತೋಲಿತ ಆಹಾರವನ್ನು ಸಕಾಲದಲ್ಲಿ ಕೊಡುವುದು ಮುಖ್ಯ. ಮಗು ಟಿವಿ, ಕಂಪ್ಯೂಟರ್‌ ಎದುರು ಕುಳಿತುಕೊಳ್ಳುವ ಬದಲು ನೈಸರ್ಗಿಕ ವಾತಾವರಣದಲ್ಲಿ, ಸೂರ್ಯನ ಹೊಂಬಿಸಿಲಿನಲ್ಲಿ ಓಡಾಡಲು ಬಿಡುವುದು ಎಷ್ಟೋ ಉತ್ತಮ. ಅನಾರೋಗ್ಯ ಹೊಂದಿದ ಮಗುವನ್ನು ತಡವಾಗಿಯಾದರೂ ಚಿಕಿತ್ಸೆಗೆ ಗುರಿಪಡಿಸುವುದು ಒಳಿತು. Better late than never ಎಂಬ ಮಾತು ಇಲ್ಲಿ ಉಲ್ಲೇಖನೀಯ. ಹುಟ್ಟಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತವಕ ಪಡೆಯುವ ಬದಲು ಬೆಳವಣಿಗೆ ಹಾಗೂ ಬುದ್ಧಿಶಕ್ತಿ ಸರಿಯಾಗಿರುವ ಆರೋಗ್ಯವಂತ ಶಿಶುವನ್ನೇ ಹಾರೈಸುವುದು ಸಮಂಜಸವಲ್ಲವೇ?

ಡಾ| ಬಿ. ಸೀತಾರಾಮ ರಾವ್‌ ಪ್ರೊಫೆಸರ್‌, ಆರ್ಥೊಪೆಡಿಕ್ಸ್‌ ವಿಭಾಗ ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೊಪೆಡಿಕ್ಸ್‌ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next