ಬೆಂಗಳೂರು: ಕೋವಿಡ್-19ರ ಸಂದರ್ಭದಲ್ಲಿ ಇಡೀ ದೇಶದಲ್ಲಿ ಆರ್ಥಿಕ ಚಟುವಟಿಕೆ ಏರುಪೇರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಿದೆ. ರಾಜ್ಯ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ತೊಂದರೆಗಳ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿವರಿಸಲಾಗಿದ್ದು, ಜಿಎಸ್‌ಟಿ ಪರಿಹಾರ ಬಾಕಿ 13,764 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕೇಂದ್ರ ರಾಜ್ಯ ಸರ್ಕಾರಗಳ ಮುಂದೆ ಎರಡು ಪ್ರಸ್ತಾಪವಿಟ್ಟಿದೆ. ಮೊದಲಿಗೆ ಆರ್‌ಬಿಐ ಮೂಲಕ ರಾಜ್ಯಗಳಿಗೆ ಸಾಲ ನೀಡುವುದು. ಎರಡನೆಯದಾಗಿ ಕೋವಿಡ್ ಯೇತರ ನಷ್ಟ ಹಾಗೂ ಒಟ್ಟಾರೆ ನಷ್ಟ ಪಡೆಯುವ ಬಗ್ಗೆ ರಾಜ್ಯಗಳ ಒಪ್ಪಿಗೆ ಇದೆಯೇ ಎಂದು ಅಭಿಪ್ರಾಯ ಕೇಳಿದೆ ಎಂದರು.
ಎಫ್ಆರ್‌ಬಿಎಂ ಅಡಿ ರಾಜ್ಯ ಸರ್ಕಾರ ಪಡೆಯುವ ಸಾಲ ಪ್ರಮಾಣವನ್ನು ಶೇ.0.5 ಹೆಚ್ಚಳ ಮಾಡಿದೆ. ಮುಖ್ಯಮಂತ್ರಿ ಗಳೊಂದಿಗೆ ಕೇಂದ್ರ ಹಣಕಾಸು ಸಚಿವರು ಮಾತುಕತೆ ನಡೆಸಿದ್ದಾರೆ. ಲಿಖೀತ ರೂಪದಲ್ಲಿ ಕೇಂದ್ರದಿಂದ ಪ್ರಸ್ತಾವ ಬರಲಿದೆ. ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದಂತೆ ಯಾವ ರೀತಿ ಪರಿಹಾರ ಪಡೆಯಬಹುದು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
“ಜಿಎಸ್‌ಟಿ ಪಾಲು ನೀಡದೇ ರಾಜ್ಯಕ್ಕೆ ದ್ರೋಹ’ : ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ ನೀಡುವುದಿಲ್ಲ ಎಂದು ಹೇಳಿ ರಾಜ್ಯಕ್ಕೆ ದ್ರೋಹ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರವು ಕೋವಿಡ್-19 ನಿಂದಾಗಿ ಜಿ.ಎಸ್‌ಟಿ ಸಂಗ್ರಹದಲ್ಲಿ 3 ಲಕ್ಷ ಕೋಟಿಗಳಷ್ಟು ಕೊರತೆಯಾಗಲಿದೆ ಹಾಗೂ ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆ 97 ಸಾವಿರ ಕೋಟಿಗಳಷ್ಟಾಗಲಿದೆ. ಇದರಲ್ಲಿ 2.35 ಲಕ್ಷ ಕೋಟಿ ರೂ.ಗಳ ಜಿಎಸ್‌ಟಿ ಪರಿಹಾರವನ್ನು ಈ ವರ್ಷನೀ ಡಲಾಗುವುದಿಲ್ಲವೆಂದು ತಿಳಿಸಿ ಆರ್‌ಬಿಐ ನಿಂದ ಸಾಲ ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.
ಕರ್ನಾಟಕವು ಕೋವಿಡ್ ಸಂಕಷ್ಟದ ನಡುವೆಯೂ ಶೇ.71.61 ಜಿಎಸ್‌ಟಿ. ಸಂಗ್ರಹ ಮಾಡಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 13,764 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಜನವರಿಯವರೆಗೆ ಇದು 27 ಸಾವಿರ ಕೋಟಿಗೆ ಏರಿಕೆಯಾಗ ಬಹುದು ಎಂದು ಅಂದಾಜು ಮಾಡಲಾಗಿದೆ. ಕೇಂದ್ರವು 15ನೇ ಹಣಕಾಸು ಆಯೋಗದ ವರದಿಯಲ್ಲೂ ರಾಜ್ಯಕ್ಕೆ ತಾರತಮ್ಯ ಮಾಡಿದೆ. ಈಗ ಜಿಎಸ್‌ಟಿಯಲ್ಲೂ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಆರ್‌ಬಿಐನಿಂದ ಸಾಲ ಪಡೆಯುವ ಆಯ್ಕೆ ಮಾಡಿ ಕೊಳ್ಳ ಬಾರದು. ಹೀಗೆಮಾಡಿದರೆ ರಾಜ್ಯದ ಸಾಂವಿಧಾನಕ್ಕೆ ತೊಡಕಾಗುತ್ತದೆ ಎಂದು ಹೇಳಿದರು.