ಬೆಂಗಳೂರು: ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಶಾಸಕರು ಹಾಗೂ ಆರೆಸ್ಸೆಸ್ ನಾಯಕರ ಜತೆ ಪಕ್ಷ ಸಂಘಟನೆಗೆ ಸಂಬಂಧಿಸಿ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕೇಶವ ಕೃಪಾಕ್ಕೆ ಭೇಟಿ ನೀಡಿದ ಬಳಿಕ ಸಂಘದ ಹಿರಿಯರ ಜತೆಗೆ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ , ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಆರ್.ಅಶೋಕ್, ವಿ. ಸುನಿಲ್ ಕುಮಾರ್, ಹೊಸದಾಗಿ ಆಯ್ಕೆಗೊಂಡ ಶಾಸಕರಾದ ಹುಲ್ಲಹಳ್ಳಿ ಸುರೇಶ್, ಸಿಮೆಂಟ್ ಮಂಜುನಾಥ ಮೊದಲಾದವರ ಜತೆಗೆ ಚರ್ಚೆ ನಡೆಸಿದರು.
ಆರೆಸ್ಸೆಸ್ ಮುಖಂಡರ ಭೇಟಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಬೊಮ್ಮಾಯಿ, ಚುನಾವಣೆ ಫಲಿತಾಂಶದ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ.
ರಾಜ್ಯಾಧಕ್ಷರು, ವರಿಷ್ಠರ ಜತೆ ಚರ್ಚಿಸಿ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎನ್ನುವ ತೀರ್ಮಾನ ಮಾಡುತ್ತೇವೆ ಎಂದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಸಭೆಯನ್ನು ಕರೆದಿಲ್ಲ. ಶಾಸಕರ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷರು ಇನ್ನೆರಡು ದಿನದಲ್ಲಿ ಕರೆಯುತ್ತಾರೆ ಎಂದರು.