ನವಿ ಮುಂಬಯಿ: ಬೋಂಬೆ ಬಂಟ್ಸ್ ಅಸೋಸಿಯೇಶನ್ ಯುವ ವಿಭಾಗದ ವತಿಯಿಂದ ರಕ್ತದಾನ ಶಿಬಿರವು ಆ. 15 ರಂದು ಜೂಯಿ ನಗರದಲ್ಲಿರುವ ಅಸೋಸಿಯೇಶನ್‌ನ ಬಂಟ್ಸ್ ಸೆಂಟರ್‌ನಲ್ಲಿ ನಡೆಯಿತು.
72 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೆರವೇರಿದ ರಕ್ತದಾನ ಶಿಬಿರವು ಬೋಂಬೆ ಬಂಟ್ಸ್ ಅಸೋಸಿಯೇಶನ್ ಬಂಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಇದರ ಪ್ರೋತ್ಸಾಹದೊಂದಿಗೆ ನೆರವೇರಿತು. ಶಿಬಿರವನ್ನು ಅಪೊಲೋ ಆಸ್ಪತ್ರೆ ನವಿಮುಂಬಯಿ ಇದರ ವೈದ್ಯರ ತಂಡವು ನಡೆಸಿಕೊಟ್ಟಿತು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿದರು. ಸಮಿತಿಯ ಸದಸ್ಯರು, ನೀಲೇಶ್ ಕದಮ್, ಅಪೊಲೊ ಆಸ್ಪತ್ರೆಯ ತಂಡದವರಾದ ಚೇತನ್ ಗೋಸ್ವಾಮಿ, ಡಾ| ಪುನೀತ್ ಜೈನ್, ಬ್ಲಿಡ್ ಬ್ಯಾಂಕ್‌ನ ಪದಾಧಿಕಾರಿಗಳು ಹಾಗೂ ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯ-ಸದಸ್ಯೆಯರು, ಬೋಂಬೆ ಬಂಟ್ಸ್ ಅಸೋಸಿಯೇಶನ್ ಬಂಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‌ನ ವಿದ್ಯಾರ್ಥಿಗಳು, ಹಿತೈಷಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಬೆಳಗ್ಗೆ ಧ್ವಜಾರೋಹಣದ ಆನಂತರ ಶಿಬಿರವು ಪ್ರಾರಂಭಗೊಂಡಿತು. ಶಿಬಿರದಲ್ಲಿ 69 ಯುನಿಟ್ ರಕ್ತ ಸಂಗ್ರಹಗೊಂಡಿದ್ದು, ರಕ್ತದಾನಿಗಳಿಗೆ ಪ್ರಮಾಣ ಪತ್ರ, ಡೊನೇಶನ್ ಕಾರ್ಡ್ ಇತ್ಯಾದಿಗಳನ್ನು ನೀಡಲಾಯಿತು. ಯುವ ವಿಭಾಗದ ಕಾರ್ಯಾಧ್ಯಕ್ಷ ಚರಣ್ ಆರ್. ಶೆಟ್ಟಿ ಅವರ ನೇತೃತ್ವದಲ್ಲಿ ಆ. 1ರಂದು ಯುವ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ತುರ್ತು ಪರಿಸ್ಥಿತಿಯಲ್ಲಿ ಇತರರ ಜೀವವನ್ನು ರಕ್ಷಣೆ ಮಾಡುವ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ನೀಲೇಶ್ ಕದಂ, ಡಾ| ಅನುಪ್ರೀತಾ ಹರ್ನೆ, ತಂಡದವರು ಸಹಕರಿಸಿದರು.