ಬೆಂಗಳೂರು: ನಗರ ಹಾಗೂ ಗ್ರಾಮಾಂತರ ಭಾಗದ 68 ಖಾಸಗಿ ಶಾಲೆಗಳಿಗೆ ಇ-ಮೇಲ್ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಪ್ರಕರಣದಲ್ಲಿ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದು, ನಕಲಿ ಇ-ಮೇಲ್ ಐಡಿ ಸೃಷ್ಟಿಸಿ ಆರೋಪಿಗಳು ಕೃತ್ಯ ಎಸಗಿರು ವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ 9 ಜನರ ಪೊಲೀಸ್ ಅಧಿಕಾರಿಗಳ ತಂಡವು ತಾಂತ್ರಿಕ ಕಾರ್ಯಾಚರಣೆಗೆ ಇಳಿದಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ, ಭೀತಿ ಹುಟ್ಟಿಸ ಲೆಂದೇ ನಕಲಿ ಖಾತೆ ಸೃಷ್ಟಿಸಿ ಕಿಡಿಗೇಡಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಆಯುಕ್ತ ಎನ್.ಸತೀಶ್ ಕುಮಾರ್ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ವಿದೇಶದ ಖಾಸಗಿ ಕಂಪನಿಯ ವರ್ಚ್ಯುವಲ್ ಪ್ರವೇಟ್ ನೆಟ್‌ವರ್ಕ್ (ವಿಪಿಎನ್)ಮೂಲಕ ಇ-ಮೇಲ್ ಸಂದೇಶ ಕಳುಹಿಸಿರುವ ಸುಳಿವು ಸಿಕ್ಕಿದೆ. ಇದರ ಬೆನ್ನಲ್ಲೇ ಬೆದರಿಕೆ ಬಂದಿರುವ ಇ-ಮೇಲ್‌ನ ನೋಂದಣಿ ವಿವರ, ಲಾಗಿನ್ ಐಪಿ, ಇ-ಮೇಲ್ ಡ್ರಾಫ್ಟ್, ಸೆಂಡ್ ಫೋಲ್ಡರ್, ಇಮೇಲ್ ಚಾಟ್ ಹಿಸ್ಟರಿಯಂತಹ ಸಾಮಾನ್ಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇ-ಮೇಲ್ ಐಪಿ ವಿಳಾಸ ಸಿಕ್ಕಿದರೆ ಸುಲಭ ವಾಗಿ ಆರೋಪಿಗಳ ಜಾಡು ಹಿಡಿಯಯ ಬಹುದಾಗಿದೆ. ಸರ್ವರ್ ಪ್ರೊವೈಡರ್‌ಗಳಿಂದಲೂ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರ ತಂಡ ಮುಂದಾ ಗಿದೆ. ಪೊಲೀಸ್ ಇಲಾಖೆಯಲ್ಲಿರುವ ಸೈಬರ್ ತಜ್ಞ ಅಧಿಕಾರಿ ಗಳು, ಖಾಸಗಿ ಸೈಬರ್ ತಜ್ಞರು ಸೇರಿ ತಾಂತ್ರಿಕವಾಗಿ ನಿಪುಣತೆ ಹೊಂದಿರುವ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ಆರೋ ಪಿಗಳ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಹಿಂದೆ ಇದೇ ಮಾದರಿಯಲ್ಲಿ ಕೆಲವು ಶಾಲೆಗಳಿಗೆ ಬಂದಿದ್ದ ಇ-ಮೇಲ್‌ಗಳು ಯಾವ ರೀತಿಯಲ್ಲಿ ಕಳುಹಿಸಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಶುಕ್ರವಾರ ಬಂದಿರುವ ಬೆದರಿಕೆ ಇ-ಮೇಲ್‌ಗೆ ಹೋಲಿಕೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ಶಾಲೆಗಳನ್ನೇ ಪದೇ ಪದೆ ಟಾರ್ಗೆಟ್ ಮಾಡುತ್ತಿರುವುದು ಏಕೆ ಎಂಬುದು ಪೊಲೀಸರಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಎಂದಿನಂತೆ ತರಗತಿಗೆ ಹಾಜರಾದ ಮಕ್ಕಳು: ಶಾಲಾ ಮೈದಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿರುವ ಪ್ರತಿಷ್ಠಿತ ಕೆಲ ಖಾಸಗಿ ಶಾಲೆಗಳಿಗೆ ಶನಿವಾರ, ಭಾನುವಾರ ಎರಡು ದಿನ ರಜೆ ಇರುತ್ತದೆ. ಹೀಗಾಗಿ ಕೆಲವು ಶಾಲೆಗಳು ಎಂದಿನಂತೆ ಮುಚ್ಚಿದ್ದರೆ, ಇನ್ನು ಕೆಲವು ಶಾಲೆಗಳಿಗೆ ಮಕ್ಕಳು ಹಾಜರಾಗುತ್ತಿರುವುದು ಕಂಡು ಬಂತು. ಪಾಲಕರು, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಎಂಬುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿಗರು ನಿರಾಳರಾಗಿದ್ದಾರೆ.