ಬೆಂಗಳೂರು: ಯಶವಂತಪುರದ ಕೇಂದ್ರಿಯ ವಿದ್ಯಾ ಲಯ ಭಾರತೀಯ ವಿದ್ಯಾ ಸಂಸ್ಥೆ (ಐಐಎಸ್‌ಸಿ)ಯ ಇ-ಮೇಲ್ ವಿಳಾಸಕ್ಕೆ ಕಿಡಿಗೇಡಿಗಳು ಬಾಂಬ್ ಇರಿಸಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ 70ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಈಗ ಅಂತಹದ್ದೇ ಮತ್ತೂಂದು ಪ್ರಕರಣ ವರದಿಯಾಗಿದೆ. ಜ.28ರಂದು ಬೆಳಗ್ಗೆ 7.37ಕ್ಕೆ ಕೇಂದ್ರೀಯ ವಿದ್ಯಾಲಯದ ಅಧಿಕೃತ ಇ-ಮೇಲ್ principal.kviiscgmail.com ಗೆ sahukarisrinivasa rao65gmail.com ಎಂಬ ಇ-ಮೇಲ್‌ನಿಂದ ʼin your school one bomb is their it will blast tomorrow morning 10.20′ ಎಂಬ ಬೆದರಿಕೆ ಸಂದೇಶ ಬಂದಿದೆ.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ರಾದ ಎನ್.ವೈ.ಅಮೃತಬಾಲ ಎಂದಿನಂತೆ ಇ- ಮೇಲ್ ಪರಿಶೀಲನೆ ವೇಳೆ ಬೆದರಿಕೆ ಇ-ಮೇಲ್ ಸಂದೇಶ ನೋಡಿದ್ದಾರೆ. ಕೂಡಲೇ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂದು ಭಾನುವಾರ ರಜೆ ಇದ್ದ ಕಾರಣ ಶಾಲೆಗೆ ಮಕ್ಕಳು ಬಂದಿರಲಿಲ್ಲ. ತಕ್ಷಣ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಪೊಲೀಸರು, ಕೇಂದ್ರೀಯ ವಿದ್ಯಾಲಯಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಪತ್ತೆ ಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಎಂಬುದು ಖಚಿತವಾಗಿದೆ . ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು,ಇ-ಮೇಲ್ ವಿಳಾಸದ ಜಾಡು ಹಿಡಿಯಲು ಸೈಬರ್ ಕ್ರೈಂ ತಜ್ಞರ ಸಹಕಾರ ಕೋರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಳೆದ ವರ್ಷ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದ 70ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಈ ವೇಳೆ ತನಿಖೆ ಕೈಗೊಂಡ ಪೊಲೀಸರಿಗೆ ಕಿಡಿಗೇಡಿಗಳು ವಿಪಿಎನ್ ನೆಟ್ ವರ್ಕ್ ಬಳಸಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿತ್ತು.