Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ ; ಕನ್ನಡದಲ್ಲಿ ಸಂದೇಶ –ಕರೆ; ಆರೋಪಿಯ ಬಂಧನ

03:56 AM Aug 20, 2020 | Hari Prasad |

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಬುಧವಾರ ಅಪರಾಹ್ನ ಎಸ್‌ಎಂಎಸ್‌ ಕಳುಹಿಸಿದ ಬಳಿಕ ಕರೆ ಮಾಡಿದ್ದು, ಸಂಪೂರ್ಣ ತಪಾಸಣೆಯ ಬಳಿಕ ಇದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ ಹಾಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್‌. ವಾಸುದೇವ ಅವರಿಗೆ ಈ ಕರೆ ಬಂದಿದ್ದು, ಅವರು ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ನಿಲ್ದಾಣದ ಸಿಐಎಸ್‌ಎಫ್‌ ಸಿಬಂದಿ ಮತ್ತು ಪೊಲೀಸರು ಇಡೀ ನಿಲ್ದಾಣ ಪೂರ್ತಿ ತಪಾಸಣೆ ನಡೆಸಿದ್ದಾರೆ. ಎಲ್ಲೂ ಬಾಂಬ್‌ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಕರೆ ಎನ್ನುವ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದು, ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡದಲ್ಲಿ ಸಂದೇಶ ಕಳಿಸಿದ್ದ !
ಎಂ.ಆರ್‌. ವಾಸುದೇವ ಅವರ ಮೊಬೈಲ್‌ಗೆ ಅಪರಾಹ್ನ 12.44ಕ್ಕೆ ಎಸ್‌ಎಂಎಸ್‌ ಬಂದಿತ್ತು. ‘ಏರ್‌ಪೋರ್ಟ್‌ನಲ್ಲಿ ಬಾಂಬ್‌ ಇದೆ’ ಎಂದು ಆಂಗ್ಲ ಲಿಪಿಯಲ್ಲಿ ಕನ್ನಡದಲ್ಲೇ ಸಂದೇಶ ಕಳಿಸಿದ್ದ ಕಿಡಿಗೇಡಿ, ಮತ್ತೆ ಅದೇ ಸಂದೇಶವನ್ನು 12.51ಕ್ಕೆ ಕಳುಹಿಸಿದ್ದ. ಸಂದೇಶ ನೋಡಿದ ವಾಸುದೇವ ಅವರು ವಾಪಸ್‌ ಆ ಸಂಖ್ಯೆಗೆ ಕರೆ ಮಾಡಬೇಕೆನ್ನುವಷ್ಟರಲ್ಲಿ ಸುಮಾರು 1 ಗಂಟೆ ವೇಳೆಗೆ ಅದೇ ಸಂಖ್ಯೆಯಿಂದ ಕರೆ ಬಂದಿತ್ತು.

‘ನನಗೆ ಕರೆ ಮಾಡಿದ ವ್ಯಕ್ತಿ ಕನ್ನಡದಲ್ಲೇ ಮಾತನಾಡಿದ್ದು, ಇದು ಏರ್‌ಪೋರ್ಟಾ ಎಂದು ಪ್ರಶ್ನಿಸಿದ್ದ. ಅಲ್ಲ ಎಂದೆ. ಹಾಗಾದರೆ ಫೋನ್‌ ಇಡು ಎಂದು ಏಕವಚನದಲ್ಲಿ ಸಿಡುಕಿನ ಉತ್ತರ ನೀಡಿ ಕರೆ ಕಡಿತ ಮಾಡಿದ್ದ. ತತ್‌ಕ್ಷಣ ನಿಲ್ದಾಣದ ನಿರ್ದೇಶಕರಿಗೆ ಮಾಹಿತಿ ನೀಡಿದೆ. ಪೊಲೀಸ್‌ ಅಧಿಕಾರಿಗಳು ನನ್ನಿಂದ ಸಂಪೂರ್ಣ ಮಾಹಿತಿ ಪಡೆದರು. ಆ ಸಂಖ್ಯೆಯನ್ನೂ ಅವರಿಗೆ ನೀಡಿದ್ದೇನೆ’ ಎಂದು ಎಂ.ಆರ್‌. ವಾಸುದೇವ ಅವರು ಉದಯವಾಣಿಗೆ ತಿಳಿಸಿದರು.
ಇದೇ ವರ್ಷ ಜನವರಿ 20ರಂದು ಆದಿತ್ಯ ರಾವ್‌ ಎಂಬಾತ ಮಂಗಳೂರು ವಿಮಾನ ನಿಲ್ದಾಣದ ಹೊರಗಡೆ ಬಾಂಬ್‌ ಇರಿಸಿದ್ದು ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಸಕಲ ಭದ್ರತಾ ಕ್ರಮಗಳನ್ನು ಕೈಗೊಂಡು ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸಲಾಗಿತ್ತು.

ಕರೆ ಬಂದದ್ದು ನಿಜ
ಈ ಕುರಿತು ಪ್ರತಿಕ್ರಿಯಿಸಿದ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌, “ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಕರೆ ಬಂದಿದ್ದು ನಿಜ. ಕೂಡಲೇ ಎಲ್ಲ ಬಗೆಯ ತಪಾಸಣೆ ಕೈಗೊಂಡಿದ್ದೇವೆ. ಎಲ್ಲೂ ಬಾಂಬ್‌ ಇರುವುದು ಪತ್ತೆಯಾಗಿಲ್ಲ. ಇದೊಂದು ಹುಸಿ ಕರೆಯಾಗಿತ್ತು. ಈ ಬಗ್ಗೆ ಪೊಲೀಸರು ಮುಂದಿನ ಕ್ರಮ ಜರಗಿಸಲಿದ್ದಾರೆೆ’ ಎಂದು ತಿಳಿಸಿದ್ದಾರೆ.

Advertisement

ಓರ್ವನ ಬಂಧನ
ಪ್ರಕರಣದ ಕುರಿತಂತೆ ಈಗಾಗಲೇ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನ ಬಳಿ ಇರುವ ಮೊಬೈಲ್‌ ಫೋನ್‌, ಎಸ್‌ಎಂಎಸ್‌ ಕಳುಹಿಸಿದ ಮತ್ತು ಕರೆ ಬಂದ ಮೊಬೈಲ್‌ ಫೋನ್‌ನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅದರ ವಿಳಾಸ, ಸತ್ಯಾಸತ್ಯತೆ ಮತ್ತಿತರ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್‌ ಆಯುಕ್ತ ವಿಕಾಶ್‌ ಕುಮಾರ್‌ ಅವರು ಉದಯವಾಣಿಗೆ ತಿಳಿಸಿದ್ದಾರೆ.
ತನಿಖೆ ನಡೆಯುತ್ತಿರುವುದರಿಂದ ಆತನ ಬಗ್ಗೆ ಹೆಚ್ಚಿನ ವಿವರಗಳನ್ನು ಈಗ ಬಹಿರಂಗಪಡಿಸಲಾಗುತ್ತಿಲ್ಲ. ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next