ಆಗ್ರಾ:ವಿಶ್ವವಿಖ್ಯಾತ ಐತಿಹಾಸಿಕ ತಾಜ್ ಮಹಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಗುರುವಾರ(ಮಾರ್ಚ್ 04)ಹಲವಾರು ಪ್ರವಾಸಿಗರನ್ನು ಕೂಡಲೇ ತಾಜ್ ಮಹಲ್ ನಿಂದ ಹೊರ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…
ವರದಿಗಳ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಐತಿಹಾಸಿಕ ತಾಜ್ ಮಹಲ್ ನೊಳಗೆ ಬಾಂಬ್ ಇಟ್ಟಿರುವುದಾಗಿ ತಿಳಿಸಿರುವುದಾಗಿ ಹೇಳಿದೆ.
ಬಾಂಬ್ ಬೆದರಿಕೆ ಕರೆಯ ಗಂಭೀರತೆ ಪರಿಶೀಲಿಸಲು ಆಗ್ರಾ ಪೊಲೀಸ್ ತಂಡ ಮತ್ತು ಸಿಐಎಸ್ ಎಫ್ ಕೂಡಲೇ ತಾಜ್ ಮಹಲ್ ಆವರಣ ಮತ್ತು ತಾಜ್ ಮಹಲ್ ನೊಳಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿತ್ತು. ಅಲ್ಲದೇ ಈ ಸಂದರ್ಭದಲ್ಲಿ ಪ್ರವಾಸಿಗರನ್ನು ಸುರಕ್ಷತೆ ಹಿನ್ನಲೆಯಲ್ಲಿ ತಾಜ್ ಮಹಲ್ ನಿಂದ ಹೊರ ಕಳುಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಕರೆ ಉತ್ತರಪ್ರದೇಶದ ಫಿರೋಜಾಬಾದ್ ನಿಂದ ಬಂದಿದ್ದು, ಬಾಂಬ್ ಕರೆ ಮಾಡಿದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಆಗ್ರಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿರುವುದಾಗಿ ವರದಿ ತಿಳಿಸಿದೆ. ಆದರೆ ಯಾವುದೇ ಸಂಶಯಾಸ್ಪದ ವಸ್ತುವಾಗಲಿ, ಬಾಂಬ್ ಆಗಲಿ ಪತ್ತೆಯಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಇದೊಂದು ಹುಸಿ ಬಾಂಬ್ ಬೆದರಿಕೆ ಕರೆಯಾಗಿದ್ದು, ಈ ಹಿಂದೆಯೂ ಹಲವು ಬಾರಿ ತಾಜ್ ಮಹಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆಗಳು ಬಂದಿದ್ದವು.