Advertisement

ಉಗ್ರನಿದ್ದ ಮನೆಯಲ್ಲಿ ಬಾಂಬ್‌ ಪತ್ತೆ

01:23 AM Jul 08, 2019 | Team Udayavani |

ಬೆಂಗಳೂರು: ಇತ್ತೀಚೆಗಷ್ಟೇ ದೊಡ್ಡಬಳ್ಳಾಪುರದಲ್ಲಿ ಬಂಧನಕ್ಕೊಳಗಾದ ಜಮಾತ್‌-ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆ ಶಂಕಿತ ಉಗ್ರ ಹಬ್ಬೀಬುರ್‌ ರೆಹಮಾನ್‌ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು, ನಗರದಲ್ಲಿ ವಾಸವಾಗಿದ್ದ ನಗರದ ಹೊರವಲಯದ ಚಿಕ್ಕಬಾಣಾವರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿರುವ ಕೋಲ್ಕತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ರಾಜ್ಯದ ಆಂತರಿಕ ಭದ್ರತಾ ವಿಭಾಗ ಅಧಿಕಾರಿಗಳು, ಜೀವಂತ ಬಾಂಬ್‌ಗಳು ಹಾಗೂ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಸ್ಥಳೀಯ ನಿವಾಸಿ ಮೊಹಮ್ಮದ್‌ ಮುಸ್ತಾಫ್ ಎಂಬವರಿಗೆ ಸೇರಿದ ಮನೆ ಮೇಲೆ ಭಾನುವಾರ ಸಂಜೆ 6.30ರ ಸುಮಾರಿಗೆ ದಾಳಿ ನಡೆಸಿದ ತನಿಖಾ ಸಂಸ್ಥೆ ಅಧಿಕಾರಿಗಳು, ತಡರಾತ್ರಿವರೆಗೂ ಪರಿಶೀಲನೆ ನಡೆಸಿವೆ. ಈ ವೇಳೆ ಎಂಟಕ್ಕೂ ಹೆಚ್ಚು ಜೀವಂತ ಬಾಂಬ್‌ಗಳು ಪತ್ತೆಯಾಗಿದ್ದು, ಈ ಪೈಕಿ ಆರು ಬಾಂಬ್‌ಗಳು ಟಿಫಿನ್‌ ಬಾಕ್ಸ್‌ಗಳಲ್ಲಿ ಸಿಕ್ಕಿವೆ. ಹಾಗೆಯೇ ಅಪಾರ ಪ್ರಮಾಣದಲ್ಲಿ ಬಾಂಬ್‌ಗಳನ್ನು ತಯಾರು ಮಾಡಲು ಬಳಸುವ ಕಚ್ಚಾ ಸ್ಫೋಟಕ ವಸ್ತುಗಳು ದೊರೆತಿವೆ. ಎರಡು ಪಿಸ್ತೂಲ್‌ ಕೂಡ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಐದು ವರ್ಷಗಳ ಹಿಂದೆ (2014) ಪಶ್ಚಿಮ ಬಂಗಾಳದಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಜೆಎಂಬಿಯ ಕೆಲ ಶಂಕಿತ ಉಗ್ರರು ಕರ್ನಾಟಕಕ್ಕೆ ಬಂದಿದ್ದು, ರಾಜ್ಯದ ವಿವಿಧೆಡೆ ವಾಸವಾಗಿದ್ದರು. ಈ ಪೈಕಿ 2018ರಲ್ಲಿ ಬೆಂಗಳೂರು ಹಾಗೂ ಕೋಲ್ಕತಾ ಎನ್‌ಐಎ ಅಧಿಕಾರಿಗಳ ವಿಶೇಷ ಕಾರ್ಯಾಚರಣೆಯಲ್ಲಿ ಕೌಸರ್‌ ಮತ್ತು ಆದಿಲ್‌ ಅಲಿಯಾಸ್‌ ಅಸಾದುಲ್ಲಾನನ್ನು ಬಂಧಿಸಿದ್ದರು. ಈ ವೇಳೆ ಆರೋಪಿ ಕೌಸರ್‌, ರಾಜ್ಯದಲ್ಲಿ ಇತರೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದ.

ಈ ಹಿನ್ನೆಲೆಯಲ್ಲಿ ಜುಲೈ 25ರಂದು ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಮತ್ತು ಕೋಲ್ಕತಾ ಎನ್‌ಐಎ ಅಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಹಬ್ಬೀಬುರ್‌ ರೆಹಮಾನ್‌ನನ್ನು ಬಂಧಿಸಿ, ಬಾಡಿ ವಾರೆಂಟ್‌ ಪಡೆದು ಕರೆದೊಯ್ದಿದ್ದರು. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ತಾನು ಚಿಕ್ಕಬಾಣವಾರ ಹಾಗೂ ನಗರದ ಇತೆರೆಡೆ ವಾಸವಿದ್ದ ಬಗ್ಗೆ ಹಬ್ಬೀಬುರ್‌ ಹೇಳಿಕೆ ನೀಡಿದ್ದ. ಈ ಆಧಾರದ ಮೇಲೆ ಚಿಕ್ಕಬಾಣವಾರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆತಂಕಗೊಂಡ ಸಾರ್ವಜನಿಕರು: ಚಿಕ್ಕಬಾಣವಾರ ರೈಲು ನಿಲ್ದಾಣ ರಸ್ತೆಯಲ್ಲಿ ಭಾನುವಾರ ಸಂಜೆ ಆತಂಕ ಮನೆ ಮಾಡಿತ್ತು. ಏಕಾಏಕಿ ಐದಾರು ಪೊಲೀಸ್‌ ವಾಹನಗಳಲ್ಲಿ ಬಂದ ತನಿಖಾ ಸಂಸ್ಥೆಯ ಅಧಿಕಾರಿಗಳು ಉಗ್ರ ವಾಸವಿದ್ದ ಎನ್ನಲಾದ ಮನೆಗೆ ನುಗ್ಗಿ ಅಪಾರ ಪ್ರಮಾಣದ ಬಾಂಬ್‌ ಸ್ಫೋಟಗಳನ್ನು ವಶಪಡಿಸಿಕೊಂಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

Advertisement

ಮನೆಯೇ ಬಾಂಬ್‌ ತಯಾರಿಕೆ ಕಾರ್ಖಾನೆ!: ಕೆಲ ವರ್ಷಗಳ ಹಿಂದೆ ಚಿಕ್ಕಬಾಣವಾರಕ್ಕೆ ಬಂದಿದ್ದ ಹಬ್ಬೀಬುರ್‌ ಹಾಗೂ ಇತರೆ ಮೂವರು ಶಂಕಿತ ಉಗ್ರರು, ಮುಸ್ತಾಫ್ ಎಂಬವರ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿಯೇ ಕಚ್ಚಾ ಸ್ಫೋಟಕ ವಸ್ತುಗಳನ್ನು ತಂದು ಬಾಂಬ್‌ಗಳನ್ನು ತಯಾರು ಮಾಡಿದ್ದರು. ಈ ಮಧ್ಯೆ ಕೆಲ ತಿಂಗಳ ಹಿಂದಷ್ಟೇ ನಾಲ್ವರೂ ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದರು.

ಈ ಪೈಕಿ ಹಬ್ಬೀಬುರ್‌ ಪರಿಚಯಸ್ಥರೊಬ್ಬರ ಸಹಾಯದ ಮೇರೆಗೆ ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದ. ಇತರೆ ಮೂವರ ಪೈಕಿ ಕೌಸರ್‌ ಮತ್ತು ಅಸಾದುಲ್ಲಾ ಎಂದು ಹೇಳಲಾಗಿದೆ. ಇನ್ನುಳಿದ ಒಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದಾಳಿ ಸಂದರ್ಭದಲ್ಲಿ ಮನೆಯಲ್ಲೇ ಬಾಂಬ್‌ಗಳನ್ನು ತಯಾರು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ, ಹೊರರಾಜ್ಯದಲ್ಲಿ ಸ್ಫೋಟಿಸಲು ಸಂಚು: ಶಂಕಿತ ಉಗ್ರರು ನಗರದಲ್ಲಿಯೇ ಬಾಂಬ್‌ಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆದರೆ, ನಿರ್ದಿಷ್ಟ ಸ್ಥಳಗಳು ಯಾವುದು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮನೆಯಲ್ಲಿ ಸಿಕ್ಕಿರುವ ಜೀವಂತ ಬಾಂಬ್‌ಗಳು ಹಾಗೂ ಸ್ಫೋಟಕ ಸಾಮಾಗ್ರಿಗಳು ಭಾರೀ ಪ್ರಮಾಣದಲ್ಲಿರುವುದಿಂದ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next