ಶೃಂಗೇರಿ: ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪತ್ತೆ ಪ್ರಕರಣ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಅಣಕು ಪ್ರದರ್ಶನದಂತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶ್ರೀ ಶಾರದಾ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜ.20ರ ಘಟನೆ ಮಂಗಳೂರಿನಲ್ಲೇ ಏಕೆ ಆಗಬೇಕು? ಇದು ಸಂಶಯ ಉಂಟು ಮಾಡುತ್ತಿದೆ. ಇಡೀ ಘಟನೆ ಗಣರಾಜ್ಯೋತ್ಸವದ ಸಂದರ್ಭ ದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಅಣಕು ಪ್ರದರ್ಶನದಂತಿದೆ. ಇದರ ಸತ್ಯಾಸತ್ಯತೆ ಯನ್ನು ಜನರೆದುರು ಬಹಿರಂಗಪಡಿಸಬೇಕು ಎಂದರು.
ಬಾಂಬ್ ನಿಷ್ಕ್ರಿಯಗೊಳಿಸಲು ಬೆಳಗ್ಗೆಯಿಂದ ಸಂಜೆವರೆಗೂ ಯಾವುದೋ ಕಂಟೈನರ್‌ನಲ್ಲಿ ಹಾಕಿ ಹರ ಸಾಹಸ ಮಾಡಿದ್ದು, ಆಮೇಲೆ ಅದನ್ನು ಸ್ಫೋಟಿಸಿದಾಗ ಅಲ್ಲಿ ಬರೀ ಹೊಗೆ ಕಂಡಿದ್ದು, ಇವೆಲ್ಲ ಅನುಮಾನ ಮೂಡಿಸುತ್ತಿದೆ. ಈ ರೀತಿ ಮಾಡಿ ಜನರನ್ನು ಭಯಭೀತರನ್ನಾಗಿಸಲಾಗಿದೆ. ಇಲ್ಲಿ ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ. ಅನಾಹುತ ಮಾಡುವ ಉದ್ದೇಶ ಕಾಣುತ್ತಿಲ್ಲ. ಇದೊಂದು ರೀತಿ ಹುಡುಗಾಟ ಆಡಿದ್ದಾರೋ ಎಂಬ ಭಾವನೆ ಮೂಡಿಸುತ್ತಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ವಾಮಮಾರ್ಗದ ಮೂಲಕ ಅಧಿ ಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ನಾಡಿನಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಇಂತಹ ಘಟನೆ ಗಳನ್ನೆಲ್ಲ ಗಮನಿಸಿದಾಗ ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ್ಕಾರವೋ ಎಂಬಂತಾ ಗಿದ್ದು, ಎಲ್ಲಿಂದಲೋ ಸೂಚನೆ ಬರುತ್ತಿದೆ ಎಂಬ ಅನುಮಾನ ಇದೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ 14 ತಿಂಗಳ ಅವಧಿಯಲ್ಲಿ ಯಾವ ಜಿಹಾದ್, ಯಾವ ಉಗ್ರಗಾಮಿಯನ್ನೂ ನೋಡಲಿಲ್ಲ. ಯಾವುದೋ ಲಾಭಕ್ಕಾಗಿ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ನಾಟಕವಾಡುತ್ತಿದೆ. ಮಂಗಳೂರು ಕಮಿಷನರ್ ಹರ್ಷ ಇಂದು ಎಲ್ಲಿಯಾದರೂ ಬಾಂಬ್ ಹಾಕಿದ್ದಾರಾ ಎಂದು ವ್ಯಂಗ್ಯವಾಡಿದರು.
ಹಿಂದೂಗಳಲ್ಲಿ ಯಾರೂ ಟೆರರಿಸ್ಟ್ ಇಲ್ಲ. ಹಿಂದೂ ಟೆರರಿಸಂ ಅನ್ನುವ ಪದವನ್ನೇ ನಾನು ಕೇಳಿಲ್ಲ. ಟೆರರಿಸ್ಟ್ ಅಂದರೆ ಪಾಕಿಸ್ತಾನ ದಿಂದ ಬಂದವರು ಅಂತಾ ಅಂದುಕೊಂಡಿದ್ದೇನೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು. ತನಿಖಾ ಹಂತದಲ್ಲಿ ಒಂದೊಂದು ರೀತಿಯ ಹೇಳಿಕೆ ನೀಡುವುದು ಸರಿಯಲ್ಲ.
-ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಪ್ರಕರಣ ಭಯ ಹುಟ್ಟಿಸುವ ಘಟನೆಯಾಗಿದೆ. ಇದರಲ್ಲಿ ರಾಜ್ಯದ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತದೆ. ಪ್ರಕರಣದ ಹಿಂದೆ ಯಾರಿದ್ದಾರೆ?, ಯಾರ ಕೈವಾಡ ಇದೆ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು.
-ಸಿದ್ದರಾಮಯ್ಯ, ಮಾಜಿ ಸಿಎಂ