Advertisement

ವಿಜಯಪುರದಲ್ಲಿ “ಬಾಂಬ್‌’ಘರ್ಷಣೆ

06:00 AM Jun 18, 2018 | Team Udayavani |

ವಿಜಯಪುರ: ಹರಿಣ ಶಿಕಾರಿ ಸಮುದಾಯಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಾನುವಾರ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಕಚ್ಚಾ ಬಾಂಬ್‌, ಪೆಟ್ರೋಲ್‌ ಬಾಂಬ್‌ ಸೇರಿ ಹಲವು ಮಾರಕಾಸ್ತ್ರ ಬಳಸಿದ್ದು, 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಭಾಯಿಸಿರುವ ಪೊಲೀಸರು, 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಇರುವ ಕಾರಣ ಡಿಎಆರ್‌ ಪಡೆ ನಿಯೋಜನೆಗೊಂಡಿದೆ.

Advertisement

ರವಿವಾರ ನಗರದ ಹರಿಣ ಶಿಕಾರಿ ಕಾಲೋನಿಯಲ್ಲಿ ದ್ವಿಚಕ್ರ ವಾಹನ ವ್ಯಕ್ತಿಯೊಬ್ಬರಿಗೆ ತಗುಲಿಸಿದ್ದಲ್ಲದೇ ಹಲ್ಲೆ ನಡೆಸಿದ್ದೇ ಇಡೀ ಘಟನೆಗೆ ಕಾರಣ ಎನ್ನಲಾಗಿದೆ. ಆದರೆ ವಾಸ್ತವಿಕವಾಗಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಹಾಕಿದ ರಾಜಕೀಯ ದ್ವೇಷಕ್ಕೆ ನಡೆದ ಘಟನೆ ಎಂದು ಸ್ಥಳೀಯರು ಹೇಳುತ್ತಾರೆ. ಹರಿಣ ಶಿಕಾರಿ ಕಾಲೋನಿಯ ಹರಿಣ ಶಿಕಾರಿ ಸಮುದಾಯದವರಾದ ನಾರಾಯಣ ರಾಠೊಡ, ದೀಪಕ ಕಾಳೆ, ಹೊಸಗೌಡ, ರವಿ ಬಲರಾಮ ಕಾಳೆ ಹಾಗೂ ನಗರಸಭೆ ಮಾಜಿ ಸದಸ್ಯೆ ಮಂಗಳಾದೇವಿ ಚವ್ಹಾಣ, ಅಪ್ಪು ಅವರೊಂದಿಗೆ ಗುಂಪು ಘರ್ಷಣೆ ನಡೆದಿದೆ.

ಗಲಾಟೆ ಮಾತಿನ ಚಕಮಕಿ, ಹಲ್ಲೆ ಹಂತ ದಾಟುತ್ತಲೇ ಕಲ್ಲು-ಇಟ್ಟಿಗೆ ತೂರಾಟ ನಡೆದಿದೆ. ಅಷ್ಟೇ ಅಲ್ಲ, ಬಡಿಗೆಗಳಿಂದ ಹೊಡೆದಾಡಿಕೊಂಡು, ಕೈ ಬಾಂಬ್‌ಗಳನ್ನೂ ಪರಸ್ಪರ ಎಸೆದುಕೊಂಡಿದ್ದಾರೆ. ಪೆಟ್ರೋಲ್‌ ಬಾಂಬ್‌ ಬಳಸಿ ಜೋಪಡಿಗಳನ್ನು ಸುಡುವ ಯತ್ನ ನಡೆದಿದೆ. ಅಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಎಸ್ಪಿ ಅಶೋಕ್‌ ನೇತೃತ್ವದ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಘರ್ಷಣೆಯಲ್ಲಿ ಸುಮಾರು 25 ಜನರಿಗೆ ಗಾಯಗಳಾಗಿದ್ದು, ನಗರದ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಪೊಲೀಸರು ಹಲವು ಮನೆಗಳನ್ನು ಶೋಧಿ ಸಿದ್ದು, ಸಾಕಷ್ಟು ಮಾರಕಾಸ್ತ್ರಗಳು ಸಿಕ್ಕಿವೆ ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಡಿಎಆರ್‌ ಪೊಲೀಸರನ್ನು ಭದ್ರೆತೆಗೆ ನಿಯೋಜಿಸಲಾಗಿದೆ. ಘಟನೆ ಕುರಿತು ಗೋಲಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಕಾರಣ ಏನು?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಗಳಾದೇವಿ ಗುಂಪು ಮನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರಿಂದ ಬಸನಗೌಡ ಯತ್ನಾಳ ಪರ ಕೆಲಸ ಮಾಡಿದ್ದು, ನಾರಾಯಣ ರಾಠೊಡ, ದೀಪಕ ಕಾಳೆ ಅವರ ಗುಂಪು ಕಾಲೋನಿಯಲ್ಲಿ ಗುಡಿ ನಿಮಾರ್ಣಕ್ಕೆ ಭರವಸೆ ನೀಡಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿ ಹಮೀದ್‌ ಮುಶ್ರೀಫ್‌ ಪರ ಕೆಲಸ ಮಾಡಿದೆ. ಹೀಗಾಗಿ ಎರಡೂ ಗುಂಪುಗಳ ಮಧ್ಯೆ ಇದ್ದ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಬೈಕ್‌ ತಾಗಿದ ನೆಪ ಮಾಡಿಕೊಂಡು ಹೊಡೆದಾಟ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next