ಇತ್ತೀಚೆಗಷ್ಟೇ ಕೋಮಲ್ ಹಾಗೂ ಯೋಗಿ ಅಭಿನಯದ “ಕೆಂಪೇಗೌಡ 2′ ಚಿತ್ರದ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿತ್ತು. ಈಗ ನೀನಾಸಂ ಸತೀಶ್ ಅಭಿನಯದ “ಗೋದ್ರಾ’ ಚಿತ್ರದಲ್ಲೊಂದು ಅವಘಡ ನಡೆದಿದೆ. ಹೌದು, ಸೋಮವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಂದೀಶ್ ನಿರ್ದೇಶನದ “ಗೋದ್ರಾ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅದು ಕ್ಲೈಮ್ಯಾಕ್ಸ್ ಫೈಟ್‌ನ ದೃಶ್ಯ. ಸಾಹಸ ನಿರ್ದೇಶಕ ವಿನೋದ್ ಬಾಂಬ್ ಬ್ಲಾಸ್ಟ್ ದೃಶ್ಯವನ್ನು ಸಂಯೋಜಿಸುತ್ತಿದ್ದರು.
ಆಗ ಬಾಂಬ್ ಬ್ಲಾಸ್ಟ್ ಆಗಿ, ಜೀಪಿನ ಗಾಜುಗಳು ನೀನಾಸಂ ಸತೀಶ್ ಅವರ ಹೊಟ್ಟೆಯ ಬಲಭಾಗಕ್ಕೆ ಚುಚ್ಚಿಕೊಂಡು ಗಾಯಗಳಾಗಿವೆ. ಅ ಘಟನೆಯಲ್ಲಿ ಗಾಯಗೊಂಡ ಸತೀಶ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆ ಘಟನೆಯಿಂದ ಸತೀಶ್‌ಗೆ ಮೂರು ಹೊಲಿಗೆ ಬಿದ್ದಿದ್ದು, ವೈದ್ಯರು 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಈ ಘಟನೆ ಕುರಿತು “ಉದಯವಾಣಿ’ ಜತೆ ಮಾತನಾಡಿದ ನೀನಾಸಂ ಸತೀಶ್, “ಈಗಾಗಲೇ “ಗೋದ್ರಾ’ ಹತ್ತು ದಿನಗಳ ಕಾಲ ಚಿತ್ರೀಕರಣವಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸಲಾಗಿತ್ತು. ಫೈಟ್ ಸೀನ್ ಆಗಿದ್ದರಿಂದ ಸುಮಾರು 20 ವರ್ಷ ಹಳೆಯ ಜೀಪ್‌ವೊಂದನ್ನು ಬಳಸಲಾಗಿತ್ತು. ಶೂಟಿಂಗ್ ವೇಳೆ ಬಾಂಬ್ ಬ್ಲಾಸ್ಟ್ ಮಾಡಿದಾಗ, ಅದು ರಿವರ್ಸ್ ಆಗಿ, ಜೀಪ್‌ನ ಗ್ಲಾಸ್ ಚೂರಾಗಿ ಹೊಟ್ಟೆಯ ಬಲಭಾಗಕ್ಕೆ ಚುಚ್ಚಿ, ಗಾಯವಾಗಿದೆ.
ನನ್ನ ಅದೃಷ್ಟ ಚೆನ್ನಾಗಿತ್ತು. ದೇಹದ ಬೇರೆ ಕಡೆ ಗ್ಲಾಸಿನ ಚೂರು ಹೋಗಿದ್ದರೆ, ಸಾಕಷ್ಟು ತೊಂದರೆ ಆಗುತ್ತಿತ್ತು. ಆದರೆ, ಹಾಗೆ ಆಗಲಿಲ್ಲ. ಆ ಘಟನೆಯಿಂದ ನನಗೆ ಮೂರು ನಿಮಿಷ ಏನಾಯಿತೆಂದೇ ಗೊತ್ತಾಗಲಿಲ್ಲ. ಆಮೇಲೆ ನೋವು ಕಾಣಿಸಿಕೊಂಡಿತು. ತಕ್ಷಣವೇ, ಘಟನೆಯಿಂದ ಅನಾಹುತ ಆಗಿದೆ ಅಂತ ಗೊತ್ತಾಯ್ತು. ಚಿತ್ರತಂಡದವರೆಲ್ಲರೂ ಓಡಿ ಬಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈಗ ನಾನು ಅರಾಮವಾಗಿದ್ದೇನೆ.
ವೈದ್ಯರು ವಿಶ್ರಾಂತಿ ಹೇಳಿದ್ದಾರೆ. ಆದರೆ, ನೋವು ಕಡಿಮೆ ಆದ ಕೂಡಲೇ ಶೂಟಿಂಗ್‌ಗೆ ಹೋಗ್ತಿನಿ. ಸ್ಟಂಟ್ ಮಾಸ್ಟರ್ ವಿನೋದ್ ಮತ್ತು ಫೈಟರ್ ಎಲ್ಲರೂ ಸೇಫ್ಟಿ ತೆಗೆದುಕೊಂಡಿದ್ದರು. ಡೂಪ್ ಹಾಕೋಣ ಅಂತ ಹೇಳಿದರೂ, ನಾನೇ, ಸೀನ್ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಡೂಪ್ ಬಳಸದೆ ರಿಸ್ಕ್ ತೆಗೆದುಕೊಂಡೆ. ಗ್ರಹಚಾರ ಹೀಗಾಯ್ತು. ಈ ಚಿತ್ರದ ಚಿತ್ರೀಕರಣ ಮುಗಿಸಿದ ನಂತರ ಸೆ.20 ರಿಂದ “ಅಯೋಗ್ಯ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತೇನೆ’ ಎನ್ನುತ್ತಾರೆ ಸತೀಶ್.