ಮುಂಬೈ:ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮ್ಮ ಕಪ್ಪು ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ತಪ್ಪು ಜಾಗದಲ್ಲಿ ನಿಲ್ಲಿಸಿ ಪೋಲಿಸರಿಂದ ಚಲನ್ ಕಟ್ಟಿಸಿಕೊಂಡಿದ್ದೂ ಅಲ್ಲದೇ ಅವರ ಸಿನೆಮಾದ ಡೈಲಾಗ್ ಮೂಲಕವೇ ಪೋಲಿಸರು ಅವರನ್ನು ಟ್ವಿಟರ್‌ನಲ್ಲಿ ಎಚ್ಚರಿಸಿದ ಘಟನೆ ನಡೆದಿದೆ.
ಕಾರ್ತಿಕ್ ಆರ್ಯನ್ ತಮ್ಮ ಹೊಸಾ ಸಿನೆಮಾ ʻಶೆಹಜಾದಾʼ ನಿಮಿತ್ತ ದೇವರ ದರ್ಶನಕ್ಕೆಂದು ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಕಾರನ್ನು ನೋ-ಪಾರ್ಕಿಂಗ್ ಝೋನ್‌ನಲ್ಲಿ ನಿಲ್ಲಿಸಿ ತೆರಳಿದ್ದಾರೆ.
ತಪ್ಪು ಜಾಗದಲ್ಲಿ ತಮ್ಮ ಕಾರು ನಿಲ್ಲಿಸಿದ್ದರ ಪರಿಣಾಮ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದಲ್ಲದೆ ಟ್ರಾಫಿಕ್ ಪೋಲಿಸರು ದಂಡವನ್ನೂ ವಿಧಿಸಿದ್ದಾರೆ.
ಅದೂ ಅಲ್ಲದೇ ಕಾರ್ತಿಕ್ ಅವರ ಕಪ್ಪು ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮುಂಬೈ ಟ್ರಾಫಿಕ್ ಪೋಲಿಸರು ಅದರ ಕೆಳಗೆ ಕಾರ್ತಿಕ್ ಅವರದ್ದೇ ಸಿನೆಮಾದ ಡೈಲಾಗ್ ಒಂದನ್ನು ಬರೆದಿದ್ದಾರೆ.
ಮುಂಬೈ ಟ್ರಾಫಿಕ್ ಪೋಲಿಸ್ ಎಂಬ ಟ್ವಿಟರ್ ಅಕೌಂಟ್‌ನಲ್ಲಿ ಕಾರ್ತಿಕ್ ಕಾರಿನ ಫೋಟೋವನ್ನು ಹಂಚಿಕೊಂಡ ಪೋಲಿಸರು, ʻಸಮಸ್ಯೆ? ಸಮಸ್ಯೆ ಏನೆಂದ್ರೆ ಕಾರನ್ನು ರಾಂಗ್ ಸೈಡ್‌ನಲ್ಲಿ ನಿಲ್ಲಿಸಲಾಗಿದೆ. ʻಶೆಹಜಾದಾಸ್ʼ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ʻಭೂಲ್ʼ ಮಾಡಬೇಡಿʼ ಎಂದು ಬರೆದುಕೊಂಡಿದೆ.
ಫೋಟೋದಲ್ಲಿ ಕಾರಿನ ನಂಬರ್ ಪ್ಲೇಟನ್ನು ಬ್ಲರ್ ಮಾಡಲಾಗಿದೆ. ಪೋಲಿಸರು ಕಾರ್ತಿಕ್ ಅವರಿಗೆ ಎಷ್ಟು ಚಲನ್ ವಿಧಿಸಿದ್ದಾರೆ ಎಂದು ಹೇಳಿಲ್ಲ. ಆದರೆ ತಾವು ಕಾರ್ತಿಕ್ ಅವರ ಸಿನೆಮಾದ ಡೈಲಾಗ್ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಪೋಲಿಸರು ಹೇಳಿದ್ಧಾರೆ.
ಪೋಲಿಸರು ಹೀಗೆ ಬರೆಯುವಾಗ ಕಾರ್ತಿಕ್‌ನ ʻಭೂಲ್ ಬುಲಯ್ಯಾ 2ʼ ಮತ್ತು ʻಶೆಹಜಾದಾʼ ಚಿತ್ರದ ಹೆಸರುಗಳನ್ನು ಪ್ರಸ್ತಾಪಿಸಿದ್ದು ಕಾರ್ತಿಕ್ ಆರ್ಯನ್ ಹೆಸರನ್ನು ಎಲ್ಲೂ ಪ್ರಸ್ತಾಪಿಸಿಲ್ಲ.
ಟ್ರಾಫಿಕ್ ನಿಯಮಗಳನ್ನು ಯಾರು ಪಾಲನೆ ಮಾಡುವುದಿಲ್ಲವೋ, ಅವರು ಯಾರೇ ಆಗಿರಲಿ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:
ಕುತೂಹಲಕ್ಕೆ ತೆರೆ: ಬಹು ಸಮಯದ ಬಳಿಕ ಮೇಘನಾ ರಾಜ್ ಬೆಳ್ಳಿ ತೆರೆಗೆ ಎಂಟ್ರಿ