ಮುಂಬಯಿ: ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಆ್ಯಕ್ಷನ್ ಭರಿತ ಥ್ರಿಲ್ಲರ್ ಬಾಲಿವುಡ್ ಚಿತ್ರ ‘ವಾರ್’ ಬೆಳ್ಳಿತೆರೆಯಲ್ಲಿ ಭರ್ಜರಿ ಹವಾ ಎಬ್ಬಿಸುತ್ತಿದೆ. ಚಿತ್ರ ಬಿಡುಗಡೆಯಾದ ದಿನದಿಂದ ಇದುವರೆಗೆ ಒಟ್ಟಾರೆ 228.50 ಕೋಟಿ ರೂಪಾಯಿಗಳನ್ನು ಈ ಚಿತ್ರ ಬಾಚಿಕೊಂಡಿದ್ದು ಈ ಕಲೆಕ್ಷನ್ ಫೋರ್ಸ್ ಈ ವೀಕೆಂಡ್ ನಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆಯನ್ನು ಸಿನಿ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.
ವಾರ್ ಚಿತ್ರದ ಒಟ್ಟಾರೆ ಕಲೆಕ್ಷನ್ ಬುಧವಾರ 51.60 ಕೋಟಿ ರೂ., ಗುರುವಾರ 23.10 ಕೋಟಿ ರೂ., ಶುಕ್ರವಾರ 21.30 ಕೋಟಿ ರೂ., ಶನಿವಾರ 27.60 ಕೋಟಿ ರೂ., ಆದಿತ್ಯವಾರ 36.10 ಕೋಟಿ ರೂ., ಸೋಮವಾರ 20.60 ಕೋಟಿ ರೂ., ಮಂಗಳವಾರ 27.75 ಕೋಟಿ ರೂ., ಬುಧವಾರ 11.20 ಕೋಟಿ ರೂ., ಗುರುವಾರ 9.25 ಕೋಟಿ ರೂ., ಕಲೆಕ್ಷನ್ ದಾಖಲೆ ಬರೆದಿದೆ.
ಈ ಮೂಲಕ ಬಿಡುಗೆಯಾದ ವಾರದಲ್ಲೇ 200 ಕೋಟಿ ಸಂಗ್ರಹದ ದಾಖಲೆಯನ್ನೂ ಸಹ ‘ವಾರ್’ ತನ್ನದಾಗಿಸಿಕೊಂಡಿದೆ. ಇನ್ನು 2019ರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಯನ್ನೂ ಸಹ ವಾರ್ ತನ್ನ ಹೆಸರಿಗೆ ಬರೆಸಿಕೊಂಡಿದೆ.
ವಾರ್ ಕೇವಲ 9 ದಿನಗಳಲ್ಲಿ 238.35 ಕೋಟಿ ರೂ. ಸಂಗ್ರಹ ಮಾಡಿದ್ದರೆ, ಭಾರತ್ 9 ದಿನಗಳಲ್ಲಿ 180.05 ರೂ. ಸಂಗ್ರಹ ಮಾಡಿದೆ. ಇನ್ನು ಕಬೀರ್ ಸಿಂಗ್ ಒಂದು ವಾರದಲ್ಲಿ 134.42 ಕೋಟಿ ರೂ. ಸಂಗ್ರಹ ಮಾಡಿದ್ದರೆ, ಮಿಷನ್ ಮಂಗಲ್ 8 ದಿನದಲ್ಲಿ 128.16 ಕೋಟಿ ರೂ. ಬಾಚಿಕೊಂಡಿತ್ತು, ಪ್ರಭಾಸ್ ಅಭಿನಯದ ಸಾಹೋ (ಹಿಂದಿ ಅವತರಣಿಕೆ) 7 ದಿನಗಳಲ್ಲಿ 116.03 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು.
ಯಶ್ ರಾಜ್ ಬ್ಯಾನರ್ ನಡಿಯಲ್ಲಿ ತಯಾರಾಗಿರುವ ವಾರ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಾರ್ ಚಿತ್ರವು ಅಕ್ಟೋಬರ್ 02 ರಂದು ಬಿಡುಗಡೆಗೊಂಡಿತ್ತು.